Thursday, June 23, 2011

ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು

ನಿನ್ನೊಲುಮೆಯಿಂದಲೇ ಬಾಳು ಬೆಳಕಾಗಿರಲು
ಚಂದ್ರಮುಖಿ ನೀನೆನಲು ತಪ್ಪೇನೆ?
ನಿನ್ನ ಸೌಜನ್ಯವೇ ದಾರಿನೆರಳಾಗಿರಲು
ನಿತ್ಯಸುಖಿ ನೀನೆನಲು ಒಪ್ಪೇನೆ?

ನಿನ್ನ ನಗೆಮಲ್ಲಿಗೆಯ ಪರಿಮಳದ ಪಾತ್ರೆಯಲಿ
ಚೆಲ್ಲಿಸೂಸುವ ಅಮೃತ ನೀನೇನೆ!
ನನ್ನ ಕನಸುಗಳೆಲ್ಲ ಕೈಗೊಳುವ ಯಾತ್ರೆಯಲಿ
ಸಿದ್ಧಿಸುವ ಧನ್ಯತೆಯು ನೀನೇನೆ!

ನಿನ್ನ ಕಿರುನಗೆಯಿಂದ, ನಗೆಯಿಂದ, ನುಡಿಯಿಂದ
ಎತ್ತರದ ಮನೆ ನನ್ನ ಬದುಕೇನೆ!
ಚಂದ್ರನಲಿ ಚಿತ್ರಿಸಿದ ಚೆಲುವಿನೊಳಗುಡಿಯಿಂದ
ಗಂಗೆ ಬಂದಳು ಇದ್ದ ಕಡೆಗೇನೆ!

- ಕೆ.ಎಸ್. ನರಸಿಂಹಸ್ವಾಮಿ

"ಅನಿರೀಕ್ಷಿತ"(1970) ಎನ್ನುವ ಚಲನಚಿತ್ರದಲ್ಲಿ ವಿಜಯಭಾಸ್ಕರ್ ಸಂಗೀತದಲಿ, ಪಿ.ಬಿ. ಶ್ರೀನಿವಾಸ್ ಅವರು ತುಂಬ ಸೊಗಸಾಗಿ ಹಾಡಿದ್ದಾರೆ.
ಹಾಗೆ ಸಿ. ಅಶ್ವಥ್ ಅವರು ಕೂಡ ತಮ್ಮದೇ ಧಾಟಿಯಲ್ಲಿ ಈ ಕವನವನ್ನು ತುಂಬ ಸೊಗಸಾಗಿ ಹಾಡಿದ್ದಾರೆ.

Friday, June 17, 2011

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು ||
ಅದಕೇ ಹಿಮ್ಮೇಳವನೆ ಸೂಸಿಪಹ ಸುಳಿಗಾಳಿ
ತೆಂಗು ಗರಿಗಳ ನಡುವೆ ನುಸುಳುತಿತ್ತು ||ಪ||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||

ಇಳೆವೆಣ್ಣು ಮೈದೊಳೆದು ಮಕರಂದದರಿಶಣದಿ
ಹೂ ಮುಡಿದು ಮದುಮಗಳ ಹೋಲುತಿತ್ತು ||೨||
ಮೂಡಣದಿ ನೇಸರನ ನಗೆ ಮೊಗದಾ ಶ್ರೀಕಾಂತಿ
ಬಿಳಿಯಾ ಮೋಡದ ಹಿಂದೆ ಹೊಳೆಯುತಿತ್ತು||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||

ಹುಲ್ಲೆಸಳು ಹೂಪಕಳೆ ಮುತ್ತು ಹನಿಗಳ ಮಿಂಚು ||೨||
ಸೊಡರಿನಲಿ ಆರತಿಯ ಬೆಳಗುತಿತ್ತು
ಕೊರಲುಕ್ಕಿ ಹಾಡುತಿಹ ಚಿಕ್ಕಪಕ್ಕಿಯ ಬಳಗ ||೨||
ಶುಭಮಸ್ತು ಶುಭಮಸ್ತು ಎನ್ನುತಿತ್ತು||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||

ತಳಿರ ತೋರಣದಲ್ಲಿ ಬಳ್ಳಿ ಮಾಡಗಳಲ್ಲಿ
ದುಂಬಿಗಳ ಓಂಕಾರ ಹೊಮ್ಮುತಿತ್ತು ||೨||
ಹಚ್ಚ ಹಸುರಿನ ಪಚ್ಚೆ ನೆಲಗಟ್ಟಿನಂಗಳದಿ
ಚಿಟ್ಟೆ ರಿಂಗಣ ಗುಣಿತ ಹಾಕುತಿತ್ತು||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ||

ಉಷೆಯ ನುಙ್ಗದಪಿನಲಿ ಹರ್ಷಬಾಷ್ಪಗಳಂತೆ
ಮರದ ಹನಿ ತಟಪಟನೆ ಉದುರುತಿತ್ತು ||೨||
ಸೃಷ್ಠಿಲೀಲೆಯೊಳಿಂತು ತಲ್ಲೀನವಾದ ಮನ
ಮುಂಬಾಳ ಸವಿಗನಸ ನೆನೆಯುತಿತ್ತು||

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಸೋ! ಎಂದು ಶೃತಿ ಹಿಡಿದು ಸುರಿಯುತಿತ್ತು
ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಆ.. ಆ….. ಆ… ಆ…..ಆ.. ಆ….. ಆ….

Get this widget | Track details | eSnips Social DNA


ಗಾಯನ: ಬಿ.ಆರ್.ಛಾಯ
ಸಂಗೀತ: ಸಿ. ಅಶ್ವಥ್
ರಚನೆ: ಚನ್ನವೀರ ಕಣವಿ

Thursday, June 16, 2011

ಹೇಳಿ ಹೋಗು ಕಾರಣ

ಹೇಳಿ ಹೋಗು ಕಾರಣ ಹೋಗುವ ಮೊದಲು
ನನ್ನ ಬಾಳಿನಿಂದ ದೂರಾಗುವ ಮೊದಲು

ಒಲವೆಂಬ ಹಣತೆ ಎದೆಯಲ್ಲಿ ಬೆಳಗಿ
ಬೆಳಕಾದೆ ಬಾಳಿಗೆ
ಇಂದೇಕೆ ಹೀಗೆ ಬೆಳಕನ್ನು ತೊರೆದು
ನೀ ಸರಿದೆ ನೆರಳಿಗೆ ?
ಇಂದ್ಯಾವ ಬಂಧ ತೊಡರಿದೆ
ನಿನ್ನ ಕಾಲಿಗೆ ?
ಸುಡುಬೆಂಕಿ ಬೆಳಕು ಉಳಿಯಿತೆ
ನನ್ನ ಪಾಲಿಗೆ ?

ಸವಿಭಾವಗಳಿಗೆ ನೀ ನಾದ ನೀಡಿ
ಜೊತೆಗೂಡಿ ಹಾಡಿದೆ
ಇಂದ್ಯಾವ ಅಳಲು ? ಸೆರೆಯುಬ್ಬಿ ಕೊರಳು
ನೀ ಮೌನ ತಾಳಿದೆ
ನೀ ನೆಟ್ಟು ಬೆಳೆಸಿದ ಈ ಮರ
ಫಲ ತೊಟ್ಟ ವೇಳೆಗೆ
ಹೀಗೇಕೆ ಮುರಿದು ಉರುಳಿದೆ
ಯಾವ ದಾಳಿಗೆ ?

-- ಬಿ.ಆರ್. ಲಕ್ಷ್ಮಣರಾವ್

ಅಮ್ಮ, ನಿನ್ನ ಎದೆಯಾಳದಲ್ಲಿ

ಅಮ್ಮ, ನಿನ್ನ ಎದೆಯಾಳದಲ್ಲಿ
ಗಾಳಕ್ಕೆ ಸಿಕ್ಕ ಮೀನು
ಮಿಡುಕಾಡುತಿರುವೆ ನಾನು ....
ಕಡಿಯಲೋಲ್ಲೆ ನೀ ಕರುಳಬಳ್ಳಿ
ಒಲವೂಡುತಿರುವ ತಾಯೆ,
ಬಿಡದ ಬುವಿಯ ಮಾಯೆ ....

ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ
ಆಡಗಲಿ ಎಷ್ಟು ದಿನ ?
ದೂಡು ಹೊರಗೆ ನನ್ನ ...
ಓಟ ಕಲಿವೆ, ಒಳನೋಟ ಕಲಿವೆ, ನಾ
ಕಲಿವೆ ಊರ್ಧ್ವ ಗಮನ,
ಓ ಆಗಾಧ ಗಗನ ...

ಮೇಲೆ ಹಾರಿ, ನಿನ್ನ ಸೆಳೆತ ಮೀರಿ,
ನಿರ್ಭಾರಸ್ಥಿತಿಗೆ ತಲುಪಿ
ಬ್ರಹ್ಮಾಂಡವನ್ನೇ ಬೆದಕಿ
ಇಂಧನ ತೀರಲು, ಬಂದೇ ಬರುವೆನು
ಮತ್ತೆ ನಿನ್ನ ತೊಡೆಗೆ
ಮೂರ್ತ ಪ್ರೇಮದೆಡೆಗೆ...

Wednesday, June 15, 2011

ತರಚುಗಾಯವ

ತರಚುಗಾಯವ ಕೆರೆದು ಹುಣ್ಣನಾಗಿಪುದು ಕಪಿ ।
ಕೊರತೆಯೊಂದನು ನೀನು ನೆನೆನೆನೆದು ಕೆರಳಿ ।।
ಧರೆಯೆಲ್ಲವನು ಶಪಿಸಿ ಮನದಿ ನರಕವ ನಿಲಿಸಿ ।
ನರಳುವುದು ಬದುಕೇನೊ ಮಂಕುತಿಮ್ಮ ।।

Tuesday, June 14, 2011

ಕತ್ತಲೆಯೊಳೇನನೊ ಕಂಡು


ಕತ್ತಲೆಯೊಳೇನನೊ ಕಂಡು ಬೆದರಿದ ನಾಯಿ ।
ಎತ್ತಲೋ ಸಖನೋರ್ವನಿಹನೆಂದು ನಂಬಿ ।।
ಕತ್ತೆತ್ತಿ ಮೋಳಿಡುತ ಬೊಗಳಿ ಹಾರಾಡುವುದು ।
ಭಕ್ತಿಯಂತೆಯೆ ನಮದು ಮಂಕುತಿಮ್ಮ ।।

Monday, June 13, 2011

ಜಟ್ಟಿ ಕಾಳಗದಿ

ಜಟ್ಟಿ ಕಾಳಗದಿ ಗೆಲ್ಲದೊಡೆ ಗರಡಿಯ ಸಾಮು ।
ಪಟ್ಟುವರಸೆಗಳೆಲ್ಲ ವಿಫಲವೆನ್ನುವೆಯೇಂ ।।
ಮುಟ್ಟಿನೋಡವನ ಮೈಕಟ್ಟು ಕಬ್ಬಿಣ ಗಟ್ಟಿ ।
ಗಟ್ಟಿತನ ಗರಡಿ ಫಲ ಮಂಕುತಿಮ್ಮ ।।

ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......