ಗಾಲವನ ಗಲ್ಲದ ಮೇಲಿನ ದೃಷ್ಟಿ ಮಚ್ಚೆ ನಾನು.......

ಕನಸಿನಿಂದಾಚೆ ನಟ್ಟಿರುಳಲ್ಲಿ ಗರಿಬಿಚ್ಚಿ ಹಾರಿದ
ನನ್ನ ಮನಸಿಗೆ....ನಿನ್ನೆದೆಯಲ್ಲೆ ಗೂಡು ಕಟ್ಟುವ ಹಂಬಲ...
ನನ್ನೆದೆಯನ್ನಿರಿದ ನಿನ್ನ ಚೂಪು ನೋಟಗಳೆಲ್ಲ
ಹೃದಯದ ಆಳಕ್ಕಿಳಿದು ನನ್ನ ಕೊಂದರೂ
ನಾನಿನ್ನೂ ಬದುಕಿಯೆ ಇದ್ದೇನೆ!,
ಉಸಿರಿನ ಪ್ರತಿ ಆವರ್ತಕ್ಕೆ
ನಿನ್ನ ನೆನಪಿನ ಅಂತರವಿದೆ....
ಪ್ರತಿ ಕ್ಷಣವೂ ಬಾಳಲೇ ಬೇಕೆಂಬ ಭರವಸೆಗೆ
ಅಷ್ಟು ಸಾಕು/
ಕರಿಮೋಡ ನೆನ್ನೆಯಂತೆ ಇಂದೂ
ಸಂತಸದ ಹನಿಗಳಾಗಿ ಧರೆ ಮುಟ್ಟಲಿದೆ....
ಮತ್ತೆ ಭರವಸೆಯ ಹಸಿರ ಹೊಸ ಗರಿಕೆ
ಸಂಭ್ರಮದಿಂದ ಹುಟ್ಟಲಿದೆ,
ಅಪರೂಪಕ್ಕೆ ಬಂದ ಮಳೆಗೆ ರಂಗಾದದ್ದು
ಇಳೆಯಷ್ಟೇ ಅಲ್ಲ
ನಾನು.... ಜೊತೆಗೆ ನನ್ನೊಳಗೆ ಬೆಚ್ಚಗಿದ್ದ ನಿನ್ನ ನೆನಪುಗಳೂ ಕೂಡ//



ಇರುಳಿಡೀ ನಿನ್ನ ನೆನೆಯುತ್ತಿದ್ದೆ
ಹಗಲಲ್ಲೂ ನಿನ್ನ ನೆನಪಿನಲ್ಲಿ ಕ್ಷಣ ಮಾತ್ರವೂ ನಾನು ಸುಳಿದಿರಲಾರೆ
ಎನ್ನುವ ಖಚಿತ ಅರಿವಿದ್ದರೂನೂ...
ಎಲ್ಲೆಲ್ಲೋ ಅಲ್ಲ ಇಂದು ನಮ್ಮೂರಲ್ಲೂ ಮಳೆಯಿದೆ
ಆದರೆ ನನ್ನ ಕಣ್ಣಲ್ಲಿರುವ ಹನಿ ಮಾತ್ರ ಕೇವಲ ನನ್ನ ಸ್ವಂತದ್ದು,
ನೆನೆಯುತ್ತಾ ಮಳೆಯಲ್ಲಿ ನಿನ್ನನೆ ಮನಸಲ್ಲೂ ನೆನೆಯುತ್ತಿರುವಾಗ
ಕಾಲ ಇದ್ದಕ್ಕಿದ್ದಂತೆ ನಿಂತರೆ ಅದೆಷ್ಟು ಚೆಂದ!/
ಸದ್ದಿಲ್ಲದೂರಿಗೆ ಓಡಿ ಹೋಗ ಬೇಕೆನ್ನುವ ಅನುಗಾಲದ ಆಸೆ ನನಗೆ
ನಿನ್ನ ಹೆಜ್ಜೆ ಸದ್ದನ್ನುಳಿದು ಇನ್ನೇನನ್ನೂ ಕೇಳದಂತೆ ಕಿವುಡನಾದ ಮೇಲೆ....
ಅದಾಗೆಯೆ ಇದ್ದಲ್ಲಿಯೆ ಈಡೇರಿಹೋಗಿದೆ,
ಕನಸಿಗೂ ನನಸಿಗೂ ಒಂದೇ ಒಂದು ಅಕ್ಷರದ ಅಂತರ
ಅಂದುಕೊಳ್ಳುತ್ತಿದ್ದೆ ಆಗೆಲ್ಲ....
ಅದರ ನಿಜವಾದ ಅರ್ಥ ಆಗುತ್ತಿದೆ ಈಗೀಗ//


ಎಂದೆಂದೂ ಕರಗದ ಕನಸಿನ ಹಿಮಮಣಿಯಲ್ಲಿ
ಉಳಿದು ಹೋದ ನನ್ನ ಪ್ರೀತಿ
ಅನುಗಾಲ ತಾಜಾ ನಳನಳಿಸುತ್ತಿರುತ್ತದೆ...
ಕಣಕಣದಲ್ಲೂ ಸೇರಿ ಹೋದ ಒಲವ ಭಾವ
ಶಾಶ್ವತವಾಗಿ ಇಲ್ಲವಾಗೋಕೆ....
ನಾನೆ ಕಾಣದಂತೆ ಮರೆಯಾಗಿ ಹೋಗಬೇಕಷ್ಟೆ,
ಏಕಾಂತದಲ್ಲಿ ತನ್ಮಯನಾಗಿ ಯೋಚಿಸುತ್ತೇನೆ
ನನ್ನಷ್ಟಕ್ಕೆ ನಾನು ಅಂದುಕೊಂಡು ಮುಗುಳ್ನಗುತ್ತೇನೆ....
.ಒಂದು ವೇಳೆ ಇದು ಘೋಷಿತ ಅಪರಾಧವೇ ಆಗಿದ್ದರೂ
ನಾನು ಮನಸಾರೆ ನಿನ್ನ ಪ್ರೀತಿಸುತ್ತಿದ್ದೆ/
ಗಾಲವನ ಗಲ್ಲದ ಮೇಲಿನ ದೃಷ್ಟಿ ಮಚ್ಚೆ ನಾನು
ಅಗತ್ಯವಿಲ್ಲದಾಗ ನೀನು ಅದನ್ನ ಒರೆಸಿ ಹಾಕಿದ್ದು
ಅದಕ್ಕೇನೆ ಇರಬೇಕೇನೋ....
ಕೇವಲ ಮನಸಲ್ಲಿದ್ದಿದ್ದರೆ ಸಮಸ್ಯೆ ಅಷ್ಟಿರುತ್ತಿರಲಿಲ್ಲ
ಎದೆಯಾಳದ ತನಕ ವ್ಯಾಪಿಸಿರೋದರಿಂದಲೆ.....
ನಿನ್ನ ನೆನಪುಗಳಿಂದ ನನಗೆ ಬಿಡುಗಡೆಯಿಲ್ಲ,
ಗ್ರಹಿಕೆಗೆ ನಿಲುಕದ ಮೃದು ಭಾವ ನೀನು
ನಿನಗೂ ನಾನು ಹಾಗೇನೆ......
ಅಂತ ತಿಳಿದುಕೊಂಡ ಅನುಗಾಲದ ಮೂಢ ನಾನು//

Comments

  1. ಅದ್ಭುತವಾದ ಬರಹ ಓದಿ ಮನ ಮುದಗೊಂಡಿತು

    ReplyDelete

Post a Comment

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು