ಇರಲಾರದ ಭೂತ


ಗಂಡ-ಹೆಂಡತಿ ತುಂಬ ಅನ್ಯೋನ್ಯವಾಗಿದ್ದರು. ಮದುವೆಯಾಗಿ ಐದು ವರ್ಷವಾಗಿದ್ದರೂ ನವವಿವಾಹಿತರಂತೆಯೇ ಇದ್ದರು. ಇದ್ದಕ್ಕಿದ್ದಂತೆ ಹೆಂಡತಿಗೆ ಏನೋ ಕಾಯಿಲೆ ಬಂದಿತು. ಆಕೆಗೆ ತಾನು ಸತ್ತು ಹೋಗುತ್ತೇನೆ ಎಂಬ ಭಯ ಬಂದಿತು. ಗಟ್ಟಿಯಾಗಿ ಗಂಡನ ಕೈಹಿಡಿದು ಹೇಳಿದಳು,  `ರೀ, ಅಕಸ್ಮಾತ್ ನಾನು ಸತ್ತು ಹೋದರೆ ನೀವು ಮತ್ತೆ ಯಾರನ್ನೂ ಮದುವೆಯಾಗಬಾರದು, ಯಾರನ್ನೂ ಪ್ರೀತಿಸಬಾರದು. ನನ್ನ ನೆನಪಿನಲ್ಲೇ ಉಳಿದುಬಿಡಬೇಕು. ಒಂದು ವೇಳೆ ನೀವು ಬೇರೆ ಮದುವೆಯಾದರೆ, ಮತ್ತೆ ಯಾವ ಹುಡುಗಿಯನ್ನು ಪ್ರೀತಿಸಿದರೆ ನಾನು ದೆವ್ವವಾಗಿ ನಿಮ್ಮನ್ನು ಕಾಡುತ್ತೇನೆ.` ಇದು ಕೋರಿಕೆಯೋ ಬೆದರಿಕೆಯೋ ತಿಳಿಯದೇ ಗಂಡ ತಲೆ ಅಲ್ಲಾಡಿಸಿ ಮಾತುಕೊಟ್ಟ.
ಪಾಪ! ಹೆಂಡತಿ ಕೆಲವೇ ದಿನಗಳಲ್ಲಿ ಸತ್ತು ಹೋದಳು. ಗಂಡನಿಗೆ ತುಂಬ ದುಃಖವಾಯಿತು. ಅವಳು ಹೇಳಿದಂತೆ ಅವಳ ನೆನಪಿನಲ್ಲೇ ಕೆಲಕಾಲ ಕಳೆದ. ಬೇರೆ ಯಾವ ಯುವತಿಯತ್ತ ನೋಡಲೇ ಇಲ್ಲ. ನಂತರ ಒಂದು ವಿಶೇಷ ಗಳಿಗೆಯಲ್ಲಿ ಸುಂದರಿಯೊಬ್ಬಳ ಪರಿಚಯವಾಯಿತು. ಆಕೆ ತುಂಬ ಆಕರ್ಷಕವಾಗಿದ್ದಾಳೆ ಹಾಗೂ ಬುದ್ಧಿವಂತೆಯಾಗಿದ್ದಾಳೆ ಎನ್ನಿಸಿತು ಆತನಿಗೆ. ಇವನೂ ಬುದ್ಧಿವಂತ ಹಾಗೂ ತಿಳುವಳಿಕೆಯುಳ್ಳವನು ಎನ್ನಿಸಿತು ಆಕೆಗೆ. ಪರಿಚಯ ಪ್ರೇಮವಾಗಿ ಬದಲಾಯಿತು. ಇಬ್ಬರೂ ವಿವಾಹವಾಗಲು ತೀರ್ಮಾನ ಮಾಡಿದರು.
ಮದುವೆಯ ನಿಶ್ಚಿತಾರ್ಥ ನಡೆಯಿತು. ಅಂದೇ ರಾತ್ರಿ ಮೊದಲಿನ ಹೆಂಡತಿಯ ದೆವ್ವ ಬಂದು ಇವನನ್ನು ಮಾತನಾಡಿಸಿತು, ಇವನನ್ನು ಕೆಣಕಿತು. ಅದರದೊಂದು ವಿಶೇಷ ಸ್ವಭಾವವೆಂದರೆ ತನ್ನ ಗಂಡ ಮತ್ತು ಹೊಸ ಹುಡುಗಿಯ ನಡುವೆ ಏನು ನಡೆದರೂ ಅದಕ್ಕೆ ತಿಳಿದು ಅದನ್ನು ವಿಸ್ತಾರವಾಗಿ ತನ್ನ ಗಂಡನಿಗೆ ವರದಿ ಒಪ್ಪಿಸುತ್ತಿತ್ತು. ತನ್ನ ಗಂಡ ಆ ಹುಡುಗಿಯ ಹತ್ತಿರ ಮಾತನಾಡಿದ ಪ್ರತಿಯೊಂದು ಪಿಸುಮಾತನ್ನು ಕೂಡ ನೆನಪಿನಲ್ಲಿಟ್ಟುಕೊಂಡು ಅವನಿಗೆ ಹೇಳುತ್ತಿತ್ತು. ನೀನು ಹೀಗೆ ಮಾಡಿದೆಯಲ್ಲವೇ? ಈ ಮಾತು ಹೇಳಿದೆಯಲ್ಲವೇ? ಆ ಉಡುಗೊರೆ ಕೊಟ್ಟೆಯಲ್ಲವೇ? ಎಂದು ಕೆದಕಿ ಕೆದಕಿ ಕೇಳುತ್ತಿತ್ತು. ದೆವ್ವ ಹೇಗೆ ಎಲ್ಲವನ್ನೂ ಮರೆಯದೇ ನೆನಪಿನಲ್ಲಿಟ್ಟುಕೊಳ್ಳುತ್ತದೆ ಎಂದು ಇವನಿಗೆ ಆಶ್ಚರ್ಯ, ಆತಂಕವಾಗುತ್ತಿತ್ತು. `ನನಗೆ ಕೊಟ್ಟ ಮಾತನ್ನು ಮರೆತೇ ಬಿಟ್ಟೆಯಾ? ಸರಿ, ನಿನಗೆ ತಕ್ಕ ಶಾಸ್ತಿ ಮಾಡುತ್ತೇನೆ ಇರು` ಎಂದಾಗ ಅವನಿಗೆ ಭಯವಾಗುತ್ತಿತ್ತು.
ಆತಂಕಗೊಂಡ ಅವನನ್ನು ಯಾರೋ ಒಬ್ಬ ಗುರುಗಳ ಕಡೆಗೆ ಕರೆದುಕೊಂಡು ಹೋದರು. ಅವರು ಇವನಿಂದ ವಿವರಗಳನ್ನೆಲ್ಲ ವಿಸ್ತಾರವಾಗಿ ಪಡೆದುಕೊಂಡ ನಂತರ ಹೇಳಿದರು,  ಬಹುಶಃ ಇದೊಂದು ಅತ್ಯಂತ ಬುದ್ಧಿವಂತ ದೆವ್ವವಿರಬೇಕು. ಅದಕ್ಕೇ ನಿಮ್ಮಿಬ್ಬರ ನಡುವೆ ನಡೆದ ಪ್ರತಿಯೊಂದು ವಿಷಯವನ್ನೂ, ಮಾತನ್ನೂ ನೆನಪಿನಲ್ಲಿಟ್ಟುಕೊಂಡಿದೆ. ಇದಕ್ಕೆ ಒಂದು ಉಪಾಯವಿದೆ. ದೆವ್ವ ನಿನ್ನ ಮುಂದೆ ಬಂದೊಡನೆ ಅದಕ್ಕೆ ಹೀಗೆ ಹೇಳು, `ನಾನು ನಿನಗೊಂದು ಪ್ರಶ್ನೆ ಕೇಳುತ್ತೇನೆ. ಅದಕ್ಕೆ ಸರಿಯಾದ ಉತ್ತರ ಕೊಟ್ಟರೆ ನಾನು ಈ ಹುಡುಗಿಯನ್ನು ಮದುವೆಯಾಗದೇ ನಿನ್ನ ನೆನಪಿನಲ್ಲೇ ಉಳಿದುಬಿಡುತ್ತೇನೆ.`
`ಆಗಲಿ ಗುರುಗಳೇ, ಯಾವ ಪ್ರಶ್ನೆಯನ್ನು ಅದಕ್ಕೆ ಕೇಳಲಿ?`  ಎಂದು ಕೇಳಿದ ಗಂಡ.  `ದೆವ್ವ ಬಂದಾಗ ನಿನ್ನ ಕೈಯಲ್ಲಿ ಒಂದು ಮುಷ್ಟಿ ಅಕ್ಕಿ ಹಿಡಿದುಕೋ. ಈ ಮುಷ್ಟಿಯಲ್ಲಿ ಎಷ್ಟು ಅಕ್ಕಿಕಾಳು ಇವೆ ಹೇಳು. ಸರಿಯಾಗಿ ಹೇಳಿದರೆ ನೀನು ಹೇಳಿದಂತೆಯೇ ಬಾಳುತ್ತೇನೆ ಎನ್ನು. ದೆವ್ವ ಉತ್ತರ ಸರಿಯಾಗಿ ಕೊಡದಿದ್ದರೆ ನಿನಗಿದ್ದದ್ದು ಕೇವಲ ದೆವ್ವದ ಭ್ರಮೆ. ಅದನ್ನು ಮರೆತುಬಿಡು` ಎಂದರು ಗುರುಗಳು.
ಅದೇ ರಾತ್ರಿ ದೆವ್ವ ಬಂದಿತು. ಅಷ್ಟೇ ಅಲ್ಲ ತನ್ನ ಗಂಡ ಗುರುಗಳನ್ನು ಕಂಡದ್ದನ್ನು, ಅವರು ಹೇಳಿದ್ದನ್ನು ಎಲ್ಲವನ್ನೂ ಹೇಳಿತು. ಗಂಡ ಧೈರ್ಯ ತಂದುಕೊಂಡು ಮುಷ್ಟಿಯಲ್ಲಿ ಅಕ್ಕಿ ಹಿಡಿದು  ಕಾಳುಗಳ ಸಂಖ್ಯೆಯನ್ನು ಹೇಳು ಎಂದು ಕೇಳಿದ. ಪ್ರಶ್ನೆಗೆ ದೆವ್ವ ಉತ್ತರ ಕೊಡಲಿಲ್ಲ. ಕೊಡಲು ಅದು ಇರಲೇ ಇಲ್ಲ. ನಮ್ಮ ಅಂತಃಸಾಕ್ಷಿಯೇ ನಮ್ಮ ದೆವ್ವ ಹಾಗೂ ದೇವರು. ನಾವು ಬೇರೆಯವರ ಮುಂದೆ ಯಾವ ಮುಖವಾಡ ಹಾಕಿಕೊಂಡರೂ ಮನಸ್ಸಾಕ್ಷಿಯನ್ನು ವಂಚಿಸಲಾರೆವು. ಅದು ನಮ್ಮನ್ನು ಭೂತದಂತೆ ಬೆನ್ನಟ್ಟಿ ಕಾಡಿ ಪ್ರಜ್ಞೆಯನ್ನು ಕೆಣಕುತ್ತದೆ, ಅಣಕಿಸುತ್ತದೆ.

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು