Wednesday, April 6, 2011

ಡಿ.ವಿ.ಜಿ.

ಡಿ ವಿ ಜಿ(ಮಾರ್ಚ್ ೧೭, ೧೮೮೭ - ಅಕ್ಟೋಬರ್ ೭, ೧೯೭೫) ಎಂಬ ಹೆಸರಿನಿಂದ ಪ್ರಸಿದ್ಧರಾದ ಡಾ. ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪನವರು ಕರ್ನಾಟಕದ ಪ್ರಸಿದ್ಧ ಸಾಹಿತಿ, ಪತ್ರಕರ್ತರು. ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಇವರು ಕನ್ನಡದ ಆಧುನಿಕ ಸರ್ವಜ್ಞ ಎಂದೇ ಪ್ರಸಿದ್ಧರಾದವರು.


ಡಿ ವಿ ಜಿ ಅವರು ೧೮೮೭, ಮಾರ್ಚ್ ೧೭ ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವನಹಳ್ಳಿಯಲ್ಲಿ ಜನಿಸಿದರು. ಅವರ ಪೂರ್ವಿಕರು ತಮಿಳುನಾಡಿನ ತಿರುಚಿನಾಪಳ್ಳಿಯ ಕಡೆಯವರು. ಅವರ ಮುತ್ತಜ್ಜ ಕೋಲಾರ ಜಿಲ್ಲೆಯ ಮುಳಬಾಗಿಲಿಗೆ ವಲಸೆ ಬಂದವರು. ಶೇಕದಾರ ಕುಟುಂಬದ ಗುಂಡಪ್ಪನವರು ೧೮೯೮ ರಲ್ಲಿ ಕನ್ನಡ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಪಾಸಾದರು. ಆ ಸಂದರ್ಭದಲ್ಲೇ ಸಿಕ್ಕ ಇಂಗ್ಲಿಷ್ ಶಿಕ್ಷಣವನ್ನು ಪಡೆದರು. ಖಾಸಗಿಯಾಗಿ ಸಂಸ್ಕೃತವನ್ನು ಅಭ್ಯಾಸ ಮಾಡಿದರು. ಮುಂದೆ ಸಂಬಂಧಿಕರೊಬ್ಬರ ಸಹಾಯದಿಂದ ಮೈಸೂರಿನ ಮಹಾರಾಜ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದರು. ಆದರೆ ೧೯೦೫ ರಲ್ಲಿ ಮೆಟ್ರಿಕ್ಯುಲೇಷನ್ ನಲ್ಲಿ ತೇರ್ಗಡೆಯಾಗಲಿಲ್ಲ. ಅಲ್ಲಿಗೆ ಶಾಲಾ ಶಿಕ್ಷಣವನ್ನು ನಿಲ್ಲಿಸಿದರು.

 ವೃತ್ತಿ ಜೀವನ

ಪ್ರೌಢಶಾಲೆಯಲ್ಲಿ ಓದುವಾಗಲೇ ಗುಂಡಪ್ಪನವರಿಗೆ ಮದುವೆಯಾಯಿತು. ಹೆಂಡತಿ ಭಾಗೀರಥಮ್ಮ. ಮುಂದೆ ಮುಳಬಾಗಿಲಿನ ಒಂದು ಶಾಲೆಯಲ್ಲಿ ಬದಲಿ ಅಧ್ಯಾಪಕರಾಗಿ ಕೆಲ ಕಾಲ ಕೆಲಸ ಮಾಡಿದರು. ಅದೇ ಅವರ ವೃತ್ತಿ ಜೀವನದ ನಾಂದಿ. ಆದರೂ ಅಲ್ಲಿರಲಾಗಲಿಲ್ಲ. ವೃತ್ತಿ ಬಿಟ್ಟು ಮುಂದೆ ಕೋಲಾರದ ಚಿನ್ನದ ಗಣಿಯಲ್ಲಿ, ಸೋಡಾ ಫ್ಯಾಕ್ಟರಿಯಲ್ಲಿ, ಕೆಲಸ ಮಾಡಿದರು. ನಂತರ ಬೆಂಗಳೂರಿಗೆ ಬಂದು ಕೆಲಸಕ್ಕಾಗಿ ಎಲ್ಲೆಂದರಲ್ಲಿ ಅಲೆದರು.

ಜೀವನ ನಿರ್ವಹಣೆಗಾಗಿ ಏನಾದರೂ ಮಾಡಬೇಕಿದ್ದ ಗುಂಡಪ್ಪನವರು "ಸೂರ್ಯೋದಯ ಪ್ರಕಾಶಿಕ" ಪತ್ರಿಕೆಯಲ್ಲಿ ಬಾತ್ಮೀದಾರರಾಗಿ ಸೇರಿಕೊಂಡರು. ಹೆಚ್ಚು ಕಾಲ ಈ ಪತ್ರಿಕೆ ನಡೆಯಲಿಲ್ಲ. ಪುನಃ ಮತ್ತೊಂದಕ್ಕೆ ಗುಂಡಪ್ಪನವರ ಹೆಜ್ಜೆ, ಖರ್ಚಿಗಾಗಿ ಏನಾದರೂ ಬರೆಯಬೇಕಿತ್ತು. ಯಾವುದಾದರೂ ಪತ್ರಿಕೆ ಬೇಕಿತ್ತು. ಹಲವಾರು ಇಂಗ್ಲಿಷ್ ಪತ್ರಿಕೆಗಳಿಗೆ ಲೇಖನ ಬರೆದರು. ಕನ್ನಡ ಪತ್ರಿಕೆಗಳಲ್ಲಿ ಅನುಭವ ಪಡೆದರು. "ವೀರಕೇಸರಿ" ಯಲ್ಲಿ ಕಾರ್ಯ ನಿರ್ವಹಿಸಲು ಮದ್ರಾಸ್ ಗೆ ಹೋದಾಗ ಅಲ್ಲಿ "ಹಿಂದೂ" ಪತ್ರಿಕೆಗೆ ಬರೆದರು. ನಂತರ "ಮೈಸೂರು ಟೈಮ್ಸ್" ಇಂಗ್ಲಿಷ್ ಪತ್ರಿಕೆಯ ಸಹಾಯಕ ಸಂಪಾದಕರಾದರು.

ದಿವಾನ್ ರಂಗಾಚಾರ್ಯ ಅವರ ಬಗ್ಗೆ ಇಂಗ್ಲಿಷ್ ನಲ್ಲಿ ಬರೆದ ಲೇಖನ ಡಿ ವಿ ಜಿ ಅವರ ಬದುಕಲ್ಲಿ ಹೊಸ ತಿರುವು ಪಡೆಯಿತು. ಮುಂದೆ ಪುಸ್ತಕ ರೂಪಕ್ಕೆ ತರಲು ಹಲವು ಮಾರ್ಪಾಡು ಮಾಡಿದರು. ಇದು ಪ್ರಕಟವಾಗುತ್ತಿದ್ದಂತೆ ಕೃತಿ ಪ್ರಕಟಣೆ ಮೂಲಕವೂ ಹಣ ಬರುವಂತಾಯಿತು. ಲೇಖನ, ಪರಿಚಯದ ಜೊತೆ ಕಾವ್ಯ ಕೃಷಿ ಪ್ರಧಾನವಾಯಿತು. ಅನುವಾದ ಸಾಹಿತ್ಯದ ಮೂಲಕ ಡಿ ವಿ ಜಿ ಉತ್ತಮ ಹೆಸರು ಪಡೆದರು. ರಾಜಕೀಯ ವಿಶ್ಲೇಷಣೆ, ತತ್ತ್ವಶಾಸ್ತ್ರ, ಧಾರ್ಮಿಕ ವಿಚಾರಗಳು, ಪ್ರಬಂಧ ಬರಹ, ಬೇರೆ ಬೇರೆ ಮಗ್ಗಲುಗಳಾದವು.

ಕನ್ನಡ ಕಾವ್ಯಕ್ಷೇತ್ರದಲ್ಲಿ "ಮಂಕುತಿಮ್ಮನ ಕಗ್ಗ" ಹಾಗೂ "ಮರುಳ ಮುನಿಯನ ಕಗ್ಗ" ದ ಮೂಲಕ ಡಿ ವಿ ಜಿ ಮನೆಯ ಮಾತಾದವರು:

"ಬದುಕು ಜಟಕಾಬಂಡಿ, ವಿಧಿಯದರ ಸಾಹೇಬ |

ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು ||

ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು |

ಪದ ಕುಸಿಯೆ ನೆಲವಿಹುದು -- ಮಂಕುತಿಮ್ಮ ||"

ಈ ಕೃತಿ ಕನ್ನಡದ ಭಗವದ್ಗೀತೆಯೆಂದೇ ಹಲವರು ಭಾವಿಸುವಂತಹ ಉತ್ಕೃಷ್ಟ ಸಂಕಲನ. "ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು" ಎಂದ ಡಿ ವಿ ಜಿ, ಕವಿ ಪರಂಪರೆ ಹಾಗೂ ವಿಜ್ಞಾನ ನಂಬಿಕೆಗೆ ಕೊಂಡಿ ಬೆಸೆದವರು. ಹಳೆಯದನ್ನು ಬಿಡಲಾರದ ಹೊಸತು ವಿಜ್ಞಾನ ಸೃಷ್ಟೀಕರಿಸಲಾಗದ ಭಾರತೀಯ ಮನಸ್ಸುಗಳನ್ನು ಒಂದಾಗಿಸುವ ವಿಚಾರಲಹರಿಯನ್ನು ಕಾವ್ಯ ಮುಖೇನ ನೀಡಿದ ಡಿ ವಿ ಜಿ ಪತ್ರಕರ್ತರಾಗಿಯೂ ಹೆಸರಾದವರು. ವ್ಯಕ್ತಿ ವಿಚಾರದ ಬರಹಗಳಿಂದ ನಾಲ್ಕು ಕಾಲ ನೆನಪಲ್ಲಿರುವವರು. ಹೀಗಾಗಿ ಅವರ "ಮಹನೀಯರು", "ಜ್ಞಾಪಕ ಚಿತ್ರಶಾಲೆ" ಮಹತ್ವದ ವಿಚಾರಗಳನ್ನು ಹೊರಚೆಲ್ಲಿದ ಕೃತಿಗಳು.

ಡಿ ವಿ ಜಿ ಅವರನ್ನು ಆಧುನಿಕ ಭಾರತೀಯ ಸಾಹಿತ್ಯದ ಒಂದು ಅಶ್ವತ್ಥ ವೃಕ್ಷ ಎಂದು ಕರೆಯುತ್ತಾರೆ. ಡಿ ವಿ ಜಿ ಅವರ ವಿದ್ವತ್ತು ಹಾಗೂ ಚಿಂತನೆ ಕಂಡವರು ಒಬ್ಬ ಋಷಿ ಎಂದಿದ್ದಾರೆ. ಅವರ ಸಾಹಿತ್ಯ ಬಾಳಿಗೊಂದು ನಂಬಿಕೆಯನ್ನೂ, ಭರವಸೆಯನ್ನೂ ಕೊಟ್ಟಿದೆ. ಹಾ.ಮಾ.ನಾಯಕರು "ಡಿ ವಿ ಜಿ ಅವರದು ಸತ್ಯ ಶಿವ ಸೌಂದರ್ಯಗಳು ಸಮಹಿತವಾದ ಸಾಹಿತ್ಯ" ಎಂದಿದ್ದಾರೆ.

ಕರ್ನಾಟಕ ಸರ್ಕಾರ ಡಿ ವಿ ಜಿ ಅವರ ಶತಮಾನೋತ್ಸವ ಸಂದರ್ಭದಲ್ಲಿ ಅವರ ಸಮಗ್ರ ಸಾಹಿತ್ಯ ಸಂಪುಟ ಹೊರತರುವ ಯೋಜನೆ ಹಮ್ಮಿಕೊಂಡಿದೆ. ಈ ಪ್ರಕಾರ "ಡಿ ವಿ ಜಿ ಕೃತಿ ಶ್ರೇಣಿ"ಯಲ್ಲಿ ವಿಚಾರ, ವಿಮರ್ಶೆ, ನಾಟಕ, ಶಿಶು ಸಾಹಿತ್ಯ, ಜೀವನ ಚರಿತ್ರೆಗಳು, ಕಾವ್ಯ ೧-೨, ನೆನಪಿನ ಚಿತ್ರಗಳು, ಸಂಕೀರ್ಣ ಹೊರತಂದಿದೆ.

ಕನ್ನಡದ ವಿಜ್ಞಾನ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆ ಕೊಟ್ಟ ಬಿ ಜಿ ಎಲ್ ಸ್ವಾಮಿ, ಡಿ ವಿ ಜಿ ಅವರ ಪುತ್ರರು. ತಮ್ಮ ಜೀವನ ಅಂತ್ಯದ ವರೆಗೂ ಮದರಾಸಿನಲ್ಲೇ ಕಾಲ ಕಳೆದ ಸ್ವಾಮಿ ಕನ್ನಡ ಸಾಹಿತ್ಯ ಕಂಡ ಅಪರೂಪದ ಬರಹಗಾರರು.


ಡಿ.ವಿ.ಗುಂಡಪ್ಪನವರು ೧೯೩೨ ರಲ್ಲಿ ಮಡಿಕೇರಿಯಲ್ಲಿ ನಡೆದ ೧೮ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದರು. ೧೯೩೫ ರಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಸ್ಥಾಪಿಸಿದರು. ೧೯೬೧ ರಲ್ಲಿ ಡಿ ವಿ ಜಿ ಅವರಿಗೆ ಮೈಸೂರು ವಿಶ್ವವಿದ್ಯಾಲಯ ಗೌರವ ಡಿ. ಲಿಟ್. ಪದವಿ ನೀಡಿ ಗೌರವಿಸಿತು. ಇದು ಡಿ ವಿ ಜಿ ಅವರು ಪತ್ರಿಕೋದ್ಯಮ ಹಾಗೂ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆಗಾಗಿ ಸಂದ ಪುರಸ್ಕಾರ. ೧೯೬೭ ರಲ್ಲಿ ಶ್ರೀಮದ್ಭಗವದ್ಗೀತಾ ತಾತ್ಪರ್ಯ ಎಂಬ ಗ್ರಂಥಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ೧೯೭೩ ರಲ್ಲಿ ಡಿ ವಿ ಜಿ ಸನ್ಮಾನ ಸಮಿತಿ ಇವರಿಗೆ ಒಂದು ಲಕ್ಷ ರೂಪಾಯಿಗಳ ಗೌರವ ಧನ ಸಮರ್ಪಿಸಿತು. ಇದನ್ನು ತಾವೇ ಸ್ಥಾಪಿಸಿದ ಗೋಖಲೆ ಸಂಸ್ಥೆಗೆ ದಾನ ಮಾಡಿದರು. ೧೯೭೪ ರಲ್ಲಿ ಭಾರತ ಸರ್ಕಾರ "ಪದ್ಮಭೂಷಣ ಪ್ರಶಸ್ತಿ" ನೀಡಿ ಗೌರವಿಸಿತು.

Monday, April 4, 2011

ಕುವೆಂಪು - ವಿಶ್ವಮಾನವ ಸ೦ದೇಶ

ವಿಶ್ವಮಾನವ ಸ೦ದೇಶ
ಪ್ರತಿಯೊ೦ದು ಮಗುವೂ ಹುಟ್ಟುತ್ತಲೇ ವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ಅಲ್ಪಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ‘ವಿಶ್ವಮಾನವ’ನನ್ನಾಗಿ ಮಾಡುವುದೆ ವಿದ್ಯೆಯ ಕರ್ತವ್ಯವಾಗಬೇಕು.
    ಹುಟ್ಟುವಾಗ ‘ವಿಶ್ವಮಾನವ’ನಾಗಿಯೆ ಹುಟ್ಟಿದ ಮಗುವನ್ನು ನಾವು ದೇಶ, ಭಾಷೆ, ಮತ, ಜಾತಿ, ಜನಾ೦ಗ, ವರ್ಣ ಇತ್ಯಾದಿ ಉಪಾಧಿಗಳಿ೦ದ ಬದ್ದನನ್ನಾಗಿ ಮಾಡುತ್ತೇವೆ. ಅವೆಲ್ಲವುಗಳಿ೦ದ ಪಾರಾಗಿ ಅವನನ್ನು ‘ಬುದ್ಧ’ನನ್ನಾಗಿ, ಅ೦ದರೆ ವಿಶ್ವಮಾನವನನ್ನಾಗಿ ಪರಿವರ್ತಿಸುವುದೇ ನಮ್ಮ ವಿದ್ಯೆ, ಸ೦ಸ್ಕೃತಿ, ನಾಗರೀಕತೆ ಎಲ್ಲದರ ಆದ್ಯ ಕರ್ತವ್ಯವಾಗಬೇಕು. ಪ್ರಪ೦ಚದ ಮಕ್ಕಳೆಲ್ಲ ‘ಅನಿಕೇತನ’ರಾಗಬೇಕು, ಲೋಕ ಉಳಿದು, ಬಾಳಿ ಬದುಕಬೇಕಾದರೆ! ಮಾನವ ವಿಕಾಸದ ಹಾದಿಯಲ್ಲಿ ಆಯಾ ಕಾಲದ ಅಗತ್ಯವನ್ನು ಪೂರೈಸಲು ಮಹಾಪುರುಷರು ಸ೦ಭವಿಸಿ ಹೋಗಿದ್ದಾರೆ. ಆವರಲ್ಲಿ ಕೆಲವರ ವಾಣಿ ವಿಶಿಷ್ಟ ಧರ್ಮವಾಗಿ ರೂಪುಗೊ೦ಡು ಕಡೆಗೆ ಮತವಾಗಿ ಪರಿಮಿತವಾಯಿತು. ಮಾನವರನ್ನು ಕೂಡಿಸಿ ಬಾಳಿಸಬೇಕೆ೦ಬ ಉದ್ದೇಶದಿ೦ದ ಹುಟ್ಟಿಕೊ೦ಡ ಮಹಾತ್ಮರ ವಾಣಿ ಮತವಾಗಿ ಮಾದಕವಾಯಿತು. ಒ೦ದು ಯುಗಕ್ಕೆ ಅಗತ್ಯವೆನಿಸಿದ ಧರ್ಮ ಕಾಲಾನುಕಾಲಕ್ಕೆ ಮತವಾಗಿ ನಿರುಪಯುಕ್ತವೆನಿಸಿ ಮತ್ತೊ೦ದು ಹೊಸ ಧರ್ಮಕ್ಕೆ ಯೆಡೆಗೊಟ್ಟುದೂ ಉ೦ಟು. ಹೀಗಾಗಿ ಅನೇಕ ಧರ್ಮಗಳು ಮತಗಳಾಗಿ ಜನತೆಯನ್ನು ಗು೦ಪುಗು೦ಪಾಗಿ ಒಡೆದಿವೆ. ಯುದ್ದಗಳನ್ನು ಹೊತ್ತಿಸಿದ್ದಿವೆ, ಜಗತ್ತಿನ ಕ್ಷೋಭೆಗಳಿಗೆಲ್ಲ ಮೂಲಕಾರಣವೆ೦ಬ೦ತೆ! ವಿಜ್ಞಾನಯುಗದ ಪ್ರಾಯೋಗಿಕ ದೃಷ್ಟಿಗೆ ಇನ್ನುಮೇಲೆ ಮತ ಮೌಢ್ಯ ಒಪ್ಪಿಗೆಯಾಗದು. ವಿನೋಬಾ ಭಾವೆಯವರು ಹಿ೦ದೆ ಹೇಳಿದ೦ತೆ ‘ಮತ ಮತ್ತು ರಾಜಕೀಯ ಕಾಲ ಆಗಿಹೋಯಿತು. ಇನ್ನೇನಿದ್ದರೂ ಆಧ್ಯಾತ್ಮ ಮತ್ತು ವಿಜ್ಞಾನದ ಕಾಲ ಬರಬೇಕಾಗಿದೆ.’
ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ
    ಈ ಪ೦ಚಮ೦ತ್ರ ಇನ್ನು ಮು೦ದಿನ ದೃಷ್ಟಿಯಾಗಬೇಕಾಗಿದೆ. ಅ೦ದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; ಮನುಜ ಮತ. ಆ ಪಥ ಈ ಪಥ ಅಲ್ಲ; ವಿಶ್ವಪಥ. ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ; ಸರ್ವರ ಸರ್ವಸ್ತರದ ಉದಯ. ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; ಸಮನ್ವಯಗೊಳ್ಳುವುದು. ಮಿತಮತದ ಆ೦ಶಿಕ ದೃಷ್ಟಿಯಿ೦ದ ಕಾಣುವ ಪೂರ್ಣದೃಷ್ಟಿ. ಯಾವ ಭಾವನೆಗಳು ಜಗತ್ತಿನಲ್ಲಿ ಎಲ್ಲ ಮಾನವರಿಗೂ ಅನ್ವಯವಾಗಬಹುದೊ ಅ೦ತಹ ಭಾವನೆ ಅ೦ತಹ ದೃಷ್ಟಿ ಬರಿಯ ಯಾವುದೋ ಒ೦ದು ಜಾತಿಗೆ, ಮತಕ್ಕೆ, ಗು೦ಪಿಗೆ, ಒ೦ದು ದೇಶಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಸರ್ವಕಾಲಕ್ಕೂ ಅನ್ವಯವಾಗುವ ಇವು ಮೂಲಮೌಲ್ಯಗಳು. ಈ ಮೌಲ್ಯಗಳು ಮಾನವರನ್ನು ಕೂಡಿಸಿ ಬಾಳಿಸುವತ್ತ ನಡೆದಾವು. ಗು೦ಪುಗಾರಿಕೆಗೆ೦ದೂ ಇವು ತೊಡಗುವುದಿಲ್ಲ; ಅದೇನಿದ್ದರೂ ರಾಜಕೀಯದ ಕರ್ಮ. ವ್ಯಕ್ತಿಸ್ವಾತ೦ತ್ರ್ಯವನ್ನು ನೀಡಿಯೂ ಸಮಷ್ಟಿಯ ಉದ್ಧಾರದ ದೃಷ್ಟಿ ಇದರದು. ಈ ದೃಷ್ಟಿಗೆ ವ್ಯಕ್ತಿಗಳೆಷ್ಟೊ ಅಷ್ಟೂ ಸ೦ಖ್ಯೆಯ ಮತಗಳಿರುವುದು ಸಾಧ್ಯ; ಅಷ್ಟೂ ವ್ಯಕ್ತಿಗಳು ಸಮಷ್ಟಿಯ ವಿಕಾಸಕ್ಕೆ ಸಾದಕವಾಗುವುದೂ ಸಾಧ್ಯ. ಈ ‘ದರ್ಶನ’ವನ್ನೆ ‘ವಿಶ್ವಮಾನವ ಗೀತೆ’ ಸಾರುತ್ತದೆ.

ಸಪ್ತಸೂತ್ರ
  1. “ಮನುಷ್ಯಜಾತಿ ತಾನೊ೦ದೆ ವಲ೦” ಎ೦ಬುದನ್ನು ನಿರುಪಾಧಿಕವಾಗಿ ಸ್ವೀಕರಿಸಬೇಕು.
  2. ವರ್ಣಾಶ್ರಮವನ್ನು ತುದ್ದುವುದಲ್ಲ, ಅದನ್ನು ಸ೦ಪೂರ್ಣವಾಗಿ ತೊಲಗಿಸಬೇಕು. ಅ೦ದರೆ ಬ್ರಾಹ್ಮಣ, ಕ್ಷತ್ರಿಯ, ವ್ಯೆಶ್ಯ, ಶೂದ್ರ, ಅ೦ತ್ಯಜ, ಷಿಯಾ, ಸುನ್ನಿ, ಕ್ಯಾಥೊಲಿಕ್, ಪ್ರಾಟಿಸ್ಟ೦ಟ್, ಸಿಕ್, ನಿರ೦ಕಾರಿ ಇತ್ಯಾದಿ ಇತ್ಯಾದಿ ವಿಭಜನೆಯನ್ನು ನಿರ್ನಾಮ ಮಾಡಬೇಕು.
  3. ಎಲ್ಲ ದೇಶಗಳಲ್ಲಿ ಮತ್ತು ಎಲ್ಲ ಮತಗಳಲ್ಲಿರುವ ಜಾತಿಪದ್ದತಿಯನ್ನು ಸ೦ಪೂರ್ಣವಾಗಿ ನಿರಾಕರಿಸಿ, ವಿನಾಶಗೊಳಿಸಬೇಕು.
  4. ‘ಮತ’ ತೊಲಗಿ ‘ಅಧ್ಯಾತ್ಮ’ ಮಾತ್ರ ವೈಜ್ಞಾನಿಕ ತತ್ವವಾಗಿ ಮಾನ್ಯತೆ ಪಡೆಯಬೇಕು.
  5. ಮತ ‘ಮನುಜಮತ’ವಾಗಬೇಕು; ಪಥ ‘ವಿಶ್ವಪಥ’ವಾಗಬೇಕು; ಮನುಷ್ಯ ‘ವಿಶ್ವಮಾನವ’ನಾಗಬೇಕು.
  6. ಮತ ಗು೦ಪುಕಟ್ಟುವ ವಿಷಯವಾಗಬಾರದು. ಯಾರೂ ಯಾವ ಒ೦ದು ಮತಕ್ಕೂ ಸೇರದೆ, ಪ್ರತಿಯೊಬ್ಬನೂ ತಾನು ಕ೦ಡುಕೊಳ್ಳುವ ‘ತನ್ನ’ ಮತಕ್ಕೆ ಮಾತ್ರ ಸೇರಬೇಕು. ಅ೦ದರೆ ಜಗತ್ತಿನಲ್ಲಿ ಎಷ್ಟು ವ್ಯಕ್ತಿಗಳಿದ್ದಾರೋ ಅಷ್ಟೇ ಸ೦ಖ್ಯೆಯ ಮತಗಳಿರುವ೦ತಾಗುತ್ತದೆ. ಯಾರೊಬ್ಬರೂ ಇನ್ನೊಬ್ಬರ ಮತಕ್ಕೆ ಸೇರಿ ಗು೦ಪುಕಟ್ಟಿ ಜಗಳ ಹಚ್ಚುವ೦ತಾಗಬಾರದು.
  7. ಯಾವ ಒ೦ದು ಗ್ರ೦ಥವೂ ‘ಏಕೈಕ ಪರಮ ಪೂಜ್ಯ’ ಧರ್ಮಗ್ರ೦ಥವಾಗ


ವಿಶ್ವಮಾನವಗೀತೆ – ಅನಿಕೇತನ
ಓ ನನ್ನ ಚೇತನ,
ಆಗು ನೀ ಅನಿಕೇತನ!

ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗನ೦ತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ಎಲ್ಲಿಯೂ ನಿಲ್ಲದಿರು;
ಮನೆಯನೆ೦ದೂ ಕಟ್ಟದಿರು;
ಕೊನೆಯನೆ೦ದೂ ಮುಟ್ಟದಿರು;
ಓ ಅನ೦ತವಾಗಿರು!
ಓ ನನ್ನ ಚೇತನ,
ಆಗು ನೀ ಅನಿಕೇತನ!

ಅನ೦ತ ತಾನ್ ಅನ೦ತವಾಗಿ
ಆಗುತಿಹನೆ ನಿತ್ಯಯೋಗಿ;
ಅನ೦ತ ನೀ ಅನ೦ತವಾಗು;
ಆಗು, ಆಗು, ಆಗು, ಆಗು,
ಓ ನನ್ನ ಚೇತನ,
ಆಗು ನೀ ಅನಿಕೇತನ!

Sunday, April 3, 2011

ಯುಗಾದಿ ಹಬ್ಬದ ಶುಭಾಶಯಗಳು


ಕುವೆಂಪು - ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ!

ಸಂಸ್ಕೃತಿ ಕ್ರಾಂತಿಗೆ ಕಹಳೆ ನಾಂದಿ!
[ತಾ||೨೦-೪-೧೯೭೪ ಶನಿವಾರ ಕರ್ನಾಟಕದ ಇತಿಹಾಸದಲ್ಲಿ ಚಿರಸ್ಮರಣೀಯ ದಿನ. ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟವು ೫೦೦೦ ವರ್ಷಗಳಿಂದ ನಡೆದು ಬಂದಿರುವ ಒಂದೇ ವರ್ಗದ ಬೌದ್ಧಿಕ ದಬ್ಬಾಳಿಕೆಯನ್ನು ಪ್ರತಿಭಟಿಸಿ ಸಾಹಿತ್ಯ, ಕಲೆ, ವೃತ್ತಪತ್ರಿಕೆ, ರೇಡಿಯೊ, ಸಿನಿಮಾ ಜನಸಾಮಾನ್ಯವಾಗಬೇಕು, ಬೌದ್ಧಿಕ ವಿಕೇಂದ್ರೀಕರಣವಾಗಬೇಕೆಂದು ಹೋರಾಡಲು ಪಣತೊಟ್ಟ ದಿನ. ಕರ್ನಾಟಕದ ಬದುಕಿನಲ್ಲಿ ಕ್ರಾಂತಿಯ ಕಹಳೆಯನ್ನೂದಿದ ದಿನ. ಅಂದು ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನ ಕಿಕ್ಕಿರಿದು ತುಂಬಿತ್ತು. ಕ್ರಾಂತಿ ಸಭೆಯನ್ನು ಉದ್ಘಾಟಿಸುತ್ತಾ ರಾಷ್ಟ್ರಕವಿ ಕುವೆಂಪು ಈ ರೀತಿ ನುಡಿದರು.]
ಎಲ್ಲರಿಗೂ ನಮಸ್ಕಾರ.
ಶ್ರೀಮಾನ್ ಚಂದ್ರಶೇಖರ ಪಾಟೀಲರು ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟದ ಧ್ಯೇಯಗಳನ್ನು ಕುರಿತು ಮಾತನಾಡಿದ್ದಾರೆ. ನಾನು ಕಾರ್‍ಯರಂಗದಿಂದ ನಿವೃತ್ತನಾಗಿ ಮೂಲೆ ಸೇರಿದವನು. ನನ್ನನ್ನು ಏಕೆ ಈ ಒಕ್ಕೂಟದ ಉದ್ಘಾಟನೆಗೆ ಕರೆದರೋ ನಾನರಿಯೆ. ಆದರೆ ಆ ಯುವಕ ಮತ್ತು ತರುಣ ವರ್ಗದವರು ನಮ್ಮ ಮನೆಗೆ ಬಂದು ನನ್ನೊಡನೆ ಅನೇಕ ವಿಚಾರಗಳನ್ನು ಮಾತನಾಡಿ ಯಾವುದೋ ಒಂದು ಮಹದುದ್ದೇಶದಿಂದ ನಾವು ಈ ಒಕ್ಕೂಟವನ್ನು ಸ್ಥಾಪಿಸುತ್ತಿದ್ದೇವೆ, ಅದನ್ನು ನೀವು ಉದ್ಘಾಟಿಸಬೇಕೆಂದು ಕೇಳಿದರು. ನಾನು ಒಪ್ಪಿಕೊಂಡೆ.
ಆದರೆ ನಾನು ಅವರಿಗೆ ಸೂಚಕವಾಗಿ ಹೇಳಿದ್ದೆ. ನಾನು ನಿಮಗೆ ಅಪ್ಯಾಯಮಾನವಾಗುವಂತೆಯೆ ಮಾತನಾಡುತ್ತೇನೆ ಎಂದು ಭಾವಿಸಬೇಡಿ ಎಂದು. ಅಲ್ಲಿ ನೆರೆದಿದ್ದವರೆಲ್ಲ ಸ್ವಲ್ಪ ರೇಗಿದಂತೆ ತೋರಿತು. ಯಾವುದೋ ಒಂದು ಅನ್ಯಾಯ ಆಗಿದೆ. ಅದನ್ನು ಪ್ರತಿಭಟಿಸಬೇಕು ಎಂಬಂತೆ ಮಾತನಾಡಿದರು. ಈ ತರಹದ ಪ್ರತಿಭಟನೆ, ಕ್ರಾಂತಿ, ಜಗಜ್ಜೀವನದಲ್ಲಿ ಬಹುಶಃ ಆದಿಕಾಲದಿಂದಲೂ ನಡೀತಾ ನಡೀತಾ ಇದೆ. ಈ ಕ್ಷಣದಲ್ಲಿಯೂ, ಈ ದೇಶಕ್ಕಿಂತಲೂ ಅಧಿಕವಾಗಿ, ಬೇರೆ ದೇಶಗಳಲ್ಲಿ ತರತರವಾದ ಕ್ರಾಂತಿಗಳು-ಸಾಹಿತ್ಯ ಕ್ರಾಂತಿ, ಕಲೆಯ ಕ್ರಾಂತಿ, ರಾಜಕೀಯ ಕ್ರಾಂತಿ ನಾನಾ ರೀತಿಯ ಕ್ರಾಂತಿ ನಡೀತಾ ಇವೆ. ಹಿಂಸಾಮಯವಾಗಿಯೂ ಕೆಲವು ನಡೀತಾ ಇವೆ.
ನಾನು ಏಕೆ ಇದಕ್ಕೆ ಒಪ್ಪಿಕೊಂಡೆ? ನನ್ನ ದೃಷ್ಟಿಯ ಸ್ವರೂಪ ಏನು? ಎನ್ನುವುದನ್ನು ನಾನು ಒಂದೆರಡು ಮಾತುಗಳಲ್ಲಿ ಪರಿಚಯ ಮಾಡಿಕೊಟ್ಟು ಮುಂದುವರಿಯಬೇಕಾಗಿದೆ. ಈಗತಾನೆ ಮಾತನಾಡುತ್ತಾ ಇವರು-ಅವರ ಆಹ್ವಾನಪತ್ರಿಕೆಯಲ್ಲಿಯೇ ಪ್ರಾರಂಭ ಮಾಡಿದ್ದಾರೆ: "ಸಾವಿರಾರು ವರ್ಷಗಳಿಂದ ಬೌದ್ಧಿಕ ದಬ್ಬಾಳಿಕೆ ನಡೆಸಿ, ಜನತೆಗೆ ತಿಳಿಯದ ಭಾಷೆಯ ಮೂಲಕ, ಆಡಳಿತಸೂತ್ರಗಳ ಮೂಲಕ, ನಮ್ಮ ಜನರನ್ನು ಮೂಕರನ್ನಾಗಿಸಿದ ಉಚ್ಚ ವರ್ಗದ ಮತ್ತು ವರ್ಣಗಳ ಹತೋಟಿಯಿಂದ............" ಅಂತಾ ಪ್ರಾರಂಭ ಮಾಡುತ್ತಾರೆ. ಇದು ಇತಿಹಾಸಕ್ಕೆ ಬಹಳ ಸುಲಭವಾಗಿ ವ್ಯಾಖ್ಯಾನ ಮಾಡುವ ರೀತಿ. ಈ ವ್ಯಾಖ್ಯಾನ ತುಂಬ ಸರಳವಾಗಿ ಬಿಡುತ್ತದೆ. ನಡೆದದ್ದೇನೋ ಇರಬಹುದು. ಆದರೆ ಇತಿಹಾಸಕಾರನಾದವನು ಇದು ಹೇಗೆ ನಡೆಯಿತು? ಏಕೆ ನಡೆಯಿತು? ಎನ್ನುವುದನ್ನೂ ಕುರಿತು ಆಲೋಚಿಸುತ್ತಾನೆ. ಯಾವುದನ್ನು ನೀವು ಬೌದ್ಧಿಕ ದಬ್ಬಾಳಿಕೆ ಎಂದು ಕರೆಯುತ್ತೀರೋ ಅದನ್ನೆ ಆ ದಬ್ಬಾಳಿಕೆ ನಡೆಸಿದವರು, ಅಥವಾ ಯಾರು ನಡೆಸಿದರು ಎಂದು ನೀವು ಊಹಿಸುತ್ತೀರೋ ಅವರು, ಇದಕ್ಕೆ ಮಾಡುವ ವ್ಯಾಖ್ಯಾನ ಬೇರೆ ರೀತಿಯಾಗಿರಬಹುದು: "ನೀವೆಲ್ಲರೂ ಅಜ್ಞಾನಿಗಳಾಗಿದ್ದಿರಿ. ಒರಟರಾಗಿದ್ದಿರಿ, ಅನಾಗರಿಕರಾಗಿದ್ದಿರಿ. ನಾವು ನಿಮಗೆ ನಾಗರಿಕತೆ ತಂದುಕೊಟ್ಟೆವು. ನಿಮ್ಮನ್ನು ನಯಗೊಳಿಸಿದೆವು. ನಿಮಗೆ ದೇವರು ಧರ್ಮ ಇದರ ವಿಚಾರದಲ್ಲಿ ಇದ್ದಂತಹ ಕಾಡು ಭಾವನೆಗಳನ್ನು ತೆಗೆದು ನಿಮ್ಮನ್ನು ಉತ್ತಮ ಸ್ಥಿತಿಗೆ ಏರಿಸಿದೆವು. ಅದಕ್ಕಾಗಿ ಬಹಳ ಪ್ರಯತ್ನ ಮಾಡಿದೆವು. ಆದರೆ ಅದಕ್ಕೆ ಉಪಯೋಗಿಸಿದ ಭಾಷೆ, ಆಗ ನಮ್ಮ ಭಾಷೆ ಸಂಸ್ಕೃತ ಭಾಷೆಯಾಗಿದ್ದುದರಿಂದ ಅದನ್ನೆ ಉಪಯೋಗಿಸಿದೆವು. ತರುವಾಯ ಆಯಾ ದೇಶಭಾಷೆಗಳಲ್ಲಿಯೂ ಸಹ ಆಯಾ ಭಾವನೆಗಳನ್ನೆಲ್ಲಾ ಹರಡಿದೆವು. ಅದನ್ನು ನೀವು ಸ್ವೀಕರಿಸಿ ಒಪ್ಪಿಕೊಂಡಿದ್ದೀರಿ"-ಎಂದು ತಿಳಿದು ಅವರು ವ್ಯಾಖ್ಯಾನ ಮಾಡಬಹುದು. ಆದ್ದರಿಂದ, ನಾನು ಏತಕ್ಕಾಗಿ ಒಪ್ಪಿಕೊಂಡೆ ಅಂದರೆ, ಒಂದು ಚಳವಳಿಯ ರೂಪದಿಂದ, ಉದ್ರೇಕದಿಂದ ಯಾವುದನ್ನಾದರೂ ಮಾಡಲು ಹೊರಟರೆ ಅದು ಶಾಶ್ವತವಾಗಿ ಸಫಲವಾಗುವುದು ಕಷ್ಟವಾಗುತ್ತದೆ. ಅದಕ್ಕೇ ನಾನು ಹೇಳಿದೆ, ನಾನು ಹೇಳುವುದೆಲ್ಲವೂ ನಿಮಗೆ ರುಚಿಸುತ್ತದೆಯೊ ಇಲ್ಲವೊ ಎಂದು. ಆದರೆ ಇಲ್ಲಿ ನಾನು ಯಾವ ಪೂರ್ವ ಆಗ್ರಹ ಪರನಾಗದೆ ನಿರ್‌ದ್ವೇಷನಾಗಿ ಮಾತನಾಡಲು ಬಂದಿದ್ದೇನೆ.
ಬೇರೆ ದೇಶಗಳಲ್ಲಾದರೆ ವರ್ಗಗಳ ಹೆಸರನ್ನು ಹೇಳುತ್ತಾರೆ. ಬೂರ್ಷ್ವಾ ಅಂತ ಹೇಳುತ್ತಾರೆ, ಪ್ರೊಲಿಟೇರಿಯಟ್ ಅಂತ ಹೇಳುತ್ತಾರೆ. ಆದರೆ ನಮ್ಮಲ್ಲಿ ಬೂರ್ಷ್ವಾ ಪ್ರೊಲಿಟೇರಿಯಟ್ ವಿಭಜನೆಗೆ ಬದಲಾಗಿ ನಾವು ಜಾತಿಗಳನ್ನು ಹೇಳಬೇಕಾಗಿದೆ. ಈ ರೀತಿ ನಡೆದುಕೊಂಡು ಬಂದಿದೆ. ಆ ದೇಶಗಳಲ್ಲಿ "The Priest" "The Priestly Class" ಎಂದುಬಿಟ್ಟರು. ಅಂದರೆ ಒಂದು ಪುರೋಹಿತ ವರ್ಗ, ಪುರೋಹಿತಶಾಹಿ, ಎನ್ನುವ ಮಾತನ್ನು ಉಪಯೋಗಿಸಿದರು. ನಮ್ಮ ದೇಶದಲ್ಲಿ ಪುರೋಹಿತಶಾಹಿ, ಪುರೋಹಿತವರ್ಗ ಎಂದರೆ ಸಾಮಾನ್ಯವಾಗಿ ಬ್ರಾಹ್ಮಣವರ್ಗ ಅಂತ. ಆದರೆ ವಾಸ್ತವವಾಗಿ ಪುರೋಹಿತಶಾಹಿ, ಪುರೋಹಿತವರ್ಗ ಎಂದರೆ ಬರೀ ಬ್ರಾಹ್ಮಣವರ್ಗವಲ್ಲ. ಹಿಂದೂಗಳಲ್ಲಿ ಬ್ರಾಹ್ಮಣವರ್ಗವಾಗುತ್ತದೆ. ಕ್ರೈಸ್ತರಲ್ಲೂ ಪುರೋಹಿತಶಾಹಿ ಇದೆ. ಅಲ್ಲಿ ಅದನ್ನು ಯಾವ ಜಾತಿ ಎಂದು ಕರೆಯುವುದು? ಮುಸ್ಲಿಮರಲ್ಲೂ ಪುರೋಹಿತಶಾಹಿ ಇದೆ. ಬೌದ್ಧರಲ್ಲೂ ಪುರೋಹಿತಶಾಹಿ ಇದೆ. ಎಲ್ಲಾ ಮತಗಳಲ್ಲೂ ಪುರೋಹಿತಶಾಹಿ ಇದ್ದೇಇದೆ.
ಯೂರೋಪಿನಲ್ಲಿ ನಡೆದ ಹೋರಾಟ ಒಂದು ಜಾತಿಯ ಮೇಲಲ್ಲ. ಅದು ಒಂದು ಪುರೋಹಿತಶಾಹಿಯ ಮೇಲೆ ನಡೆಯಿತು. ಇಂದಿಗೂ ನಡೆಯುತ್ತಲೆ ಇದೆ. ಆದರೆ ನಾನು ಯಾವ ಜಾತಿಯ ವಿರುದ್ದವಾಗಿ ಅಥವಾ ದ್ವೇಷದಿಂದ ಯಾವ ಮಾತನ್ನೂ ಆಡಲಾರೆ. ಏಕೆಂದರೆ ನನಗೆ ಯಾವ ಜಾತಿಯೂ ಇಲ್ಲ. ಆದ್ದರಿಂದ ಜಾತಿದ್ವೇಷವೂ ಇಲ್ಲ. ಆದರೆ ಇಲ್ಲಿ ಇಂದು ಒಂದು ಆಗುತ್ತದೆ. ಪುರೋಹಿತಶಾಹಿಯ ವಿಚಾರವಾಗಿ ಮಾತನಾಡುವಾಗ ನಾನು ಯವುದಾದರೂ ಒಂದು ಜಾತಿಯನ್ನು ನಿರ್ದೇಶಿಸುತ್ತಿದ್ದೇನೆ ಎಂದು ಭಾವಿಸಬಾರದು. ಅದು ಅನೇಕ ಮತಗಳಲ್ಲಿರುವ ಆ ವರ್ಗದ ಜನಕ್ಕೆ ಅನ್ವಯವಾಗುತ್ತದೆ. ಹಾಗೆಯೆ ನನ್ನ ಜೀವನ ದೃಷ್ಟಿ ಒಂದು ರೀತಿಯಲ್ಲಿ ಸಮಾನತಾವಾದಿಯ ದೃಷ್ಟಿ. ನೀವು ಸಮಾಜವಾದಿ, ಸಮತಾವಾದಿ ಎಂದೆಲ್ಲ ವ್ಯಾಖ್ಯಾನ ಮಾಡಬಹುದು. ಆದರೆ ನಾನು ಸಮಾನತಾವಾದಿ. ಆದ್ದರಿಂದ ನಾನು ಮಾಡುವ ಟೀಕೆ, ಖಂಡನೆ, ಶ್ಲಾಘನೆ, ಪ್ರಶಂಸೆ ಏನಿದ್ದರೂ ಅವು ಈ ಸಮಾನತಾವಾದಿಯ ದೃಷ್ಟಿಯಿಂದ ಹೊಮ್ಮುತ್ತವೆಯೆ ಹೊರತು ಯಾವ ಜಾತಿದ್ವೇಷದಿಂದಾಗಲಿ ಹೊಮ್ಮುವುದಿಲ್ಲ.
ಇಷ್ಟನ್ನು ಹೇಳಿ ನಾನು ಮುಂದೆ ಹೊರಡುತ್ತೇನೆ. ಏಕೆಂದರೆ ನಾನು ಹೇಳುವ ಮಾತುಗಳು ಇಲ್ಲಿ ಪುರೋಹಿತಶಾಹಿ ಎಂದರೆ ಹೆಚ್ಚಾಗಿ ಬ್ರಾಹ್ಮಣ ವರ್ಗವನ್ನೆ ನಿರ್ದೇಶಿಸುತ್ತದೆ. ಆದ್ದರಿಂದ ಇವನು ಬ್ರಾಹ್ಮಣದ್ವೇಷಿಯೇ ಎಂದುಬಿಟ್ಟರೆ ಅದು ಸುಳ್ಳು. ನಾನು ಯಾವ ಒಂದು ವ್ಯಕ್ತಿಯನ್ನು ಮಹೋನ್ನತ ಸ್ಥಾನದಲ್ಲಿಟ್ಟು ಪೂಜಿಸುತ್ತಿದ್ದೇನೆಯೊ ಆ ವ್ಯಕ್ತಿ ಬ್ರಾಹ್ಮಣರಾಗಿದ್ದರು, ಹುಟ್ಟುತ್ತಾ. ಶ್ರೀರಾಮಕೃಷ್ಣ ಪರಮಹಂಸರು ಬ್ರಾಹ್ಮಣರಾಗಿದ್ದರು. ಆತ ತನ್ನ ಬ್ರಾಹ್ಮಣ್ಯದ ಅಜ್ಞಾನದಿಂದ, ಅವಿದ್ಯೆಯಿಂದ, ಪಾರಾಗುವುದಕ್ಕೋಸ್ಕರವಾಗಿ ಭಯಂಕರವಾದ ತಪಸ್ಸನ್ನೆ ಕೈಗೊಂಡು ಮುಖಮಂಡಿಯನ್ನು ಮಣ್ಣಿನಲಿ ತೀಡಿ ಕಷ್ಟಪಟ್ಟರು. ಜನಿವಾರವನ್ನು ತೆಗೆದು ಬಿಸಾಡಿದರು. ಯಾಕಪ್ಪಾ ಜನಿವಾರ ಬಿಸಾಡ್ತೀಯಾ ಅಂತ ಕೇಳಿದರೆ, ಅಯ್ಯೋ ನಾವು ಹುಟ್ಟುತ್ತಲೆ ಅಷ್ಟಪಾಶಗಳಿಂದ ಬದ್ಧರಾಗಿ ಬರುತ್ತೇವೆ. ಅದರ ಜೊತೆಗೆ ನಾನು ಉತ್ತಮ ವರ್ಗಕ್ಕೆ ಸೇರಿದವನು ಅಂದುಬಿಟ್ಟು ಒಂದು ದಾರ ಹಾಕಿಕೊಂಡು ಮತ್ತೊಂದು ಪಾಶಕ್ಕೆ ಒಳಗಾಗಿ ಬ್ರಾಹ್ಮಣ ಅಂತ ಆಗಬಾರದು. ಅದಕ್ಕೋಸ್ಕರವಾಗಿ ನಾನು ಅದನ್ನು ತೆಗೆದುಹಾಕಿದೆ ಅಂತ ಹೇಳಿದರು. ಬಹಳ ಕಷ್ಟಪಟ್ಟರು. ಅವರು ಬ್ರಾಹ್ಮಣ್ಯದಿಂದ ಪಾರಾಗುವುದಕ್ಕೆ ಎಷ್ಟು ಕಷ್ಟಪಟ್ಟರೋ ಅಷ್ಟು ಕಷ್ಟಪಡಬೇಕಾಗಿಲ್ಲ ನಾವು. ಸುಲಭವಾಗಿ ನಾವು ಪಾರಾಗುತ್ತೇವೆ, ಏಕೆಂದರೆ ಹುಟ್ಟುತ್ತಲೆ ನಾವು ಬ್ರಾಹ್ಮಣರಲ್ಲ. ಇನ್ನೊಬ್ಬರು ನನ್ನ ವಿದ್ಯಾಗುರುಗಳಾಗಿ, ಯಾರಿಗೆ ನನ್ನ ರಾಮಾಯಣದರ್ಶನ ಮೇರುಕೃತಿಯನ್ನು ಅರ್ಪಿಸಿದ್ದೇನೆಯೋ ಆ ಶ್ರೀ ವೆಂಕಣ್ಣಯ್ಯನವರು, ಅವರೂ ಬ್ರಾಹ್ಮಣರೆ. ಆದ್ದರಿಂದ ನಾನು ಮಾತನಾಡುವುದು ಬ್ರಾಹ್ಮಣ ದ್ವೇಷದಿಂದ ಎನ್ನುವುದು ಬಹಳ ಹುಸಿ. ಹಾಗೆ ಭಾವಿಸುವುದು ತಪ್ಪು, ಹಾಗಲ್ಲ. ನಾನು ಮಾತನಾಡುತ್ತಿರುವ ಪುರೋಹಿತಶಾಹಿ ಅಂದರೆ, ನನ್ನ ಮಾತುಗಳು ಹಿಂದೂ ಮತಕ್ಕೂ ಅನ್ವಯಿಸುತ್ತವೆ, ಮುಸ್ಲಿಮರ ಮತಕ್ಕೂ ಅನ್ವಯಿಸುತ್ತವೆ, ಕ್ರಿಶ್ಚಿಯನ್ ಮತಕ್ಕೂ ಅನ್ವಯಿಸುತ್ತವೆ. ಏಕೆಂದರೆ ಎಲ್ಲೆಲ್ಲೂ ಈ ಪುರೋಹಿತಶಾಹಿ ಇದೇ ಕೆಲಸವನ್ನೇ ಮಾಡುತ್ತಾ ಬಂದಿದೆ. ಅದಕ್ಕೆ ವಿರುದ್ದ ಹೋರಾಟ ನಡೆದಿದೆ. ಆ ಹೋರಾಟದಲ್ಲಿ ಸ್ವಲ್ಪ ಮಟ್ಟಿಗೆ ಜಯಶೀಲರಾದವರೆಂದರೆ ಸೋವಿಯತ್ ದೇಶದವರು. ಅಲ್ಲಿಯೂ ಕೂಡ ಪೂರ್ತಿಯಾಗಿದೆಯೆಂದು ಹೇಳುವಂತಿಲ್ಲ. ಅವರನ್ನು ಬಿಟ್ಟರೆ ಚೀಣಾದವರು ಸ್ವಲ್ಪಮಟ್ಟಿಗೆ ಪುರೋಹಿತಶಾಹಿಯಿಂದ ಬಿಡಿಸಿಕೊಂಡಿದ್ದಾರೆಂದು ಕಾಣುತ್ತದೆ. ನನಗೆ ಅಷ್ಟು ವಿವರ ಗೊತ್ತಿಲ್ಲ. ಬಾಕಿಯವರೆಲ್ಲ ಇನ್ನೂ ಅದರಡಿಗೆ ಸಿಕ್ಕಿಕೊಂಡು ಹೋರಾಡುತ್ತಿದ್ದಾರೆ. ಇಂಗ್ಲೆಂಡಿನಲ್ಲಿ ಅಮೆರಿಕಾದಲ್ಲಿ ಮಹಾ ಮಹಾ ಲೇಖಕರು, ಜನತಾವಾದಿಗಳು, ನಾಸ್ತಿಕವಾದಿಗಳು, ಬರ್ಟ್ರಾಂಡ್‌ರಸಲ್, ಇಂಗರ್‌ಸಾಲ್ ಮುಂತಾದ ಅನೇಕರು ಇದಕ್ಕೋಸ್ಕರವಾಗಿ ಸಾಹಿತ್ಯ ಸೃಷ್ಟಿಮಾಡಿ ತುಂಬಾ ಶ್ರಮಪಟ್ಟಿದ್ದಾರೆ. ಆ ಶ್ರಮದಫಲ ನಿಜವಾಗಿ ತಕ್ಕಮಟ್ಟಿಗೆ ಕೈಗೂಡಿದೆ. ಆದರೂ ಇನ್ನೂ ನಡೀತಾನೆ ಇದೆ, ಈ ಪುರೋಹಿತಶಾಹಿಯ ಆಧಿಪತ್ಯ.
ನನ್ನ ಮಾತುಗಳಲ್ಲಿ "ನಾವು" "ನೀವು" "ಅವರು" ಅಂತ ಮೂರು ಸರ್ವನಾಮಗಳನ್ನು ಉಪಯೋಗಿಸುತ್ತಿದ್ದೇನೆ. ನಾವು, ನೀವು, ಅವರು ಅಂದರೆ ಏನು ಎನ್ನುವುದನ್ನು ವಿವರಿಸಿಬಿಡುತ್ತೇನೆ. ಮುಂದಕ್ಕೆ ಏನೂ ತೊಂದರೆಯಾಗುವುದಿಲ್ಲ. ಈ "ನೀವು" ಎಂದರೆ, ಯಾರು ಒಕ್ಕೂಟಕ್ಕೋಸ್ಕರ ನನ್ನನ್ನಿಲ್ಲಿಗೆ ಕರೆಸಿದ್ದೀರೊ ಆ ಮನೋಧರ್ಮವುಳ್ಳವರು-ನೀವು. "ಅವರು" ಎಂದರೆ. ಯಾರ ವಿರುದ್ದವಾಗಿ ನೀವು ಈ ಒಕ್ಕೂಟವನ್ನು ಮಾಡುತ್ತಿದ್ದೇವೆ ಅಂತ ಹೇಳುತ್ತೀದ್ದೀರೊ ಅವರು. "ನಾವು" ಎಂದರೆ ನೀವೂ ಅವರೂ ಇಬ್ಬರೂ ಸೇರಿ ಬೇರೆ ಬೇರೆ ಕಾರಣಗಳಿಗಾಗಿ ಯಾರನ್ನು ದೂರುತ್ತಿದ್ದೀರೋ, ಯಾರನ್ನು ಬೈಯ್ಯುತ್ತಿದ್ದೀರೋ ಅವರು-"ನಾವು". ಆದ್ದರಿಂದ ಈ ಮೂರು ಸರ್ವನಾಮಗಳನ್ನು ನಾನು ಪಾರಿಭಾಷಿಕ ಪದಗಳನ್ನಾಗಿ ಉಪಯೋಗಿಸುತ್ತಿದ್ದೇನೆ. ನೀವು ಅಂದಾಗ "ನೀವು". ಅವರು ಅಂದಾಗ "ಅವರು". ನಾವು ಅಂದಾಗ "ನಾವು".
ನೀವು ಹಳೆಯ ಸಾಹಿತ್ಯ, ಹಳೆಯ ಇದು ಅದು, ಹಳೆಯ ಧರ್ಮ ಇದೆಲ್ಲವೂ ನಮ್ಮನ್ನು ಇದುವರೆಗೂ ಅಡಿಯಾಳುಗಳನ್ನಾಗಿ ಮಾಡಿ ನಮ್ಮನ್ನು ತುಳಿದುಬಿಟ್ಟಿದೆ, ಆದ್ದರಿಂದ ಇದನ್ನೆಲ್ಲ ಸಂಪೂರ್ಣವಾಗಿ ತಿರಸ್ಕರಿಸಿಬಿಡುತ್ತೇವೆ, ಅಂತ ಹೊರಟರೆ ತುಂಬಾ ನಷ್ಟಕ್ಕೆ ಒಳಗಾಗಬೇಕಾಗುತ್ತದೆ. ನನ್ನನ್ನೊಮ್ಮೆ ದ್ರಾವಿಡ ಕಜಗಂನವರು ಯಾವುದೋ ಒಂದು ಅಧ್ಯಕ್ಷ ಸ್ಥಾನಕ್ಕೆ ಕರೆಯಲು ಬಂದಿದ್ದರು. ನಾನು ಅವರನ್ನು "ನಿಮ್ಮ ಈ ಚಳುವಳಿ ಇದೆಲ್ಲ ಸರಿಯೆ. ಆದರೆ ಏತಕ್ಕೆ ನೀವು ನಮ್ಮ ಹಿಂದಿನ ಮಹಾಕಾವ್ಯಗಳನ್ನು ಸುಟ್ಟುಹಾಕುತ್ತೀರಿ? ಅಥವಾ ಅಲ್ಲಿ ನಾವು ಗೌರವಿಸುವಂತಹ ವ್ಯಕ್ತಿಗಳಿಗೆ ಅವಮಾನ ಮಾಡುತ್ತೀರಿ?" ಅಂತ ಕೇಳ್ದೆ. ಅದಕ್ಕವರು "ಅವೆಲ್ಲ ಬ್ರಾಹ್ಮಣರಿಗಾಗಿ, ಆ ಬ್ರಾಹ್ಮಣ ವರ್ಗದಿಂದ ಮಾತ್ರ ಆದದ್ದು. ಅವರು ಕಥೆಗಳನ್ನೆಲ್ಲ ಕಟ್ಟಿ, ಮಾಡಿ, ಆ ಋಷಿಗಳು ಈ ಋಷಿಗಳು ಅಂತ ಹೇಳಿಬಿಟ್ಟು, ರಾಮಾಯಣದಲ್ಲಿ ನಮ್ಮನ್ನೆಲ್ಲ ಹೀಗಳೆದಿದ್ದಾರೆ. ಆದ್ದರಿಂದ ನಾವು ಅವುಗಳನ್ನೆಲ್ಲ ತಿರಸ್ಕರಿಸುವುದಕ್ಕೋಸ್ಕರ ಜನಗಳನ್ನು ಈ ರೀತಿ ಎತ್ತಿಕಟ್ಟುತ್ತಿದ್ದೇವೆ"-ಅಂತ ಹೇಳಿದರು. ನಾನು ಅವರಿಗೊಂದು ಪ್ರಶ್ನೆ ಕೇಳಿದೆ. "ನೀವು ಆಧುನಿಕರು-ಅಲ್ಲಿ ಬಂದಿದ್ದವರು-ನಿಮ್ಮ ಹೆಂಡತಿ ಅತ್ಯಂತ ಆಧುನಿಕ ಸ್ತ್ರೀ. ನಿಮ್ಮ ಮನೆಯಲ್ಲಿ ನಿಮ್ಮ ಅಜ್ಜಿ ಹಾಕುತ್ತಿದ್ದಂತಹ ಚಿನ್ನದ ಆಭರಣಗಳು, ಬುಗುಡಿಯೋ ಬೆಂಡೋಲೆಯೋ ಅವೆಲ್ಲ ಇರುತ್ತವಲ್ಲ, ಆ ಆಭರಣಗಳನ್ನೆಲ್ಲ ನಿಮ್ಮ ಹೆಂಡತಿ ತೆಗೆದು ಒಲೆಗೆ ಹಾಕಿದರೇನು? ಬಿಸಾಕಿದರೇನು?...." "ಇಲ್ಲ. ಇಲ್ಲ. ಯಾಕೆ ಬಿಸಾಕ್ತಾರೆ?...." "ಮತ್ತೇನು ಮಾಡಿದರು....?" "ಏನು ಮಾಡಿದರೂ ಅಂದ್ರೆ ಅದನ್ನೆಲ್ಲ ಕರಗಿಸಿ ಆ ಚಿನ್ನಾನ ನಮ್ಮ ಇಷ್ಟಕ್ಕೆ ಅನುಸಾರವಾಗಿ ನಾವು ಬೇರೆ ರೀತಿಯಲ್ಲಿ ಆಭರಣ ಮಾಡಿಸಿಕೊಂಡು ಉಪಯೋಗಿಸುತ್ತಿದ್ದೇವೆ." ಅಂದರೆ, ಆಭರಣದ ರೂಪ ಯಾವುದಾದರೂ ಇರಲಿ ಆಭರಣದ ವಸ್ತು ಇದೆಯಲ್ಲಾ ಅದು ತುಂಬಾ ಬೆಲೆಯುಳ್ಳದ್ದು, ಅದನ್ನು ಎಸೆದರೆ ಮೂರ್ಖರಾಗುತ್ತೀರಿ. ಹಾಗೆಯೆ ರಾಮಾಯಣ ಮಹಾಭಾರಣ ಇತರ ಯಾವುದೇ ಕತೆಗಳಾಗಿರಲಿ ಅವನ್ನು ಬಿಸಾಡುವುದಲ್ಲ, ಅವನ್ನು ಕರಗಿಸಿ ನಮ್ಮ ಹೊಸ ಧ್ಯೇಯ ಹೊಸ ಇಷ್ಟಗಳಿಗೆ ಅನುಸಾರವಾಗಿ ಅವುಗಳನ್ನು ನೀವು ನಿಮ್ಮ ಸಾಹಿತ್ಯದಲ್ಲಿ ಎರಕ ಹೊಯ್ಯಬೇಕು. ಏಕೆಂದರೆ ಆ ಎರಕಗಳ ಮೂಲಕ, ಆ ಕಥಾವ್ಯಕ್ತಿಗಳ ಮೂಲಕ ನೀವು ನಿಮ್ಮ ಧ್ಯೇಯಗಳನ್ನು ಪ್ರಸಾರ ಮಾಡಲು ತುಂಬಾ ಸುಲಭವಾಗುತ್ತದೆ. ಬೇಗ ಬೇಗ ಹಿಡಿಸುತ್ತದೆ ಜನಗಳಿಗೆ. ಆದ್ದರಿಂದಲೆ ನಾನು ಈ ನಿದರ್ಶನ ಕೊಟ್ಟೆ.
ಈಗ ನಾನು ಶ್ರೀರಾಮಾಯಣ ದರ್ಶನಂ ಬರೆದಿದ್ದೇನೆ. ಅದನ್ನು ನೋಡಿ. ಸಂಪೂರ್ಣವಾಗಿ, ಹಿಂದಿನ ಮನೋಧರ್ಮಕ್ಕೂ ಈ ಮಹಾಕಾವ್ಯದಲ್ಲಿ ಅಭಿವ್ಯಕ್ತಗೊಂಡಿರುವ ದಾರ್ಶನಿಕ ಧರ್ಮಕ್ಕೂ ಒಂದು ಚೂರೂ ಸಂಬಂಧವಿಲ್ಲ. ಪ್ರಾರಂಭದಲ್ಲಿಯೆ ಶುರುವಾಗುತ್ತದೆ "ಬುಧರೊಲಿದ ಸಮದರ್ಶನವನೊಪ್ಪಿ"-ದಶರಥನ ಯಾಗ ಶುರುವಾಗುತ್ತದೆ. ಮೇಲುಜಾತಿ ಕೀಳುಜಾತಿ ಭೇದವನ್ನೆಲ್ಲ ಲೆಕ್ಕಿಸದೆ ಅಂತಲೆ ಶುರುವಾಗುತ್ತದೆ. ಹಾಗೆಯೆ ಉದ್ದಕ್ಕೂ ಆ ಕಾವ್ಯದಲ್ಲಿ ಎಲ್ಲಿಯೂ ಹಳೆಯ ಸಂಕುಚಿತ ಮನೋಧರ್‍ಮದ ಭಾವನೆಗಳು ಸುಳಿಯುವುದಕ್ಕೇ ಸಾಧ್ಯವಿಲ್ಲದಂತೆ ಮುಂದುವರಿಯುತ್ತದೆ. ಹಾಗೆಯೇ ನಾನು ಅವರಿಗೆ ಇನ್ನೊಂದು ಉದಾಹರಣೆಯನ್ನೂ ಕೊಟ್ಟೆ. "ಶೂದ್ರತಪಸ್ವಿ" ಎಂಬ ನನ್ನ ನಾಟಕವನ್ನು. ಶಂಭೂಕ ತಪಸ್ಸು ಮಾಡುತ್ತಾ ಇದ್ದ ಅಂತ, ಅವನು ತಪಸ್ಸು ಮಾಡಿದ್ದಕ್ಕೆ ತನ್ನ ಮಗ ಸತ್ತುಹೋದ ಅಂತ, ಅವನನ್ನು ಕೊಲ್ಲಲು ಒಬ್ಬ ಬ್ರಾಹ್ಮಣ ರಾಮನನ್ನು ಕರೆದುಕೊಂಡು ಹೋಗುತ್ತಾನೆ. ಅದು ಹಿಂದಿನ ಕಥೆ. ಆ ಕಥೆಯನ್ನೇ ನಾನು 'ಶೂದ್ರತಪಸ್ವಿ' ನಾಟಕದಲ್ಲಿ ಬಳಸಿಕೊಂಡಿದ್ದೇನೆ. ಆದರೆ ಸಂಪೂರ್ಣವಾಗಿ, ಬ್ರಾಹ್ಮಣ ಏನು ಅವಿವೇಕ ಮಾಡಿದ? ಆ ಅವಿವೇಕವನ್ನು ರಾಮ ಹೇಗೆ ತಿದಿದ್ದ? ಎಂಬುದು ಚಿತ್ರಿತವಾಗಿದೆ. ತಪಸ್ಸು ಬಹಳ ದೊಡ್ಡದು, ಯೋಗ್ಯವಾದದ್ದು. ಯಾರು ಮಾಡಿದರೂ ಅದು ದೊಡ್ಡದೆ-ಅನ್ನುವ ಭಾವನೆ ಅಲ್ಲಿ ಬರುತ್ತದೆ. ಹೀಗೆ ಆ ಹಿಂದಣ ಅಮೂಲ್ಯ ಸಾಹಿತ್ಯವನ್ನೆಲ್ಲ ನೀವು ಎಸೆಯುವುದಕ್ಕೆ ಹೋಗದೆಯೆ, ಆ ಚಿನ್ನದ ಆಭರಣಗಳನ್ನೆಲ್ಲ ಕರಗಿಸಿ ನಮ್ಮ ನಮ್ಮ ಧ್ಯೇಯಕ್ಕೆ, ನಮ್ಮ ಇಷ್ಟಕ್ಕೆ ಅನುಸಾರವಾಗಿ ಅವುಗಳನ್ನು ಎರಕ ಹೊಯ್ದುಕೊಳ್ಳಬೇಕು. ಹೊನ್ನನ್ನು ಎಸೆಯುವ ಗಾಂಪತನದ ಆ ನಷ್ಟಕ್ಕೆ ಒಳಗಾಗಬಾರದು. ಮತ್ತೆ ಹೊಸದಾಗಿ ಸೃಷ್ಟಿಸಿರಿ. ಯಾರು ಬೇಡವೆನ್ನುತ್ತಾರೆ. ಹೊಸ ಕಾದಂಬರಿಗಳು, ಹೊಸದನ್ನು ಬರೆಯುವಾಗ ಸಂಪೂರ್ಣವಾಗಿ ಹೊಸ ದೃಷ್ಟಿಯೇ ಬರುತ್ತಾ ಇದೆ. ಅದನ್ನೂ ಸೇರಿಸಿ. ಅದರೆ ಹಳೆಯದೆಲ್ಲ ತಿರಸ್ಕಾರವಾದುದು ಅಂತ ಹೇಳಿಬಿಟ್ಟು ಅದನ್ನು ಎಸೆದುಬಿಡುವಂತಹ ಮನೋಧರ್ಮದಿಂದ ನಮ್ಮ ಸಂಸ್ಕೃತಿಗೆ ನಷ್ಟವಾಗುತ್ತದೆ. ಹಾಗೆ ದುಡುಕದೆ ಸ್ವಲ್ಪ ವಿವೇಚನೆಯಿಂದ ಮುಂದವರಿಯಿರಿ ಎನ್ನುವುದು ನನ್ನದೊಂದು ಸಲಹೆ, ಈ ಬರಹಗಾರರ ಒಕ್ಕೂಟಕ್ಕೆ. ಏಕೆಂದರೆ ಹಳೆಯದನ್ನೆಲ್ಲ ತೆಗೆದು ಬಿಸಾಡುತ್ತೇವೆ ಎನ್ನುವುದೆಲ್ಲ ಸ್ವಲ್ಪ ರಭಸಮತಿ ಮತ್ತು ರೋಷವರ್ತನೆಯಿಂದ ಪ್ರಚೋದಿತವಾಗಿದ್ದರೆ ಅದು ತಪ್ಪಾಗುತ್ತದೆ.
ನಮ್ಮ ಜಾತಿಪದ್ಧತಿ ವರ್ಣಾಶ್ರಮ ಇವುಗಳೆಲ್ಲ ಯಾವತ್ತಿನಿಂದ ಪ್ರಾರಂಭವಾಯಿತೆಂದರೆ ಮೊದಲಿನಿಂದ ಅಲ್ಲ. ಅದು ಈ ಪುರಾಣಗಳು ಪ್ರಾರಂಭವಾದುವಲ್ಲ ಆವಾಗಿನಿಂದ ಶುರುವಾಯಿತು. ಪ್ರಾರಂಭದಲ್ಲಿ ಜಾತಿ ಅನ್ನೋ ಭಾವನೆಯೇ ಇಲ್ಲ. ನೀವು ಉಪನಿಷತ್ತಿನ ಮಟ್ಟಕ್ಕೆ ಹೋದರೆ ಅಲ್ಲಿ ವಿಶ್ವತತ್ತ್ವಗಳಿವೆಯೇ ಹೊರತು ಅವು ಯಾವುದೋ ಒಂದು ದೇಶಕ್ಕೆ, ಒಂದು ಮತಕ್ಕೆ ಸಂಬಂಧ ಪಡತಕ್ಕಂತಹವಲ್ಲ. ಅಂತಹ ವಿಶ್ವತತ್ತ್ವಗಳನ್ನು ನಾವು ಮಾತ್ರವಲ್ಲ, ಪ್ರಪಂಚದ ಜನತೆ, ಬುದ್ದಿವಂತ ಜನತೆಯೆಲ್ಲ ಮಾನ್ಯಮಾಡುತ್ತದೆ. ಅದ್ದರಿಂದ ಅಂತಹ ಸತ್ವವಿರತಕ್ಕಂತಹ ವಸ್ತುವನ್ನು ನಾವು ತಿರಸ್ಕರಿಸದೆ ಅವುಗಳನ್ನು ಸ್ವಿಕರಿಸಬೇಕಾಗುತ್ತದೆ. ವಿಶೇಷವಾಗಿ ನೀವು ಒಕ್ಕೂಟದ ಉದ್ದೇಶವನ್ನು ಹೇಳುತ್ತಾ, ಅರ್ಧ ರಾಜಕೀಯದ ಉದ್ದೇಶಗಳನ್ನು ಹೇಳಿದಿರಿ. ಆದರೆ ನಾನು ನೀವು ಬರಹಗಾರರು ಮತ್ತು ಕಲಾವಿದರು ಎನ್ನುವ ದೃಷ್ಟಿಯಿಂದ ಮಾತನಾಡುತ್ತಿದ್ದೇನೆ. ಏಕೆಂದರೆ ಸಾಹಿತ್ಯಸೃಷ್ಟಿ ಮೊದಲಾದುವುಗಳಿಂದಲೇ ನೀವು ಜನತೆಯನ್ನು ಎಚ್ಚರಿಸಬೇಕಾಗುತ್ತದೆ, ವಿಚಾರದತ್ತ ಒಯ್ಯಬೇಕಾಗುತ್ತದೆ. ಹಿಂದೆ ಒಮ್ಮೆ ನಾನು ಜಾತಿವಿನಾಶ ಸಮ್ಮೇಳನದಲ್ಲಿ ಮಾತನಾಡುತ್ತಾ ಹೇಳಿದ್ದೆ: ಹೀಗೆ ಸುಮ್ಮನೆ ನೀವು ಯಾವುದಾದರೊಂದು ಪುರೋಹಿತ ವರ್ಗವನ್ನು ಬರೀ ಬೈದರೆ, ದೂಷಣೆ ಮಾಡಿದರೆ, ಏನೂ ಪ್ರಯೋಜನವಿಲ್ಲ. ಏಕೆಂದರೆ ಈಗ್ಗೆ ಐವತ್ತು ವರ್ಷಗಳ ಹಿಂದೆಯಾದರೂ ಕೂಡ ಈ ಜಾತಿಪದ್ದತಿ ಎಷ್ಟು ಬಿಗಿಯಾಗಿತ್ತೆಂದರೆ ಬಹಿಷ್ಕಾರ ಹಾಕುವುದು, ಮಾಡುವುದು ಭಯಂಕರವಾಗಿರುತ್ತಿತ್ತು. ಈಗ ನೀವು ಯಾರನ್ನು ಯಾರುಬೇಕಾದರೂ ಮದುವೆಯಾಗಿ, ಯಾರೂ ಬಹಿಷ್ಕಾರ ಹಾಕುವುದಿಲ್ಲ.[] ನಿಮ್ಮ ಮನೆಯಲ್ಲೋ ಸಮಾಜದಲ್ಲೋ ಸಣ್ಣ ಸಣ್ಣ ದೂಷಣೆಗಳಿರಬಹುದೇ ಹೊರತು, ಯಾವ ಗುರುವೂ ಬಹಿಷ್ಕಾರ ಹಾಕಲು ಬಂದರೆ ಅವನು ದೋಷಿಯಾಗುತ್ತಾನೆಯೇ ಹೊರತು ಬೇರೆಯವರಲ್ಲ. ಆದ್ದರಿಂದ ಯಾವ ಬ್ರಾಹ್ಮಣನಾಗಲಿ, ಯಾವ ಪೂಜಾರಿಯಾಗಲಿ, ಯಾವ ದೇವಸ್ಥಾನವಾಗಲಿ, ಯಾವ ಭಟ್ಟರಾಗಲಿ ಅವರೇ ನಿಮ್ಮನ್ನೇನೂ ಕರೆಯುವುದಿಲ್ಲ. ನೀವೇ ಹೋಗಿ ಕರೆದು ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡಿ ನಿಮ್ಮ ಬೆಲೆಯನ್ನೆ ತೆತ್ತು, ಅವರಿಗೆ ಬೆಲೆಕೊಟ್ಟು ಬರುತ್ತೀರಿ. ಆದ್ದರಿಂದ ನೀವು ಏನುಮಾಡಬೇಕಾಗುತ್ತದೆ ಎಂದರೆ, ನಿಮ್ಮ ಯುವಕವರ್ಗ ಇದೆಯಲ್ಲ ಅವರನ್ನು ಆಲೋಚನಾಪರರನ್ನಾಗಿ ಮಾಡಬೇಕಾಗುತ್ತದೆ. ಅವನಿಗೆ ಈ ಸ್ವತಂತ್ರ ವಿಚಾರವನ್ನು ಕೊಡಬೇಕಾಗಿ ಬರುತ್ತದೆ. ನಲವತ್ತು ವರ್ಷಗಳ ಹಿಂದೆಯೇ ನಾನು 'ನಿರಂಕುಶಮತಿಗಳಾಗಿ' ಎಂದು ಒಂದು ಭಾಷಣಮಾಡಿ ಪತ್ರಿಕೆಗಳಲ್ಲೆಲ್ಲ ಬೈಸಿಕೊಂಡಿದ್ದೇನೆ. ಆದರೆ ಕೆಲವು ಕಾಲದ ಮೇಲೆ, 'ನಿರಂಕುಶಮತಿಗಳಾಗಿ' ಎನ್ನುವುದಕ್ಕೆ, ಅದರ ಬರಿಯ ನಿಷೇಧಾರ್ಥವನ್ನೇ ಹುಡುಗರು ಗಮನಕ್ಕೆ ತೆಗೆದುಕೊಳ್ಳಬಾರದೆಂದು ಅದರಲ್ಲಿರುವ ಆ ನಾಲ್ಕು ಪ್ರಬಂಧಗಳಲ್ಲಿ ಕೊನೆಯ ಉಪನ್ಯಾಸದ ಶೀರ್ಷಿಕೆ 'ವಿದ್ಯಾರ್ಥಿಗಳಿಗೇಕೆ ಆತ್ಮಶ್ರೀ' ಎಂದಿರುವುದನ್ನೂ ತೆಗೆದುಕೊಂಡು 'ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ' ಅಂತ-ಸೃಜನಾತ್ಮಕವಾಗಿಯೂ ಇರಲಿ ಎಂದು ಸ್ವಲ್ಪ ಬದಲಾಯಿಸಿದೆ, ಆ ಗ್ರಂಥದ ಶೀರ್ಷಿಕೆಯನ್ನು. ಏಕೆಂದರೆ ನಿಮಗೆ ಎಲ್ಲಾ ಶ್ರೀಗಳೂ -ದೇಹಶ್ರೀ, ಭಾವಶ್ರೀ, ಬುದ್ಧಿಶ್ರೀ, ಆತ್ಮಶ್ರೀ-ಆವಶ್ಯಕ. ಎಲ್ಲಕ್ಕೂ ಮೂಲವಾದ ಶ್ರೀ ಆತ್ಮಶ್ರೀ. ನನ್ನ ದೃಷ್ಟಿಯಲ್ಲಿ ಆತ್ಮಶ್ರೀ ಸರ್ವತೋಮುಖವಾದುದು. ಅದನ್ನು ನೀವು ಮರೆಯಬಾರದು.
ಇಲ್ಲಿಯೂ ಯಾವ ತತ್ವವಾಗಲಿ ನಿಮ್ಮಿಂದ ಸ್ವೀಕಾರವಾಗುವುದಕ್ಕೆ ಅರ್ಹತೆ ಪಡೆಯಬೇಕಾದರೆ ಅದು ವಿಶ್ವಕ್ಕೆ, ವಿಶ್ವಜನತೆಗೆಲ್ಲ ಅನ್ವಯವಾಗುವಂತಿದ್ದರೆ ಮಾತ್ರ ಗ್ರಾಹ್ಯ. ಬರೀ ಹಿಂದೂಗಳಿಗೆ, ಹಿಂದೂ ದೇಶಕ್ಕೆ, ಅವರಿಗೆ ಇವರಿಗೆ ಅಲ್ಲ. ವಿಶ್ವಕ್ಕೆಲ್ಲ ಅನ್ವಯವಾಗುವಂತಿದ್ದರೆ ಅದನ್ನು ನೀವು ಮಾನ್ಯಮಾಡಲೇ ಬೇಕು. ಅದು ವೈಜ್ಞಾನಿಕ ಸತ್ಯದಂತೆ ಶಾಶ್ವತ ಸತ್ಯ. ಇಂತಹ ಶಾಶ್ವತ ಸತ್ಯದ ಕೇಂದ್ರಗಳು ನಮ್ಮ ಪ್ರಾಚೀನ ಸಾಹಿತ್ಯ ಸಂಸ್ಕೃತಿಗಳಲ್ಲಿವೆ. ಆ ಕೇಂದ್ರಗಳನ್ನು ನಾವು ರಕ್ಷಿಸಿಕೊಳ್ಳಬೇಕಾಗಿ ಬರುತ್ತದೆ. ಹಳೆಯದಕ್ಕೆ ಹೊಸ ವ್ಯಾಖ್ಯಾನಗಳನ್ನು ಏಕೆ ಮಾಡಬೇಕಾಗಿ ಬರುತ್ತದೆ ಎಂದರೆ, ಒಂದು ನಿದರ್ಶನ ತೆಗೆದುಕೊಳ್ಳಿ. ಚಾತುರ್ವರ್ಣ್ಯ: ಗೀತೆಯಲ್ಲಿ ಚಾತುರ್ವರ್ಣ್ಯದ ವಿಚಾರ ಬರುತ್ತದೆ. ಗೀತೆಯನ್ನು ಪ್ರಪಂಚದಾದ್ಯಂತ ಅತ್ಯಂತ ಮಹೋನ್ನತವಾದ ಆಧ್ಯಾತ್ಮಿಕ ಕೃತಿಯೆಂದು ಎಲ್ಲರೂ ಭಾವಿಸುತ್ತಾರೆ. ಆದರೆ ಶ್ರೀ ಕೃಷ್ಣ "ಚಾತುರ್ವರ್ಣ್ಯಂ ಮಯಾ ಸೃಷ್ಟಂ" "ನಾಲ್ಕು ವರ್ಣಗಳನ್ನು ನಾನೆ ಸೃಷ್ಟಿಸಿದ್ದೇನೆ" ಅಂತ ಹೇಳಿಬಿಟ್ಟನಲ್ಲಾ ಎಂದು ಇಡೀ ಗೀತೆಯನ್ನು ಎಸೆಯುವುದಕ್ಕೆ ಹೋಗಬಾರದು. ಅದಕ್ಕೆ ಬೇರೆ ವ್ಯಾಖ್ಯಾನ ಮಾಡಬೇಕು, ಸರಿಯಾದ ಸರ್ವಸಮ್ಮತವಾದ ರೀತಿಯಲ್ಲಿ, ವಿಶ್ವಕ್ಕೆಲ್ಲ ಅನ್ವಯವಾಗುವಂತೆ.[]
ಆ ವ್ಯಾಖ್ಯಾನ ಮಾಡುವವರು ಯಾರು? ಲೇಖಕರು, ಬರಹಗಾರರು, ನೀವು. ನಮ್ಮ ಹಿಂದಿನ ಆಚಾರ್ಯ ವರ್ಗವೆಲ್ಲ ಅದನ್ನು ತೆಗೆದುಕೊಂಡು ಅತ್ಯಂತ ಅವಿವೇಕವಾಗಿ ವ್ಯಾಖ್ಯಾನ ಮಾಡಿದ್ದಾರೆ. ಚಾತುರ್ವರ್ಣ್ಯ ಎನ್ನುವುದನ್ನು ಬ್ರಾಹ್ಮಣ, ಕ್ಶತ್ರಿಯ, ವೈಶ್ಯ, ಶೂದ್ರ ಎಂದು ಬೇರೆ ಬೇರೆ ಜಾತಿ ಮಾಡಿಟ್ಟರು. ತಾವೇ ಮಾಡಿದ್ದನ್ನು ದೇವರಿಗೆ ಆರೋಪಿಸಿದರು. ಪಾಪ, ದೇವರಾದರೂ ಏನು ಮಾಡುತ್ತಾನೆ. ಈ ಮಾನವರ ಬುದ್ಧಿಮಾಂದ್ಯಕ್ಕೆ? ಆದ್ದರಿಂದಲೆ ಈಚಿನವರು, ಶ್ರೀ ಅರವಿಂದರಂಥವರು, ಈ ಚಾತುರ್ವರ್ಣ್ಯ ಎನ್ನುವುದು ಮನಃಶಾಸ್ತ್ರಕ್ಕೆ ಸಂಬಂಧಪಟ್ಟುದೆ ಹೊರತು ಮನುಧರ್ಮ ಮನುಧರ್ಮಶಾಸ್ತ್ರಕ್ಕೆ ಸಂಬಂಧಪಟ್ಟುದಲ್ಲ ಎಂದಿದ್ದಾರೆ.
ಚಾತುರ್ವರ್ಣ್ಯವು ಮನುಷ್ಯ ಮಾಡಿದ ಚತುರ್ವರ್ಣ ಅಲ್ಲ. ಅದು ನಿಸರ್ಗವೆ ಮಾಡಿದ ಮನಸ್ಸಿನ ಶಾಸ್ತ್ರವಿದೆಯಲ್ಲ ಅದಕ್ಕೆ ಸಂಬಂಧಪಟ್ಟದ್ದು. ಅದು ಭರತಖಂಡಕ್ಕೆ ಮಾತ್ರವಲ್ಲ. ಹಿಂದೂಗಳಿಗೆ ಮಾತ್ರವಲ್ಲ, ಅಮೆರಿಕನ್ನರಿಗೂ, ಯೂರೋಪಿಯನ್ನರಿಗೂ, ಆಫ್ರಿಕನ್ನರಿಗೂ, ಜಗತ್ತಿನಲ್ಲಿ ಇರುವವರಿಗೆಲ್ಲ ಅನ್ವಯವಾಗಬೇಕು.[] ಚಾತುರ್ವರ್ಣ್ಯ ಎಂದರೆ ಏನು ಅರ್ಥ? "ಮಯಾ ಸೃಷ್ಟಂ" ಎಂದರೆ, ಶ್ರೀಕೃಷ್ಣ, ಅವರೇ ಹೇಳಿರುವಂತೆ ಅವನು ಭಗವಂತನಾದ್ದರಿಂದ, ಭಗವಂತನೇ ಸೃಷ್ಟಿಮಾಡಿದ್ದೇ ಹೊರತು ಮನು ಮುಂತಾದ ಧರ್ಮಶಾಸ್ತ್ರಜ್ಞರು ಸೃಷ್ಟಿಮಾಡಿದ್ದು ಅಂತ ಆಗುವುದಿಲ್ಲ. ಆದರೆ ಅದಕ್ಕೆ ನಮ್ಮ ದೊಡ್ಡ ದೊಡ್ಡ ಆಚಾರ್ಯವರ್ಗದವರು, ಹಿಂದಿನವರು ಮಾತ್ರವಲ್ಲ ಇಪ್ಪತ್ತನೆಯ ಶತಮಾನದ ಇಂದಿನವರೂ, ಸ್ವಜಾತಿ ಸ್ವಾರ್ಥದೃಷ್ಟಿಯಿಂದ ತಪ್ಪು ತಪ್ಪು ವ್ಯಾಖ್ಯಾನಗಳನ್ನೆಲ್ಲ ಮಾಡಿ, ತಮ್ಮ ಜಾತಿಶ್ರೇಷ್ಠತೆಯನ್ನು ರಕ್ಷಿಸಿಕೊಂಡು ಬಾಕಿಯವರನ್ನೆಲ್ಲ ಉಳಿಗದವರನ್ನಾಗಿ ಮಾಡಬೇಕೆಂಬ ಉದ್ದೇಶದಿಂದ ಆ ರೀತಿ ಮಾಡಿಕೊಂಡು ಹೋಗಿದ್ದಾರೆ.
ಒಬ್ಬ ಆಚಾರ್ಯರಂತೂ ಎಲ್ಲಿಯವರೆಗೆ ಹೋಗಿದ್ದಾರೆಂದರೆ, ಈಗಾಗಲೆ ಇರುವ ಜಾತಿಭೇದ ವರ್ಣಭೇದಗಳು ಸಾಲದೆಂದು ಅವರು ಜೀವಗಳನ್ನೆಲ್ಲ ಮುಕ್ತಿಯೋಗ್ಯರು, ನಿತ್ಯಸಂಸಾರಿಗಳು, ತಮೋಯೋಗ್ಯರು ಅಥವಾ ನಿತ್ಯನಾರಕಿಗಳು ಅಂತ ವಿಭಜಿಸಿ ಬಿಟ್ಟಿದ್ದಾರೆ.[]
ಶ್ರೀಮಧ್ವರ ಪ್ರಕಾರ: ಎಲ್ಲ ಜೀವರೂ ತಮ್ಮ ಸ್ವರೂಪದಲ್ಲಿ ಒಂದೇ ತರದವರಲ್ಲ. ಜೀವನ ಸ್ವರೂಪವು ಅಚಲವಾದದ್ದು, ಬದಲಾವಣೆ ಹೊಂದದ್ದು, ನಿತ್ಯವಾದದ್ದು. ಅದನ್ನು ಬದಲಾಯಿಸುವುದು ಎಂದೆಂದಿಗೂ ಸಾಧ್ಯವೇ ಇಲ್ಲ. ಜೀವನ ಪರಮ ಅಥವಾ ಅಂತಿಮಗಮ್ಯ ಅದರ ಸ್ವರೂಪದಿಂದ ನಿರ್ಧಾರಿತವಾಗುತ್ತದೆ. ಒಟ್ಟಿನಲ್ಲಿ ಮೂರು ವರ್ಗದ ಜೀವರುಗಳಿದ್ದಾರೆ: (೧) ಮುಕ್ತಿಯೋಗ್ಯರು-ಮೋಕ್ಷವೆ ಪರಮ ಅಥವಾ ಅಂತಿಮಗಮ್ಯರಾದವರು. (೨) ನಿತ್ಯಸಂಸಾರಿಗಳು-ಸದಾಕಾಲಕ್ಕೂ ಹುಟ್ಟುತ್ತಾ ಸಾಯುತ್ತಾ ಜನ್ಮ-ಮೃತ್ಯುಗಳ ನಡುವೆ ತೊಳಲುತ್ತಿರುವವರು. (೩) ತಮೋಯೋಗ್ಯರು-ನಿತ್ಯನರಕಭಾಜನರು. ಇವರಿಗೆ ಉದ್ಧಾರವೇ ಇಲ್ಲ.
ಯಾವ ಜೀವವೂ ತನ್ನ ಸ್ವರೂಪವನ್ನು ಮೀರುವುದಾಗಲಿ, ಬದಲಾಯಿಸುವುದಾಗಲಿ ಸಾಧ್ಯವಿಲ್ಲ.[]
ಲ್ಯಾಬೋರೇಟರಿಯಲ್ಲಿ ನಾವು ಪದಾರ್ಥಗಳನ್ನು ವಿಭಜಿಸುತ್ತೇವಲ್ಲ ಹಾಗೆ! ಮುಕ್ತಿಯೋಗ್ಯರು ಅಂತ ಒಂದು ಗುಂಪಂತೆ; ತಮೋಯೋಗ್ಯರು ಅಂತ ಒಂದು ಗುಂಪು. ಅವರೆ ನರಕಕ್ಕೇ ಹೋಗುವರಂತೆ. ಈ ನಿತ್ಯಸಂಸಾರಿಗಳು ಅಂತ ಒಂದು ಗುಂಪು. ಅವರು ಹುಟ್ಟುವುದು ಸಾಯುವುದು, ಹುಟ್ಟೋದು ಸಾಯೋದು-ಇದರೊಳಗೆ ಸುತ್ತುತ್ತಾ ಇರತಕ್ಕಂಥವರು, ಅವರಿಗೆ ಮುಕ್ತಿ ಇಲ್ಲ. ಇದನ್ನು ಆ ಸ್ವಯಂ ಆಚಾರ್ಯರು ಹೇಳಿಬಿಟ್ಟರೂ ಅಂತ ಎಲ್ಲರೂ ಒಪ್ಪಿಕೊಂಡು, ಅದಕ್ಕೇನು ವ್ಯಾಖ್ಯಾನ ಟೀಕೆ ಟಿಪ್ಪಣಿಗಳನ್ನು ಬರೆದದ್ದೂ ಬರೆದದ್ದೆ! ಈ ಆಚಾರ್ಯರ ದೃಷ್ಟಿ ಲೋಕಜೀವನಕ್ಕೆ ಎಷ್ಟು ಅಪಾಯಕಾರಕ?[] ನೋಡಿ ಸ್ವಲ್ಪ. ಈಗ ಒಬ್ಬ ತಾನು ಮುಕ್ತಿಯೋಗ್ಯ ಅಂತ ತಿಳಿದುಕೊಂಡುಬಿಟ್ಟ ಅಂದರೆ ಅವನು ಏನೇ ಮಾಡಲಿ, ಕೊಲೆ ಮಾಡಲಿ, ಹಾದರ ಮಾಡಲಿ ಅವನು ಮುಕ್ತಿಯೋಗ್ಯನಾದುದರಿಂದ ಅವನಿಗೆ ಮುಕ್ತಿ ದೊರಕಿಯೇ ದೊರಕುತ್ತದೆ. ಇಷ್ಟು ಖಾತ್ರಿ ಆದ ಮೇಲೆ ಅವನೇಕೆ ಕೊಲೆ ಮಾಡಬಾರದು. ಹಾದರಮಾಡಿ ಸುಖಪಡಬಾರದು? ಏಕೆಂದರೆ ಮುಕ್ತಿ ಅವನಿಗೆ ಕಟ್ಟಿಟ್ಟ ಬುತ್ತಿ. ಹಾಗೆಯೆ ಈ ನಿತ್ಯನಾರಕಿ. ಇವನು ಕೊನೆಗೆ ನರಕಕ್ಕೇ ಹೋಗುತ್ತಾನೆ! ಏನೇ ಮಾಡಲಿ ಬಿಡಲಿ, ಅವನು ನರಕದಲ್ಲಿ ಎಂದೆಂದಿಗೂ ಬಿದ್ದಿರಬೇಕಾಗುತ್ತದೆ. ಅವನು ತಪಸ್ಸುಮಾಡಿದರೂ ಒಂದೇ, ಕೊಲೆಮಾಡಿದರೂ ಒಂದೇ, ಧ್ಯಾನಮಾಡಿದರೂ ಒಂದೇ, ಹಾದರ ಮಾಡಿದರೂ ಒಂದೇ, ಎಂತಿದ್ದರೂ ನರಕಕ್ಕೇ ಹೋಗುತ್ತಾನೆ. ಆದ್ದರಿಂದ ಎಷ್ಟು ತಪಸ್ಸು ಮಾಡಲಿ, ಎನೇ ಮಾಡಲಿ ಏನೂ ಪ್ರಯೋಜನವಾಗುವುದಿಲ್ಲ. ಆದ್ದರಿಂದ ಅವನು ತಾನು ಇಹದಲ್ಲಿ ಮಜವಾಗಿರಲು ಏನು ಬೇಕಾದರೂ ಮಾಡುತ್ತೀನಿ ಎಂದು ಸುಳ್ಳು, ಮೋಸ, ಕಳವು, ಕೊಲೆ, ಹಾದರ ಏನನ್ನು ಬೇಕಾದರೂ ಮಾಡಲು ಹೇಸುವುದಿಲ್ಲ. ಇದೇ ತತ್ವವನ್ನು ನಿತ್ಯಸಂಸಾರಿಗಳೂ ಒಪ್ಪಿ, ಎಂತಿದ್ದರೂ ನಮ್ಮ ಪಾಡು: ಹುಟ್ತೀವಿ, ಸಾಯ್ತೀವಿ. ಹುಟ್ಟು ಸಾವಿನ ಚಕ್ರದಲ್ಲಿ ಸುತ್ತುತ್ತಲೇ ಇರುವುದು. ನಾವು ಹೇಗೆ ಬೇಕಾದರೂ ಬದುಕುತ್ತೇವೆ ಎಂದರೆ ಏನು ಗತಿ? ಈ ತತ್ವವನ್ನು ಒಪ್ಪಿ ಅನುಸರಿಸಿದರೆ ಸಮಾಜವೇ ಅಲ್ಲೋಲ ಕಲ್ಲೋಲವಾಗಿ ಬಿಟ್ಟೀತು. ಆದರೆ ಈ ತತ್ವವನ್ನೇ ಅನುಸರಿಸಿಕೊಂಡು ದೊಡ್ಡದೊಂದು ಶಾಸ್ತ್ರ ಗೀಸ್ತ್ರ ಮಾಡಿ, ಮಜಾ ಮಾಡ್ತಾ ಇದ್ದಾರೆ ನೋಡಿ!
ಅದಕ್ಕೋಸ್ಕರ ನೀವು, ಬರಹಗಾರರಾದವರು, ಇವುಗಳನ್ನೆಲ್ಲ ಸ್ವಲ್ಪನೋಡಿ ಓದಿ ತಿಳಿಯಬೇಕು. ಅದನ್ನೆಲ್ಲ ಓದುವುದು ಅನುಸರಿಸುವುದಕ್ಕಲ್ಲ. ಅದನ್ನೆಲ್ಲ ಹೊರತೆಗೆದು ನಮ್ಮ ಜನಗಳಿಗೆ ಹೇಳಬೇಕು, 'ಇಂಥವರನ್ನೆಲ್ಲ ನಂಬಬೇಡಿ ನೀವು, ಇವರಿಂದ ಹೊರಬನ್ನಿ, ಅಂತ. 'ಆ ಮತದ ಈ ಮತದ ಹಳೆ ಮತದ ಸಹವಾಸ ಸಾಕಿನ್ನು, ಮನುಜಮತಕ್ಕೆ ಬನ್ನಿ, ಅಲ್ಲಿಂದ ಹೊರಡಿ' ಅಂತ ತಿಳಿಸಬೇಕು ಏಕೆ ಅಂತ ಹೇಳಿದರೆ ಅವರು 'ಅಯ್ಯೋ ಇಂಥ ದೊಡ್ಡ ದೊಡ್ಡ ಆಚಾರ್‍ಯರೇ ಹೀಗೆ ಹೇಳಿದ್ದಾರೆ, ಅದು ಸುಳ್ಳಾದೀತೆ?' ಎಂದು ಅರಿಯದ ಮಂದಿಯನ್ನು ಬೆದರಿಸಬಹುದು. ನೀವು ಹೇಳಬೇಕು ಜನಕ್ಕೆ 'ದೊಡ್ಡವರಲ್ಲ, ಏನೂ ಅಲ್ಲ ಅವರು, ಈ ತರಹದ ಸ್ವಮತ ಭ್ರಾಂತಿಯ ಶಠರೇ ಆಚಾರ್ಯರಾಗಿದ್ದು ಆವಾಗ. ಹೊರಗೆ ಬನ್ನಿ' ಅಂತ ಹೇಳಬೇಕಾಗುತ್ತದೆ. ಆ ತರದ ಆಚಾರ್ಯರು ಋಷಿಗಳು ಎನ್ನುವ ಗೌರವವನ್ನು ನೀವು ನಿಮ್ಮ ತರುಣರಿಂದ ಮೊದಲು ತೆಗೆದುಹಾಕಬೇಕಾಗುತ್ತದೆ. ಸಂಪೂರ್ಣವಾಗಿ ವಿಚಾರಪೂರ್ಣಕವಾಗಿ ಕೆಲಸಮಾಡಿ.
ಹೋದಸಾರಿ ಇಲ್ಲಿಯೇ ಜರುಗಿದ 'ಜಾತಿವಿನಾಶ ಸಮ್ಮೇಳನ'ದಲ್ಲಿ ನಾನು ಈ ಆಚಾರ್ಯ ಸಮೂಹದ ವಿಷಯದಲ್ಲಿ ಆ ತರದ ಗೌರವ ಇಟ್ಟುಕೊಳ್ಳಬಾರದು, ಸಂಪೂರ್ಣವಾಗಿ ವಿಚಾರಬುದ್ಧಿಯಿಂದ ಅವರನ್ನು ಪರೀಕ್ಷೆ ಮಾಡಬೇಕು ಅಂತ ಹೇಳಿದ್ದೆ. ಇದು ಪತ್ರಿಕೆಗಳಲ್ಲಿ ಬಂತು. ಯಾರೋ ದೂರದವರು 'ಏನಿದು? ಇವರನ್ನೆಲ್ಲಾ ನಾವು ದೊಡ್ಡವರು ಎಂದು ತಿಳಿದು ವೈಸ್‌ಛಾನ್ಸಲರ್ ಮಾದಿದರೆ ಇವರು ಹೀಗೆ ಮಾತನಾಡ್ತಾರಲ್ಲ' ಅಂತ ಬರೆದರು. ನನ್ನನ್ನು ವೈಸ್‌ಛಾನ್ಸಲರ್ ಮಾಡಿದ್ದಕ್ಕಾಗಿ ಇವರು ಮಾಡುವ ಅವಿವೇಕಗಳನ್ನೆಲ್ಲಾ ನಾನು ಒಪ್ಪಿಕೊಳ್ಳಬೇಕು, ಅಂತ ಅವರ ಅಭಿಪ್ರಾಯ. ನನ್ನ ದೃಷ್ಟಿಗೆ ಈ ವೈಸ್‌ಛಾನ್ಸಲರ್ ಗಿರಿ, ಅದು, ಇದು, ಎಲ್ಲಾ ಶುದ್ಧ ಅಲ್ಪ, ತುಚ್ಛ, ತಿರಸ್ಕೃತ. ವಿಚಾರಮಾಡಿ ಸರಿಯಾದ ದಾರಿಯಲ್ಲಿ ಹೋಗಬೇಕು.
ಇದು ನೀವು ಬರಿದೆ ಯಾರನ್ನಾದರೂ ದ್ವೇಷ ಮಾಡುವುದರಿಂದ ಹೋಗುವುದಿಲ್ಲ. ನಮ್ಮ ಹುಡುಗರಿಗೆ, ನಮ್ಮ ಯುವಕರಿಗೆ ಇದನ್ನೆಲ್ಲಾ ತಿಳಿಯ ಹೇಳಬೇಕು ನೀವು. ಅವರು "ಓದುವುದಿಲ್ಲ. ಈ ಹಳೆಯದನ್ನೆಲ್ಲ ಯಾತಕ್ಕೆ ಸರಿ ಮಾಡಬೇಕು? ತಿಳಿದುಕೊಳ್ಳಬೇಕು?" ಅಂತ ಕೇಳಿದರೆ 'ಇದನ್ನೆಲ್ಲಾ ತಿಳಿದುಕೊಂಡು, ಯಾವ ದಾರಿಯಿಂದ ಹೇಗೆ ನಿಮ್ಮನ್ನು ಈ ಬೋನಿನಲ್ಲಿ ಬೀಳಿಸಿದ್ದಾರೆ? ಈ ಬೋನಿನಿಂದ ಹೊರಗೆ ಬರುವ ಮಾರ್ಗ ಯಾವುದು? ಅಂತ ಮೊದಲು ನೀವು ಕಂಡುಹಿಡಿದುಕೊಳ್ಳಬೇಕು' ಎಂದು ಹೇಳಿ. ಈ ದೇಶದಲ್ಲಿ ಹಿಂದೂಧರ್ಮದ ಪುರೋಹಿತಶಾಹಿ ಎಲ್ಲೋ ಶೇ. ೫ರಷ್ಟು ಇದ್ದಾರೆ. ಅವರಿಗೆಲ್ಲಾ ಬೆಂಬಲ ಎಲ್ಲಿಂದ ಬರುತ್ತದೆ? ಬಾಕಿಯವರಿಂದ ಬರುತ್ತದೆ. ನೀವು ಈ ಬಾಕಿಯವರ ಮನಸ್ಸನ್ನು ತಿದ್ದಿ ತಿರುಗಿಸಿದರೆ ಅದು ತನ್ನಷ್ಟಕ್ಕೆ ತಾನೆ ಒಣಗಿ ಹೋಗುತ್ತದೆ. ಈ ಶೂದ್ರ ಶಕ್ತಿಯ ಬೆಂಬಲ ತಪ್ಪಿ ಆ ಪುರೋಹಿತಶಾಹಿ ತನಗೆ ತಾನೆ ಬಾಡಿಬೀಳುತ್ತದೆ. ಅವರು ಅಡ್ಡ ಪಲ್ಲಕ್ಕಿಯ ಮೇಲೆ ಕುಳಿತುಕೊಂಡು ಬರಬಹುದು. ಆದರೆ ನಾಲ್ಕು ಐದು ಜನ ಅವರವರೇ ಬರಬೇಕು ಎದುರುಗೊಳ್ಳಲು. ಅದುಬಿಟ್ಟು ನೀವು ದೊಡ್ಡದಾಗಿ ಲಕ್ಷಾಂತರ ಜನ ಹೋಗಿ ಕಾಲಿಗೆ ಬೀಳುವುದು ಮಾಡುವುದು ಇದನ್ನೆಲ್ಲ ಮಾಡಿದರೆ ಶುದ್ಧ ಅವಿವೇಕವಾಗುತ್ತದೆ. ಅವರು ಅವರೇ ಮಾಡಿಕೊಳ್ಳಲಿ. ಬೇಡ ಅಂತ ಯಾರು ಹೇಳುತ್ತಾರೆ? ನಿನ್ನ ಮನೆಯಲ್ಲಿ ನೀನು ಚಿನ್ನದ ಕುರ್ಚಿಹಾಕಿ ಕುಳಿತುಕೊ, ಬೇಡ ಅಂತ ಯಾರು ಹೇಳಿದವರು? ಆದರೆ ನಾನು ಬಂದು ನಿನ್ನ ಸಿಂಹಾಸನಕ್ಕೆ ಅಡ್ಡಬೀಳುವುದು ಸುಳ್ಳು! ಪುನಃ ನಾನು ಬರಹಗಾರರ ದೃಷ್ಟಿಯಿಂದ ಮಾತನಾಡುತ್ತೇನೆ. ಏಕೆಂದರೆ ರಾಜಕೀಯ ವಿಚಾರವಾಗಿ ನಾನು ಏನೂ ಮಾತನಾಡುವುದಿಲ್ಲ. ಆದರೆ ಇದರಿಂದಲೇ ಎಂದರೆ ನಿಮ್ಮ ಬರವಣಿಗೆಯಿಂದಲೇ, ನೀವು ಅವರನ್ನು, ಶೂದ್ರವರ್ಗವನ್ನು, ತಿದ್ದಬೇಕಾಗುತ್ತದೆ. ನೀವು ಇವುಗಳನ್ನೆಲ್ಲಾ ಮನಃಶಾಸ್ತ್ರೀಯವಾಗಿ ವ್ಯಾಖ್ಯಾನ ಮಾಡಬೇಕಾಗಿ ಬರುತ್ತದೆ. ಮನುಧರ್ಮಶಾಸ್ತ್ರವನ್ನು ಆ ಕಡೆ ಮೂಲೆಗಿಡಬೇಕಾಗುತ್ತದೆ. ನಾನು ಮೂವತ್ತು ಮೂವತ್ತೈದು ವರ್ಷಗಳ ಹಿಂದೆಯೇ ಮನುಧರ್ಮಶಾಸ್ತ್ರದ ವಿಚಾರವನ್ನು ಒಂದು ಪದ್ಯದಲ್ಲಿ ಹೇಳಿದೆ. ಪದ್ಯದಲ್ಲಿ ಬರೆದೆ. ಅದು ಚಿನ್ನದ ಖಡ್ಗ ಇದ್ದಹಾಗೆ ಎಂದು ತೋರುತ್ತದೆ. ಏನೂ ಕೆಲ್ಸಾನೆ ಮಾಡೊಲ್ಲ ಅಂತ ಕಾಣ್ಸುತ್ತೆ. ಗದ್ಯದಲ್ಲಿ ಬರೆದು ಒರಟಾಗಿ ಹೇಳಿದರೆ ಏನಾದರೂ ಕೇಳ್ತಾರೊ ಏನೋ. ಪದ್ಯದಲ್ಲಿ ಆದಕೂಡಲೆ ಒಳ್ಳೆ ಸೊಗಸಾಗಿ ಹಾಡಿಬಿಟ್ಟು ಅದನ್ನು ಅನುಸರಿಸೋದೆ ಇಲ್ಲ! ಮೂವತ್ತೈದು ವರ್ಷಗಳ ಹಿಂದೆ:
"ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
ಎಂದೊ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು?"

ಅವನ ಕಾಲಕ್ಕೆ ಏನಿತ್ತೋ ಅದನ್ನು ಅವನು ಬರೆದಿಟ್ಟ. ಅದನ್ನು ಈ ಹೊತ್ತು "Law" ಅಂತ ತೆಗೆದುಕೊಂಡರೆ ನಾವು ಶುದ್ಧ ಅವಿವೇಕಿಗಳಷ್ಟೆ.
ನಿನ್ನೆದೆಯ ದನಿಯೆ ಋಷಿ! ಮನು ನಿನಗೆ ನೀನು!
ನೀರಡಿಸಿ ಬಂದ ಸೋದರಗೆ ನೀರನು ಕೊಡಲು
ಮನುಧರ್ಮಶಾಸ್ತ್ರವೆನಗೊರೆಯಬೇಕೇನು?
ನೊಂದವರ ಕಂಬನಿಯನೊರಸಿ ಸಂತೈಸುವೊಡೆ
ಶಾಸ್ತ್ರ ಪ್ರಮಾಣವದಕಿರಲೆಬೇಕೇನು?

ಪಂಚಮರ ಶಿಶುವೊಂದು ಕೆರೆಯಲಿ ಮುಳುಗುತಿರೆ
ದಡದಲ್ಲಿ ಮೀಯುತ್ತ ನಿಂತಿರುವ ನಾನು
ಮುಟ್ಟಿದರೆ ಬ್ರಹ್ಮತ್ವ ಕೆಟ್ಟುಹೋಗುವುದೆಂದು
ಸುಮ್ಮನಿದ್ದರೆ ಶಾಸ್ತ್ರಸಮ್ಮತವದೇನು?

ಅಂತು ಮನು ತಾನು ಹೇಳಿರಲಾರನಯ್ಯಯ್ಯೊ!
ಅಂತ ಆವೊತ್ತು ಬರೆದಿದ್ದೆ ನಾನು. ಆಗ ಮನುಧರ್ಮಶಾಸ್ತ್ರ ಓದಿರಲಿಲ್ಲ. ಮನು ಹೇಳಿದ್ದಾನೆ ಹಾಗೆ. ಅದಕ್ಕಿಂತಲೂ ಭಯಂಕರ ಹೇಳಿದ್ದಾನೆ! ಆಗ ನಾನು ಬರೆದಾಗ ಮನುಧರ್ಮಶಾಸ್ತ್ರವನ್ನು ಓದಿರಲಿಲ್ಲ. ಮನು ದೊಡ್ಡವನೆಂದು ಹೇಳುತ್ತಾರೆ. ಹೀಗೆ ಬರೆದಿರಲಾರ ಅಂತ ಊಹಿಸಿದ್ದೆ. ಆದರೆ ಮನು ಅದಕ್ಕಿಂತ ಭಯಂಕರವಾಗಿ ಏನನ್ನೆಲ್ಲಾ ಬರೆದಿದ್ದಾನೆ.
ಅಂತು ಮನು ತಾನು ಹೇಳಿರಲಾರನಯ್ಯಯ್ಯೊ!
ಹೇಳಿದ್ದರವನನೂ ಶಾಸ್ತ್ರದೊಳೆ ಸುತ್ತಿ
ಸ್ವರ್ಗ ಹೋಗಲಿ ಮತ್ತೆ ನರಕ ಬಂದರು ಬರಲಿ
ಎದೆಯ ಧೈರ್ಯವ ಮಾಡಿ ಬಿಸಾಡಾಚೆಗೆತ್ತಿ!

ಮನುಧರ್ಮಶಾಸ್ತ್ರ ಅವನ್ನೆಲ್ಲಾ ಅತ್ತ ಕಟ್ಟಿಡಿ. ಯಾರೋ ಒಬ್ಬರು ಪಟಗಳನ್ನೆಲ್ಲಾ ಎಸೆಯಿರಿ ಅಂದಿದ್ದಕ್ಕೆ ದೊಡ್ಡ ಗಲಾಟೆ ಎಬ್ಬಿಸಿದರು. ಅದಕ್ಕಿಂತ ಇದು ಬಲವಾದದ್ದೆ ಅಂತ ಇಟ್ಟುಕೊಳ್ಳಿ.
ಸ್ವರ್ಗ ಹೋಗುವುದಿಲ್ಲ; ನರಕ ಬರುವುದು ಇಲ್ಲ;
ಸ್ವರ್ಗನರಕಗಳೇನು ಶಾಸ್ತ್ರಸ್ಥವಲ್ಲ.
ಎದೆಯ ದನಿ ಧರ್ಮನಿಧಿ! ಕರ್ತವ್ಯವದುವೆ ವಿಧಿ!
ನಂಬದನು: ಅದನುಳಿದು ಋಷಿಯು ಬೇರಿಲ್ಲ!

ಹಿಂದಿನಾ ಋಷಿಗಳೂ ಮಾನವರೆ ನಮ್ಮಂತೆ,
ಅವರ ಶಾಸ್ತ್ರವು ಅವರ ಕಾಲಕ್ಕೆ ಮಾತ್ರ,
ಕಾಲಕ್ಕೆ ತಕ್ಕಂತೆ ದೇಶಕ್ಕೆ ತಕ್ಕಂತೆ
ನಮ್ಮ ಹೃದಯವೆ ನಮಗೆ ಶ್ರೀಧರ್ಮಸೂತ್ರ.

ಈ ವಿಚಾರಪೂರ್ವಕವಾದ ಭಾವಗಳನ್ನು ನಮ್ಮ ತರುಣರ ಎದೆಯಲ್ಲಿ ನೀವು ಬಿತ್ತಬೇಕು. ಪದ್ಯಗಳಲ್ಲಿಯೆ ಬಿತ್ತಿ; ಆದರೆ ನವ್ಯ ಬರಿತೀವಿ ಅಂತ ಹೇಳಿಬಿಟ್ಟು ಒಬ್ಬರಿಗೂ ಅರ್ಥವಾಗದ್ದನ್ನೆಲ್ಲಾ ತಂದುಹಾಕಿ, ಒಬ್ಬರೂ ಓದಬಾರದು, ಆ ತರಾ ಮಾಡಬೇಡಿ. ಎಲ್ಲರಿಗೂ ಅರ್ಥವಾಗುವಂತೆ, ನವ್ಯವೋ ಪದ್ಯವೋ ಎಲ್ಲರಿಗೂ ಅರ್ಥವಾಗಿ ಅದರಿಂದ ಪರಿಣಾಮಕಾರಿಯಾಗುವಂತೆ ಬರೆಯಿರಿ. ಏನೊ Symbolism ಅಂತ ಹೇಳಿಬಿಟ್ಟು ಒಂದೂ ಅರ್ಥವಾಗಬಾರದು, ಹಾಗೆ ಮಾಡಬೇಡಿ.
ಬಸವಲಿಂಗಪ್ಪನವರು ಅವೊತ್ತೇನೊ ಎಲ್ಲಾ ಸಾಹಿತ್ಯ ಬೂಸಾ ಅಂತ ಹೇಳಿಬಿಟ್ಟರು ಅಂತ ಗಲಾಟೆಯೋ ಗಲಾಟೆ ಮಾಡಿ, ಮಂತ್ರಿಮಂಡಲ ಉರುಳಿ, ದೊಡ್ಡ ರಾಜಕೀಯ ವಿಪ್ಲವವೇ ಆಗಿಹೋಯಿತು. ಆದರೆ ನೋಡಿ. ಈ ಬೂಸಾ ಸಾಹಿತ್ಯ ಅಂತ ಯಾವುದನ್ನು ಕರೆಯುತ್ತೇವೆಯೋ, ಅದು ಪ್ರಪಂಚದ ಎಲ್ಲಾ ಸಾಹಿತ್ಯದಲ್ಲಿಯೂ ಇರುತ್ತದೆ; ಸುಮಾರು ಮುಕ್ಕಾಲು ಪಾಲಿನ ಮೇಲೆ ಇರುವುದು ಬೂಸಾ ಸಾಹಿತ್ಯವೆ. ಯಾವುದನ್ನು ನೀವು ಫಸ್ಟ್ ರೇಟ್, ಗ್ರೇಟ್ ಅಂತ ಹೇಳುತ್ತೀರೋ ಅದೆಲ್ಲಾ ಒಂದು ಕಾಲುವಾಸಿ ಇದ್ದರೆ ನಮ್ಮ ಪುಣ್ಯ. ಆದರೆ ದನ ಎಮ್ಮೆ ಸಾಕುವವರಿಗೆ ಗೊತ್ತು, ಬೂಸವೇ ಮುಖ್ಯ ಅಂತ, ಪ್ರಧಾನವಾದ ಆಹಾರ ಅಂತ. ಅವನಿಗೆ ಬೂಸಾ ಹಾಕುವುದು ಬೇಡ, ಹತ್ತಿಕಾಳು ಹಿಂಡೀನೇ ತಂದುಹಾಕು ಎಂದರೆ ಕೆಟ್ಟ ಅವನು. ಹತ್ತೀಕಾಳು ಹಿಂಡೀನೆ ಯಾರು ತಂದುಹಾಕಲಿಕ್ಕೆ ಆಗುತ್ತದೆ? ಬೂಸಾನೇ ಹೊಟ್ಟೆ ತುಂಬಿಸಿಕೊಂಡು ಸ್ವಲ್ಪ ಹತ್ತೀಕಾಳು, ಸ್ವಲ್ಪ ಹಿಂಡೀ ತಿಂತಾವೆ. ನಾವು ಮನುಷ್ಯರು ಕೂಡ ದಿನವೂ ಹೋಳಿಗೆ ಪಾಯಸ ತಿನ್ನುತ್ತೇವೆಯೆ? ಪ್ರಧಾನವಾಗಿ ನಾವು ತಿನ್ನೋದು ಅನ್ನ ತಾನೆ? ಸಾಹಿತ್ಯದಲ್ಲಿಯೂ ಹಾಗೆಯೆ. ಎಲ್ಲಾ ದೇಶದ ಸಾಹಿತ್ಯದಲ್ಲಿಯೂ ಮುಕ್ಕಾಲುಪಾಲು ಇರುವುದು ಬೂಸಾನೇ. ಬೂಸಾನೇ ಇರಬೇಕು, ಇದೆ, ಇರಬೇಕಾದದ್ದೂ! ಆ ಅರ್ಥದಲ್ಲಿ ನಮ್ಮ ಪ್ರಾಚೀನ ಕನ್ನಡ ಸಾಹಿತ್ಯದಲ್ಲೂ ಸಹ ನಾವು ಮೂರು ನಾಲ್ಕು ಜನರನ್ನು ಮಹಾಕವಿಗಳು ಅಂತ ಗುರುತಿಸುತ್ತೇವೆ. ದೊಡ್ಡವರು ಅಂತ. ಇನ್ನೂ ಏಳೆಂಟು ಜನ ಕವಿಗಳನ್ನು ಸಮರ್ಥರಾದ ಕವಿಗಳು ಅಂತ ಹೇಳುತ್ತೇವೆ. ಉಳಿದವರು ಸಾವಿರಾರು ಇದ್ದಾರೆ. ಅವರೆಲ್ಲ ಬೂಸಾ ಸಾಹಿತ್ಯದವರೆ. ಅಂದಮಾತ್ರಕ್ಕೆ ಅವರಿಗೆಲ್ಲಾ ಅಗೌರವ ತೋರಿಸಿದಂತೆ ಅಂತ ಹೇಳುವುದು ಶುದ್ಧ ಅವಿವೇಕ. ಇದು ವಿಷಯ.[] ಸಾಹಿತ್ಯದಲ್ಲಿ ಉತ್ತಮ ಮಧ್ಯಮ ಅಧಮ ಏಮ್ದು ಗೊತ್ತುಮಾಡುವುದು ವಿಮರ್ಶೆಯ ಕರ್‍ತವ್ಯ. ಸಾಮಾನ್ಯವಾಗಿ ಬಹುಭಾಗ ಇರುವುದೆಲ್ಲಾ ಬೂಸಾ ಸಾಹಿತ್ಯವೆ. ಈಗ ನಾವು ಬರೆಯುತ್ತಿರುವುದರಲ್ಲಿಯೂ ಸಹ ಎಷ್ಟೋ ಬೂಸಾ ಸಾಹಿತ್ಯವೆ. ಅದರಲ್ಲಿ ಸ್ವಲ್ಪಮಟ್ಟಿಗೆ ಹಿಂಡೀ ಸಾಹಿತ್ಯ, ಹತ್ತಿಕಾಳು ಸಾಹಿತ್ಯವಿರುತ್ತದೆ.
ಆಮೇಲೆ ಇನ್ನೊಂದು ವಿಚಾರ: ಬಸವಲಿಂಗಪ್ಪನವರು ಬೂಸಾಸಾಹಿತ್ಯ ಅಂತ ಏಕೆ ಮಾತನಾಡಿದರು? ಕಡೆಗೆ, ಪಾಪ, ಹೇಳಿಕೆ ಕೊಟ್ಟರು. ನಾನು ಕನ್ನಡ ಸಾಹಿತ್ಯವನ್ನೆಲ್ಲಾ ಬೂಸಾ ಸಾಹಿತ್ಯ ಅಂತ ಹೇಳಲಿಲ್ಲ ಅಂತ. ಅದಕ್ಕೆ ಯಾರೂ ಕೇರ್ ಮಾಡಲಿಲ್ಲ. ಆಗುವುದೆಲ್ಲ ಆಗಿಯೇಹೋಯಿತು. ಕೆಲವು ಹಳದಿ ಪತ್ರಿಕೆಗಳಿವೆ. ಅವಕ್ಕೆ ಅದೇ ಕಸುಬು. ಹೀಗೆ ಒಂದು ಸಣ್ಣದನ್ನು ತೆಗೆದುಕೊಂಡು ದೊಡ್ಡದು ಮಾಡಿ ಹಾಳುಮಾಡುವುದು. ಅಂತೂ ಅದು ಆಯಿತು. ಬರೀ ಪತ್ರಿಕೆಗಳನ್ನು ಟೀಕೆ ಮಾಡಿದರೆ ಆಗಲಿಲ್ಲ. ಆ ಪತ್ರಿಕೆಗಳನ್ನು ಓದಿ ಅದರಿಂದ ಪ್ರಭಾವಿತರಾದಂತಹ ಈ ಮಹನೀಯರಿದ್ದಾರಲ್ಲಾ ಅವರೂ ಅದೇ ಹಳದಿ ಮೆದುಳಿನವರೆ! ಅವರು ಹಳದಿ ಮೆದುಳಿನವರಾದ್ದರಿಂದಲೇ ಪತ್ರಿಕೆ ಹಾಗೆಲ್ಲ ಮಾಡಿತು. ಬರೀ ಪತ್ರಿಕೆ ಏನು ಮಾಡುತ್ತದೆ? ಇವರ ಮೆದುಳೂ ಹಳದಿಯಾಗಿರುವುದರಿಂದ ಆ ಹಳದಿ ಬಣ್ಣದ ಸಹಾಯ ತೆಗೆದುಕೊಂಡು ಆ ಕೆಲಸ ಮಾಡಿತು, ಅಷ್ಟೆ.
ಈಗ ಅವರು (ಬಸವಲಿಂಗಪ್ಪನವರು) ಯಾವ ದೃಷ್ಟಿಯಿಂದ ಹಾಗೆ ಹೇಳಿದರು ಎಂದು ವಿಚಾರಮಾಡಿ. ಹರಿಜನರ ಉದ್ಧಾರವನ್ನು ದೃಷ್ಟಿಯಲ್ಲಿಟ್ಟುಕೊಂಡು ಹಾಗೆ ಹೇಳಿದರು. ಈ ದೃಷ್ಟಿಯಿಂದ ಹೇಳತಕ್ಕಂತಹ ಸಾಹಿತ್ಯ ಕನ್ನಡದಲ್ಲಿ ಹೆಚ್ಚಿಲ್ಲ. ಆದ್ದರಿಂದ ಬೂಸಾಸಾಹಿತ್ಯ ಅಂದರು. ಕನ್ನಡದಲ್ಲೂ ಹರಿಜನೋದ್ಧಾರ ದೃಷ್ಟಿಯಿಂದಲೂ ಬೂಸಾ ಸಾಹಿತ್ಯವಲ್ಲದ ಸಾಹಿತ್ಯ ಸ್ವಲ್ಪ ಹುಟ್ಟಿದೆ. ನನ್ನ ಬರವಣಿಗೆಯಲ್ಲಿಯೆ ಅವರ ದೃಷ್ಟಿಯಿಂದಲೂ ಬರಿಯ ಬೂಸಾ ಅಲ್ಲದ ಸಾಹಿತ್ಯ ಬಂದಿದೆ: 'ಜಲಗಾರ' ನಾಟಕದಲ್ಲಿ, 'ಶೂದ್ರತಪಸ್ವಿ'ಯಲ್ಲಿ, ಕಾನೂರು ಹೆಗ್ಗಡಿತಿಯಲ್ಲಿ, ಮಲೆಗಳಲ್ಲಿ ಮದುಮಗಳಲ್ಲಿ, ಕೆಲವು ಸಣ್ಣ ಕತೆಗಳಲ್ಲಿ, ಅನೇಕ ಕವನಗಳಲ್ಲಿ. ಬಸವಲಿಂಗಪ್ಪನವರೂ ಹೇಳಲಾರದಂತಹದ್ದೂ ಇನ್ನೂ ನೂರು ವರ್ಷದ ಆಚೆಗೆ ಹೋಗಿದೆ. ಗೊತ್ತಾಯಿತೆ? ಈಗ ನಾನು ಓದಿದೆನಲ್ಲಾ ಅದು. ಅಷ್ಟೆ ಅಲ್ಲ ಇನ್ನೊಂದು ಪದ್ಯವೂ ಇದೆ: 'ಇಂದಿನ ದೇವರು' ಎಂದು.
"ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ."

ಎಂದು ಪ್ರಾರಂಭವಾಗುತ್ತದೆ. ಅಲ್ಲಿ ಒಂದು ಕಡೆಯಲ್ಲಿ-
"ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು
ಜೀವದಾತೆಯನಿಂದು ಕೂಗಬೇಕು"

ಅಂತ ಬರುತ್ತದೆ. ಪಟ ಎಸೆಯಿರಿ ಅನ್ನುವ ಇದಕ್ಕಿಂತಲೂ ಭಯಂಕರವಾಗಿ ಇದೆ ಅದು, "ನೂರು ದೇವರನೆಲ್ಲ ನೂಕಾಚೆದೂರ." ಆದರೆ ಏನು ಮಾಡುವುದು? ಹಿಂದೆ ಆ ಪದ್ಯ 'ಕಲ್ಕಿ' ಮುಂತಾದುವನ್ನೆಲ್ಲ ಬರೆದಾಗ ವಿದ್ಯಾರ್ಥಿಗಳು, ಅವರು ಇವರು ಎಲ್ಲೆಲ್ಲಿ ನೋಡಿದರೂ ಅವುಗಳನ್ನು ಹೇಳುತ್ತಾ ಇದ್ದರು, ಘೋಷಿಸುತ್ತಾ ಇದ್ದರು. ಈಗೇನು? ಆ ಕವನಗಳನ್ನು ಯಾರೂ ವಾಚನಮಾಡುವುದಿಲ್ಲ. ಕೆಲವನ್ನು ಸಾಮಾಜಿಕ ಮತ್ತು ರಾಜಕೀಯ ಕ್ರಾಂತಿಕಾರಕವಲ್ಲದ ಕೆಲವನ್ನು ಆಕಾಶವಾಣಿಯಲ್ಲಿ ಮಾತ್ರ ಸೋಬಾನೆ ಹಾಡು ಹಾಡಿಸುತ್ತಾರೆ. ಪುರಂದರದಾಸರ ಕೀರ್ತನೆ ಹಾಡಿದ ಹಾಗೆ ಹಾಡುತ್ತಾರೆ. ಈ ತರದ ಕ್ರಾಂತಿಕಾರಕ ವೀರಸಾಹಿತ್ಯವನ್ನು ಯಾರೂ ಈಗ ವೇದಿಕೆಗಳಿಂದ ಘೋಷಿಸುವುದಿಲ್ಲ. ಅವೆಲ್ಲ ಸತ್ತೇಹೋಗಿಬಿಟ್ಟಿವೆ, ಅವರಿಗೆ. ಮೊನ್ನೆ ನೋಡ್ತೀನಿ, "ನೂರುದೇವರನೆಲ್ಲ ನೂಕಾಚೆದೂರ" ಹಾಡಿಸುತ್ತಾ ಇದ್ದಾರೆ ಆಕಾಶವಾಣಿಯಲ್ಲಿ. ಆದರೆ ಯಾವ ತರವಾಗಿ? ಪುರಂದರದಾಸರ ದೈನ್ಯದ ಭಕ್ತಿಗೀತೆ ಇದೆಯಲ್ಲಾ ಆ ತರಾ. ಅದನ್ನು ನನಗೆ ಹೇಳೋಕು ಬರೋದಿಲ್ಲ ಯಾವ ಥರಾ ಹಾಡುತ್ತಾರೆ ಅಂತ. ಅಸಹ್ಯವೋ ಅಸಹ್ಯ. ಅದರಲ್ಲಿಯೂ ಏನು ಮಾಡಿದ್ದಾರೆ? ನೀವು ರೇಡಿಯೋ ವಿಚಾರ ಏನೋ ಹೇಳುತ್ತಾ ಇದ್ದಿರಿ. ಈ ರೇಡಿಯೋ ಕೂಡ ಈ ವಿಚಾರದಲ್ಲಿ ಈ ಹಳದಿ ಪತ್ರಿಕೆಗಳ ವರ್ಗಕ್ಕೆ ಸೇರುತ್ತದೆ. ಅದಿರಲಿ ಅದರಲ್ಲಿ ಏನು ಮಾಡಿದ್ದಾರೆ ಗೊತ್ತೆ? 'ನೂರುದೇವರನೆಲ್ಲ ನೂಕಾಚೆದೂರ' ಅನ್ನುವ ಹೊತ್ತಿಗೆ ಕಾರ್ಯಕ್ರಮ ನಿರ್ಣಯ ಮಾಡುವವನಿಗೆ ಆಗಲೆ ಎದೆ ಬಡಬಡಾ ಹೊಡೆಯುವುದಕ್ಕೆ ಶುರುವಾಗುತ್ತದೆ. ಅಯ್ಯೋ ನೂರು ದೇವರನೆಲ್ಲನೂಕಾಚೆದೂರ ಎಂದುಬಿಟ್ಟರೆ ಏನಾಗಿಬಿಡುತ್ತದೆಯೋ ಅಂತ. ಅದಕ್ಕೋಸ್ಕರ ಅದರ ಬಲವನ್ನು ಆದಷ್ಟು ಕಡಮೆ ಮಾಡಲು ಪುರಂದರದಾಸರ ಹಾಡಿದ ಹಾಗೆ ಹಾಡಿದರೆ ಪರವಾಯಿಲ್ಲ ಅಂತ ಹಾಗೆ ಹಾಡಿಸುತ್ತಾರೆ. ಅದು ಎಂಥದ್ದೋ ನನಗೆ ಬರುವುದಿಲ್ಲ ರಾಗ. ಗೊತ್ತಾಗಿದ್ದರೆ ಹೇಳುತ್ತಾ ಇದ್ದೆ. ಅದನ್ನು ಹೇಗೆ ಹೇಳಿದರು ಅಂತ "ನೂರು ದೇವರನೆಲ್ಲ............" (ಹಾಡುವ ಅನುಕರಣೆ) ಅಂತ ಹೇಳ್ಬಿಟ್ಟು ತಾಳಮದ್ದಳೆ ಎಲ್ಲಾ ಹಾಕಿಕೊಂಡು ಹಾಡಿದರು. ಆಮೇಲೆ ಏನು ಮಾಡಿದ್ದಾರೆ? "ಸತ್ತಕಲ್ಗಳ ಮುಂದೆ ಅತ್ತು ಕರೆದುದು ಸಾಕು" ಇಂಥಾ ಪಂಕ್ತಿ ಪದ್ಯಗಳನ್ನೆಲ್ಲ ಬಿಟ್ಟು, ಅಲ್ಲೊಂದು ಎರಡು ಪದ್ಯಗಳು, ಸ್ವಲ್ಪ ಜೀವವಿಲ್ಲದ ಪದ್ಯಗಳಿವೆ. ಅವನ್ನೇ ತೆಗೆದುಕೊಂಡು ಹಾಡಿ ಮುಗಿಸಿದರು. ನೋಡಿ; ಇವನ್ನೆಲ್ಲ ಸ್ವಾತಂತ್ರ್ಯಪೂರ್ವದಲ್ಲಿ ಹೇಳುತ್ತಾ ಇದ್ದರು. ಹಾಡುತ್ತಾ ಇರಲಿಲ್ಲ, ವಾಚನ ಮಾಡುತ್ತಿದ್ದರು. ಈ 'ಪಾಂಚಜನ್ಯ'. 'ಕಲ್ಕಿ', 'ರಕ್ತಧುನಿ' ಇಂಥವುಗಳನ್ನೆಲ್ಲ. ಅವೆಲ್ಲ ಸ್ವಲ್ಪ ಹೆಚ್ಚುಕಡಿಮೆ ಸೈನಿಕ ಪ್ರವೃತ್ತಿಯ ಹಾಡುಗಳು. ಅವಕ್ಕೆ 'ಹಾಡು ಎಂಬ ಹೆಸರೂ ಒಪ್ಪುವುದಿಲ್ಲ. ಅವು ವೀರಗೀತೆಗಳು, ಅವನ್ನೆಲ್ಲ ಈಗ ಬಿಟ್ಟೇಬಿಟ್ಟಿದ್ದಾರೆ. ಈಗ ಯಾರೂ ಪಠಿಸುವುದಿಲ್ಲ. ನಾನು ಹೇಳಿದೆನಲ್ಲ್, ಹಾಡುವ ಕೆಲವು ಭಕ್ತಿಗೀತೆಗಳನ್ನು ಆಕಾಶವಾಣಿಯಲ್ಲಿ ಒಂದಿಷ್ಟು ಸೋಬಾನೆ ಹಾಡಿದ ಹಾಗೆ ರಾಗಹಾಕಿ ಹಾಡುತ್ತಾರೆ. ಈ ರೀತಿ ಭಕ್ತಿಗೀತೆಗಳಿಗೆ ಆಧ್ಯಾತ್ಮಗೀತೆಗಳಿಗೆ ಬೇಕಾದರೆ ಸರಿಹೋಗುತ್ತದೆ. ಆದರೆ ವೀರಗೀತೆಗಳಿಗೆ ಕ್ರಾಂತಿ ಕವನಗಳಿಗೆ ಸರಿಹೋಗುವುದಿಲ್ಲ. ಇಂಥದಕ್ಕೆಲ್ಲ ಸಂಗೀತ ಹಾಕಬಾರದು.
ನೂರು ದೇವರನೆಲ್ಲ ನೂಕಾಚೆ ದೂರ
ಭಾರತಾಂಬೆಯ ದೇವಿ ನಮಗಿಂದು ಪೂಜಿಸುವ ಬಾರ!

ಶತಮಾನಗಳು ಬರಿಯ ಜಡಶಿಲೆಯ ಪೂಜಿಸಾಯ್ತು
ಪಾವ್ಗಳಿಗೆ ಪಾಲೆರೆದು ಪೋಷಿಸಾಯ್ತು
ಬಿಸಿಲು ಮಳೆ ಗಾಳಿ ಬೆಂಕಿಯನೆಲ್ಲ ಬೇಡಿಯಾಯ್ತು
ದಾಸರನು ಪೂಜಿಸಿಯೆ ದಾಸ್ಯವಾಯ್ತು

ಗುಡಿಯೊಳಗೆ ಕಣ್ಮುಚ್ಚಿ ಬೆಚ್ಚಗಿರುವರನೆಲ್ಲ
ಭಕ್ತ ರಕ್ತವಹೀರಿ ಕೊಬ್ಬಿಹರನೆಲ್ಲ
ಗಂಟೆ ಜಾಗಟೆಗಳಿಂ ಬಡಿದು ಕುತ್ತಿಗೆ ಹಿಡಿದು
ಕಡಲಡಿಗೆ ತಳ್ಳಿರೈ ಶಂಖದಿಂ ನುಡಿದು.

ನಿದ್ದೆಮಾಡುತ್ತಿಹರು ಹಲವು ದೇವತೆಗಳೆಲ್ಲ;
ಬಿದ್ದವರು ಕಲ್ಲಾಗಿ ಕೆಲವರಿಹರು;
ಕ್ಲೀಬತನದಲ್ಲಿ ಮರೆತೊ ತಮ್ಮ ಪೌರುಷವನೆಲ್ಲ
ಸತ್ತೆ ಹೋದಂತಿಹರು ಮತ್ತುಳಿದಮರರು.

ಅವರ ಗುಡಿ ಹಾಳಾಯ್ತು, ಅವರ ನುಡಿ ಮಡಿದು ಹೋಯ್ತು;
ಅವರ ನೆಮ್ಮಿದ ನಮಗೆ ಬೀಳುಗತಿಯಾಯ್ತು!
ಮುಂದಿವಳನಾರಾಧಿಸುವ ಶಕ್ತಿಯಾರ್ಜಿಸುವ;
ಒಂದು ಶತಮಾನವನು ಒಂದೆದಿನ ಜೈಸುವ!

ಸತ್ತಕಲ್ಗಳ ಮುಂದೆ ಅತ್ತು ಕರೆದುದು ಸಾಕು,
ಜೀವದಾತೆಯನಿಂದು ಕೂಗಬೇಕು!
ಶಿಲೆಯ ಮೂರ್ತಿಗೆ ನೆಯ್ದ ಕಲೆಯ ಹೊದಿಕೆಯನೊಯ್ದು
ಚಳಿಯು ಮಳೆಯಲಿ ನವೆವ ತಾಯ್ಗೆ ಹಾಕು.

ಭಾರತಿಯೆ ನಮಗಿಂದು ಜೀವನದ ದೇವತೆಯು
ವಿಶ್ವರೂಪಿಣಿಯವಳು ವಿಶ್ವಮುಖಿಯೈ;
ನಮ್ಮೆಲ್ಲರಂಗಗಳೆ ನಮ್ಮಂಬೆಯಂಗವೈ
ನಮ್ಮ ಸ್ವಾತಂತ್ರ್ಯದೊಳೆ ನಮ್ಮಮ್ಮ ಸುಖಿಯೈ.

ಇಂದೊ ನಾಳೆಯೊ ದಾಸನೀಶನಾಗಲೆಬೇಕು
ಎಂದಿಂದೆ ಎದ್ದೇಳಿ; ನಾಳೆಯೆನೆ ಹೋಕು.
ನಾವೆ ದೇವತೆಗಳೈ; ಭಾರತವೆ ಸ್ವರ್ಗವೈ;
ಭಾರತಾಂಬೆಯೆ ನಮಗೆ ದೇವಿಯೈ ಜನನಿ!

ಇಂತಹ ಭಯಂಕರವಾದ ಪದ್ಯಗಳನ್ನೆಲ್ಲಾ ಆಗ ಬ್ರಿಟಿಷ್ ಸರ್ಕಾರ ಇದ್ದಾಗ ವಿದ್ಯಾರ್ಥಿಗಳೂ ನಾವೂ ಎಲ್ಲೆಲ್ಲಿಯೂ ಹಾಡುತ್ತಾ ಇದ್ದೆವು. ಈಗ ಅವನ್ನು ರೇಡಿಯೋ ಆಕಾಶವಾಣಿಯಲ್ಲಿ ಹಾಡಲು ಹೆದರುತ್ತಾರೆ. ನಮ್ಮ ಮನೆಗೆ ಬಂದು ನನ್ನ ಹತ್ತಿರ ಹದಿನೈದು ನಿಮಿಷದ ಒಂದು ರೆಕಾರ್ಡ್ ಮಾಡಿಕೊಂಡು ಹೋದರು. ಅದರಲ್ಲಿ ಯಾರಿಗೂ ತೊಂದರೆ ಕೊಡದಂತಹ ಸೋಬಾನೆ ಮಟ್ಟಿನ ಹಾಡುಗಳನ್ನು ಮಾತ್ರ ರೆಕಾರ್ಡ್ ಮಾಡಿ ಹಾಕಿದರು. ಬಾಕಿಯನ್ನು ಮುಂದಕ್ಕೆ ಹಾಕಲಿಲ್ಲ 'ಏಕೆ ಹಾಕಲಿಲ್ಲ,' ಅಂತ ಕೇಳಿದರೆ ಅದು 'VOICE PRESERVATION' ಗೋಸ್ಕರ ಡೆಲ್ಲಿಗೆ ಕಳಿಸಿದ್ದೇವೆ ಅಂತ ಹೇಳಿದರು. ಇಲ್ಲಿ ಹಾಕಿಬಿಟ್ಟು ಆಮೇಲೆ ಕಳಿಸಬಹುದಿತ್ತು. ಇಲ್ಲ. ಏಕೆಂದರೆ ಅದರಲ್ಲಿ "ಸಾಕು ಈ ಬಲಾತ್ಕಾರ" ಎಂಬ ಇಂಗ್ಲಿಷ್ ಪೂತನಿಯ ವಿಚಾರವಿತ್ತು. ಅಯ್ಯೊ ನೆಹರೂ ಇದ್ದ ಕಾಲದಲ್ಲಿ ಇಂಗ್ಲಿಷ್ ವಿರುದ್ದವಾಗಿ ಹೇಳಿದರೆ ದೇವರೇ ಗತಿ; ಏಕೆಂದರೆ ನೆಹರೂ ಈ ವಿಚಾರಗಳಲ್ಲಿ ದೇಶಕ್ಕೆ ಭಯಂಕರವಾದ ಅಪಚಾರಗಳನ್ನು ಮಾಡಿಹೋಗಿದ್ದಾರೆ. ಆದ್ದರಿಂದ ಹಾಕುವುದಿಲ್ಲ. ಹೀಗೆ ರೇಡಿಯೋಗಳು ಕೂಡ ಈ ತರಹ ಎಲ್ಲೂ ಇಂತಹ ಕವನಗಳನ್ನು ಹಾಡಿಸುವುದಿಲ್ಲ. ಅದರ ಜೊತೆಗೆ ನಮ್ಮ ತರುಣರು ಇದ್ದಾರಲ್ಲ, ಅವರೂ ಒಬ್ಬರಿಗೂ ಅರ್ಥವಾಗದ Symbolics ಅಂತ ನವ್ಯಕವಿತೆ ಅಂತ ಬರೆಯುತ್ತಾರೆ. ಅವನ್ನು ಯಾರೂ ಹಾಡುವುದಿಲ್ಲ. ಹಿಂದೆ ನಾವು ಸಾವಿರಾರು ಜನರನ್ನು ಕೂರಿಸಿ ಬಿಟ್ಟು ಮೂರು ನಾಲ್ಕು ಗಂಟೆಗಳ ಕಾಲ ಇಂತಹವುಗಳನ್ನು ಹೇಳುತ್ತಾ ಇದ್ದರೆ, ಸಾಲದು ಇನ್ನೂ ಅಷ್ಟು ಹೇಳಿ, ಇನ್ನೂ ಅಷ್ಟು ಹೇಳಿ ಅಂತ ಕಾಫಿ ತರಿಸಿಕೊಟ್ಟು ಕೇಳುತ್ತಿದ್ದರು. ಈಗ ಇವರು ಹೇಳಲಿ. ಇವರ ಗುಂಪಿನಲ್ಲಿ ಕೂತ್ಕೊಂಡುಬಿಟ್ಟು ಇದು ಅವನದು ಚೆನ್ನಾಗಿದೆ, ಇವನದು ಚೆನ್ನಾಗಿದೆ ಅಂತ ಹೇಳುತ್ತಾರೆಯೆ ಹೊರತು ಖಂಡಿತಾ ಅದು ಜನಸಾಮಾನ್ಯಕ್ಕೆ ಹಿಡಿಸುವುದಿಲ್ಲ. ಅದರಿಂದ ಜೀವನಕ್ಕೆ ಪ್ರಯೋಜನವೂ ಇಲ್ಲ. All art is useless ಎಂಬುದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಬಹುದು.
ಇಲ್ಲಿ ಕಲೆಯ ವಿಚಾರವಾಗಿ ಮಾತನಾಡುತ್ತಾ ಒಂದು ಸೂಚನೆಯನ್ನು ಕೊಡಬೇಕು. ಏನೆಂದರೆ, ಯಾವ ಆಭರಣಗಳನ್ನೂ ಬಿಸಾಡದೆ ಕರಗಿಸಿ, ನಾವು ನಮಗೆ ಬೇಕಾದಂತೆ ಮಾಡಿಕೊಳ್ಳುತ್ತೇವೆಯೊ ಹಾಗೆಯೆ ಉತ್ತಮ ಕಾವ್ಯಗಳನ್ನು ತಿರಸ್ಕರಿಸದೆ ನಮಗೆ ಒಪ್ಪುವ ರೀತಿಗೆ ಪರಿವರ್‍ತಿಸಿಕೊಳ್ಳಬೇಕು. ಈಗ ಕುಮಾರವ್ಯಾಸ ಇದ್ದಾನೆ. ಅವನು ಬ್ರಾಹ್ಮಣ. ಅವನು ಬ್ರಾಹ್ಮಣ ಸಂಸ್ಕೃತಿಯನ್ನು ಹೊರತು ಬೇರೆ ಬರೆಯಲಾರ. ಹಾಗೆಂದು ಕುಮಾರವ್ಯಾಸ ಬರೆದದ್ದೆಲ್ಲ ಬೇಡ ಅಂತ ಹೇಳಿಬಿಟ್ಟರೆ ಶುದ್ಧ ಅವಿವೇಕವಾಗುತ್ತದೆ. ಆಗ ಏನು ಮಾಡಬೇಕಾಗುತ್ತದೆ? ನಾನು ಅದಕ್ಕೋಸ್ಕರವೆ ಪ್ರತಿಕೃತಿ ಮತ್ತು ಪ್ರತಿಮಾ ಸಿದ್ಧಾಂತವನ್ನು ತಂದೆ. ಹೇಗಾದರೂ ಮಾಡಿ ಈ ಮಹಾಕಾವ್ಯಗಳನ್ನು ಮುಂದಿನ ಪೀಳಿಗೆಗೆ ರಕ್ಷಿಸಿಕೊಳ್ಳಬೇಕು. ಆದ್ದರಿಂದ ಅವನ್ನು ನೀವು ಪ್ರತಿಕೃತಿ ದೃಷ್ಟಿಯಿಂದ ಓದಬೇಡಿ; ಪ್ರತಿಮಾ ದೃಷ್ಟಿಯಿಂದ ಓದಿ, ಮತ್ತು ದರ್ಶನ ಧ್ವನಿಯಿಂದ ವ್ಯಾಖ್ಯಾನಮಾಡಿ, ಬೇಡವಾದುದನ್ನು ಬಿಟ್ಟುಬಿಟ್ಟು. ಒಳ್ಳೆಯ ಸೊಗಸಾದ ಕಾವ್ಯವನ್ನು ತಿರಸ್ಕರಿಸಬೇಡಿ. ಬರಹಗಾರರು ಬೇರೆ ನೀವು, ವ್ಯಾಖ್ಯಾನ ಮಾಡುವವರಿದ್ದೀರಿ, ಮೇಷ್ಟ್ರುಗಳಿದ್ದೀರಿ, ಉಪನ್ಯಾಸ ಮಾಡುತ್ತೀರಿ, ಪಾಠ ಹೇಳುತ್ತೀರಿ. ಯುದ್ಧ ಮಾಡುವಾಗ ದಿಗ್ದಂತಿಗಳ ವಿಚಾರ ಬರುತ್ತದೆ, ಆದಿಶೇಷನ ವಿಚಾರ ಬರುತ್ತದೆ. ಆದಿಶೇಷನ ತಲೆ ಜರಿದುಹೋಯಿತು ಅಂತ ಬರುತ್ತದೆ. ಓದುವವರಿಗೆ ಗೊತ್ತು, ಭೂಮಿ ಇರುವುದು ಸೂರ್ಯನ ಆಕರ್ಷಣ ಶಕ್ತಿಯಿಂದ, ದಿಗ್ದಂತಿಗಳು ಇಲ್ಲ, ಆದಿಶೇಷನು ಸುಳ್ಳು ಅಂತ ಅವರಿಗೆ ಗೊತ್ತು. ಇಂದು "A child knows it" ಗೊತ್ತಾಯಿತೆ? ಆದ್ದರಿಂದ ಇವನ್ನೆಲ್ಲ ಹೇಗೆ ಪಾಠ ಹೇಳಬೇಕು? ಅಂತ ಕೇಳಿದರೆ, ಅವುಗಳನ್ನು ರೂಪಕವಾಗಿ, ಪ್ರತಿಮೆಯಾಗಿ ಉಪಯೋಗಿಸಿಕೊಂಡು ಅದರಿಂದ ಬರುವ ರಸಾನುಭವವನ್ನು, ಶಕ್ತಿಯನ್ನು ಹೇಗೆ ಅರ್ಜಿಸಿಕೊಳ್ಳಬೇಕು ಅನ್ನುವುದನ್ನು ನೀವು ತಿಳಿದುಕೊಳ್ಳಬೇಕು, ಹೇಳಿಕೊಡಬೇಕು. ಆದ್ದರಿಂದ ಆಭರಣಗಳನ್ನು ಕರಗಿಸಿ ಹೇಗೆ ಬೇರೆ ಮಾಡಿಕೊಳ್ಳುತ್ತೇವೆಯೋ ಹಾಗೆಯೆ ಹಳೆಯದನ್ನು ವ್ಯಾಖ್ಯಾನ ಮಾಡುವಾಗ ಹೊಸದೃಷ್ಟಿಯಿಂದ ವ್ಯಾಖ್ಯಾನ ಮಾಡಬೇಕಾಗಿ ಬರುತ್ತದೆ.
ನಮ್ಮ ದೇಶದಲ್ಲಿ ಈಗ ನಿರುದ್ಯೋಗ ಬಹಳ ಅಂತ ಹೇಳುತ್ತಿದ್ದಾರೆ. ಆವೊತ್ತು ಒಂದು ದಿವಸ ಪತ್ರಿಕೆಯಲ್ಲಿ ಓದಿದೆ. ಬದರೀನಾಥದಲ್ಲಿ ಅದೇನೋ ಮಂಜೆಲ್ಲ ಹೋದಕೂಡಲೆ, ಅಲ್ಲೊಂದು ಮಂಜಿನರಾಶಿ ಇದೆಯಂತೆ, ಅದೇ ದೊಡ್ಡ ಬದರೀನಾರಾಯಣ. ಮಂಜಿನರಾಶಿ ಅಂಥವು ಹಿಮಾಲಯದಲ್ಲಿ ಬೇಕಾದಷ್ಟಿವೆ. ಆದರೆ ಅದನ್ನು ನೋಡಲು ಸಾವಿರಾರು ಜನ ಕಷ್ಟಪಟ್ಟುಕೊಂಡು ಬಸ್ಸು ಕಮರಿಗೆ ಬಿದ್ದುಹೋದರೂ ಚಿಂತೆಯಿಲ್ಲ ಅಂತ ಹೇಳಿಬಿಟ್ಟು ಹೋಗುತ್ತಾರೆ. ಏನೋ ಪ್ರಕೃತಿಸೌಂದರ್ಯ, ಅದರ ಅನುಭವ, ಆ ತರವೇ ಇದ್ದರೆ ಪರವಾಯಿಲ್ಲ. ಮೊನ್ನೆ ನೋಡ್ತೀನಿ; ಮೂವತ್ತೈದು ಲಕ್ಷ ಜನ ಹರಿದ್ವಾರದಲ್ಲಿ ಸ್ನಾನ ಮಾಡಿದರಂತೆ, ಪೂಜೆ ಮಾಡಿದರಂತೆ. ಅಂದರೆ ೩೫ ಲಕ್ಷ ಜನ ಸೋಮಾರಿಗಳು. ನಮ್ಮ ದೇಶದಲ್ಲಿ ಮಾಡಲು ಕೆಲಸವಿಲ್ಲ. ನಿರುದ್ಯೋಗಿಗಳು. ಆದ್ದರಿಂದ ನೀವೊಂದು ಪ್ರಶ್ನೆ ಕೇಳಬಹುದು. ಅವರು ಅಲ್ಲಿಗೆ ಹೋಗುವುದರಿಂದ ಸದ್ಯ ರಕ್ಷಣೆಯಾಯಿತು. ಅಲ್ಲಿಗೆ ಹೋಗದೆ ಇದ್ದರೆ ಅವರು ಗುಜರಾತಿನಲ್ಲಿ ಇಲ್ಲವೆ ಬಿಹಾರಿನಲ್ಲಿ ಮಾಡಿದಹಾಗೆ ಮಾಡುತ್ತಿದ್ದರು ಅಂತ. ಈ ಮುವತ್ತೈದು ಲಕ್ಷ ಜನರನ್ನು ಈ ಉಪಾಯದಿಂದ ಮೆಲ್ಲಗೆ ಹರಿದ್ವಾರದ ಕಡೆ ತಿರುಗಿಸಿದರೆ ನಮ್ಮ ಸರ್ಕಾರಕ್ಕೆ ಸ್ವಲ್ಪ ಅನುಕೂಲ. ಏಕೆಂದರೆ ಅವರಿಗೆ ಕೆಲಸ ಕೊಡಬೇಕು, ಸರಿಯಾದ ತಿಳುವಳಿಕೆ ಕೊಡಬೇಕು. ಅದೂ ಇಲ್ಲ, ಇದೂ ಇಲ್ಲ ಅಂದರೆ ಇನ್ನೂ ದಂಗೆ ಏಳುತ್ತದೆ, ಗಲಾಟೆಯಾಗುತ್ತದೆ. ರೈಲು ಸುಡುತ್ತಾರೆ. ಅದರ ಬದಲು ಹರಿದ್ವಾರಕ್ಕೆ ಹೋಗಿ ಸ್ನಾನ ಮಾಡಿದರೆಂದರೆ ನಮಗೇನೂ ತೊಂದರೆ ಇಲ್ಲ ಎಂದು ಬಸ್ಸುಗಳನ್ನು ಕಲ್ಪಿಸಿ ಅನುಕೂಲಗಳನ್ನು ಮಾಡಿಕೊಡುತ್ತಾರೆ, ಅಲ್ಲಿಗಾದರೂ ಹೋಗಿ ತೊಲಗಲಿ ಎಂದು.
ನೋಡಿ, ನೀವು ಬರಹಗಾರರು ನೀವೇನು ತಮಾಷೆಗೆ ಹೊರಟಿಲ್ಲ. ಇಂಥವುಗಳನ್ನೆಲ್ಲ ಬರೆದು ತಿಳಿಸಿ ಕೆಲಸಮಾಡಬೇಕು. ಇಷ್ಟು ಕೆಲಸ ಮಾಡಿದ್ರೂನೂ ಈ ಮೌಢ್ಯ, ಅವಿದ್ಯೆ ಎನ್ನುವುದು ತಲೆಮೇಲೆ ಹಿಮಾಲಯ ಸದೃಶವಾಗಿ ಚಪ್ಪಡಿ ಕುಳಿತಿರುತ್ತದೆ. ನೋಡಿ, ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಆ ಬರ್ಟ್ರಾಂಡ್‌ರಸಲ್, ಹಕ್‌ಸ್ಲಿ ಮುಂತಾದವರು ಎಷ್ಟು ಬರೆದರು; ಏನು ಕೆಲಸ ಮಾಡಿದ್ದಾರೆ; ಆದರೂ ಈ ಪುರೋಹಿತಶಾಹಿ ವರ್ಗದವರಿದ್ದಾರಲ್ಲ ಅವರು ತಮ್ಮ ತಮ್ಮ ಕೆಲಸ ಮಾಡುತ್ತಲೇ ಇದ್ದಾರೆ. ಆದರೆ ಅಷ್ಟೆನೂ ಹಿಂದಿನಂತೆ ಆಗುತ್ತಾ ಇಲ್ಲ. ಆದರೆ ನೀವು ಇನ್ನೂ ಅದಕ್ಕಿಂತಲೂ ಭಯಂಕರ ಕೆಲಸ ಮಾಡಬೇಕಾಗಿದೆ. ಏಕೆಂದರೆ ನಮ್ಮ ಈ ಅಜ್ಞಾನ, ಮೌಢ್ಯ ಸಾವಿರಾರು ವರ್ಷಗಳಿಂದ ತುಂಬಿದೆ. ಅದೇನು ದುರದೃಷ್ಟ ಎಂದರೆ, ಉಪನಿಷತ್ತಿನಲ್ಲಿ ಪ್ರಣಿತವಾದಂತಹ ದಿವ್ಯಜ್ಞಾನವಿದೆಯಲ್ಲ ಅದು ಬರಲಿಲ್ಲ ನಮ್ಮವರಿಗೆ; ಅದನ್ನು ಅನುಸರಿಸಲಿಲ್ಲ. ಪುರಾಣಗಳಲ್ಲಿ ಅಲ್ಲಿ ಇಲ್ಲಿ ಇರುವ ಲೋಕಾಚಾರ, ಕಾಲಾಚಾರ ಇವುಗಳನ್ನು ಅನುಸರಿಸಿಕೊಂಡು ಬಂದು ದೇಶವನ್ನು ಈ ಸ್ಥಿತಿಗೆ ತಂದಿಟ್ಟಿದ್ದಾರೆ. ಅದಕ್ಕೋಸ್ಕರ ನೀವು ಬರಹಗಾರರು, ಇದನ್ನೆಲ್ಲ ಮಾಡಬೇಕಾದರೆ, ನೀವು ಎಷ್ಟು ಅಧ್ಯಯನ ಮಾಡಬೇಕು ಅಂತ ನೋಡಿ. ಬರೀ ಪತ್ರಿಕೆಯಲ್ಲಿ ಅಲ್ಲೊಂದು ಇಲ್ಲೊಂದು ಕಾಗದ ಬರೆದ ಮಾತ್ರಕ್ಕೆ ಪ್ರಯೋಜನವಿಲ್ಲ. ಮೊದಲು ಟೀಕೆ ಮಾಡಬೇಕೆಂದರೆ ಇವನ್ನೆಲ್ಲ ಚೆನ್ನಾಗಿ ಅರಿತಿರಬೇಕು. ಈ ಮೌಢ್ಯದಿಂದ ಪಾರುಮಾಡಲು ಎರಡು ಪ್ರಯತ್ನಗಳು ನಡೆದುವು. ಒಂದು Buddhism, ಬುದ್ಧದೇವ ಬಹಳ ಪ್ರಯತ್ನಮಾಡಿದ, ಈ ಮೌಢ್ಯದಿಂದ ನಮ್ಮನ್ನು ಪಾರುಮಾಡಬೇಕೆಂದು. ಕಡೆಗೆ ಏನಾಯಿತು? ಒಂದಷ್ಟು ದೂತ ಅದು ನಡೆಯಿತು. ಆಮೇಲೆ ಬಿದ್ದುಹೋಯಿತು. ೧೨ನೆಯ ಶತಮಾನದಲ್ಲಿ ಜಾತಿವಿನಾಶ ಮಾಡಬೇಕೆಂದು ಹೇಳಿ ಬಸವೇಶ್ವರರು ಜಗತ್ತಿನಲ್ಲಿ ಯಾರೂ ಮಾಡದೆ ಇರುವ ಪ್ರಯತ್ನ ಪ್ರಾರಂಭ ಮಾಡಿದರು. ಅದನ್ನು ಕೂಡ ಹಿಮ್ಮೆಟ್ಟಿಸಿದರು. ತಿಪ್ಪೇರುದ್ರಸ್ವಾಮಿಗಳ "ಕರ್ತಾರನ ಕಮ್ಮಟ" ಎನ್ನುವ ಕಾದಂಬರಿ, ಪುಟ್ಟಸ್ವಾಮಯ್ಯ ಬರೆದಿರುವ "ಕ್ರಾಂತಿಕಲ್ಯಾಣ"ದಲ್ಲಿ ಕೊನೆಗೊಂಡಿರುವ ಆರು ಕಾದಂಬರಿಗಳನ್ನು ನೀವು ಸರಿಯಾಗಿ ಓದಿದ್ದರೆ ಅಲ್ಲಿ ನಿಮಗೆ ಗೊತ್ತಾಗುತ್ತದೆ, ಹೇಗೆ ಈ ಪುರೋಹಿತ ವರ್ಗ ಈ ಕ್ರಾಂತಿಗಳನ್ನು ಹಿಮ್ಮೆಟ್ಟಿಸಿತು ಅಂತ. ಹೇಗೆ ತುಳಿಯಿತು? ಹೇಗೆ ಅನ್ಯಾಯ ಮಾಡಿತು? ಹೇಗೆ ಕೊಲೆ ಮಾಡಿತು? ಎಲ್ಲಾ ಮಾಡಿತು. ಅದು ಗೊತ್ತಾಗುತ್ತದೆ.[]
ಅದನ್ನೆ ಕುರಿತು ಸ್ವಾಮಿ ವಿವೇಕಾನಂದರು ಒಂದು ಭಾಷಣದಲ್ಲಿ ಪುರೋಹಿತ ವರ್ಗವನ್ನು ಹೀಗೆ ಖಂಡಿಸಿದ್ದಾರೆ:
"ಶೂದ್ರ ಸಮಾಜವನ್ನು ತನ್ನ ಕಬ್ಬಿಣದ ಕರಾಳ ಮುಷ್ಟಿಯ ಸಹಸ್ರ ಪಾಶಗಳಿಂದ ಬಿಗಿದು ಬಂಧಿಸಿಟ್ಟುಕೊಳ್ಳುವ ಉದ್ದೇಶದಿಂದ, ದೇಹ ಮತ್ತು ಮನಸ್ಸಿನ ಶುದ್ಧೀಕರಣದ ಬಾಹ್ಯಸಾಧನಗಳೆಂಬ ನೆವದಲ್ಲಿ ತನ್ನ ಸುತ್ತಲೂ ಸುತ್ತಿಕೊಂಡ ಅನಂತ ಸಂಖ್ಯೆಯ ಕರ್‍ಮ, ಕ್ರಿಯೆ ಮತ್ತು ಆಚಾರಸಮೂಹ ರೂಪದ ಕೊನೆಗಾಣದ ಕಣ್ಣಿಯ ಬಲೆಯಲ್ಲಿ ಸಿಕ್ಕಿಕೊಂಡು, ಪುರೋಹಿತ ಷಾಹಿ, ಉದ್ಧಾರದ ಆಶಾಲವಲೇಶವಿಲ್ಲದೆ, ಅಪಾದಮಸ್ತಕ ಗೋಜು ಬಿಗಿದುಕೊಂಡು, ಈಗ ಸುಸ್ತಾಗಿ, ಸಂಪೂರ್ಣ ಹತಾಶವಾಗಿ, ಮೃತಪಾಯವಾಗಿ ಪತಿತವಾಗಿ ನಿದ್ದೆಹೋಗುತ್ತಿದೆ. ಈಗ ಆ ಬಲೆಯಿಂದ ಅದಕ್ಕೆ ಬಿಡುಗಡೆಯೆ ಇಲ್ಲವಾಗಿದೆ. ಆ ಬಲೆಯನ್ನೇನಾದರೂ ಹರಿದರೆ ಸಾಕು, ಆ ಪುರೋಹಿತರ ಪುರೋಹಿತಷಾಹಿ ಬುಡಮುಟ್ಟ ಅಲ್ಲಾಡಿ ಹೋಗುತ್ತದೆ!....
"ಪ್ರತಿಯೊಬ್ಬ ಮಾನವನಲ್ಲಿಯೂ ಪ್ರಗತಿಯ ಆಕಾಂಕ್ಷೆ ಸ್ವಾಭಾವಿಕವಾಗಿಯೆ ಬೇರೂರಿರುತ್ತದೆ....
"ಭರತಖಂಡದ ಪತನಕ್ಕೆ ಮುಖ್ಯ ಕಾರಣವೆಂದರೆ, ರಾಜವರ್ಗದವರ ಮತ್ತು ಪುರೋಹಿತವರ್ಗದವರ ಅಧಿಕಾರ ಬಲದಿಂದ ವಿದ್ಯಾ ಬುದ್ಧಿಗಳ ಸರ್ವ ಸ್ವಾಮ್ಯವೂ ಅತ್ಯಲ್ಪ ಸಂಖ್ಯೆಯ ಕೆಲವೇ ಕೆಲವು ಬ್ರಾಹ್ಮಣರ ಹಸ್ತಗತವಾದದ್ದು.
"ಪುರೋಹಿತ ವರ್ಗದ ಪತನಕ್ಕೆ ಯಾವನಾದರೊಬ್ಬ ವ್ಯಕ್ತಿಯ ಅಥವಾ ಯಾವುದಾದರೂ ಒಂದು ಗುಂಪಿನ ಹೊಣೆ ಹೊರಿಸುವ ಯಾರೇ ಆಗಲಿ ತಿಳಿಯಬೇಕು, ಕರ್‍ಮತತ್ವದ ಅನಿವಾರ್‍ಯ ನಿಯತಿಗೆ ವಿಧೇಯವಾಗಿ, ಬ್ರಾಹ್ಮಣ ಜಾತಿ ತನ್ನ ಗೋರಿಯನ್ನು ತಾನೆ ತನ್ನ ಕೈಯಿಂದಲೆ ಕಟ್ಟಿಕೊಳ್ಳುತ್ತಿದೆ ಎಂದು, ಮತ್ತು ಹಾಗಾಗತಕ್ಕದ್ದೆ ಸರಿ ಎಂದೂ. ಉಚ್ಚ ವರ್ಣದ ಮತ್ತು ಉಚ್ಚ ವರ್ಗದ ಪ್ರತಿಯೊಂದು ಜಾತಿಯೂ ತನ್ನ ಕೈಯಿಂದಲೇ ತನ್ನ ಶ್ಮಶಾನಚಿತೆಯನ್ನು ರಚಿಸಿಕೊಳ್ಳುವುದು ಅದರ ಪ್ರಧಾನ ಕರ್‍ತವ್ಯವೆ ಆಗಬೇಕಾಗುತ್ತದೆ!"
ನೀವು ಇದಕ್ಕೆಲ್ಲ ಸಿದ್ದರಾಗಿರಬೇಕು. ಹುಲಿಯನ್ನು ಕೊಲ್ಲುತ್ತೇನೆ ಎಂದು ಹುಲಿ ಅಲ್ಲಿ ಇರುವಾಗ ಒಂದಿಷ್ಟು ಕಲ್ಲು ತೆಗೆದುಕೊಂಡು ಸರಿಯಾಗಿ ತಲೆಗೆ ಗುರಿಯಿಟ್ಟು ಹೊಡೆಯುತ್ತೇನೆಂದರೆ ಏಟು ಬಿದ್ದ ಕೂಡಲೆ ಅದು ಬಂದು ಆಮ್ ಅಂತ ನಿಮ್ಮನ್ನು ಅಪ್ಪಳಿಸಿ ಒಂದೇ ಬಾರಿಗೆ ಪೂರೈಸುತ್ತದೆ. ಅದನ್ನು ಹೊಡೆಯಬೇಕಾದರೆ ನೀವು ಜೊಡುನಳಿಗೆ ತೋಟಾ ಕೋವಿ ಇಟ್ಟುಕೊಂಡು ಬಿಲ್ಲೆತ್ತಿ ಎಳೆದುಕೊಳ್ಳಬೇಕು. ಹಾಗೆ ಗುರಿಕಟ್ಟಿ ತಲೆಗೆ ಹೊಡೆದರೆ ಒಂದೇ ಹೊಡೆತಕ್ಕೆ ಅದು ಬೀಳಬೇಕು. ಅದುಬಿಟ್ಟು ಗಾಯ ಮಾಡಿ ಬಿಡೋದಲ್ಲ. ಹಾಗೆಯೆ ಈ ಪುರೋಹಿತಶಾಹಿ ಹುಲಿಯಂತೆ. ಇದಕ್ಕೆ ಸಣ್ಣಪುಟ್ಟ ಕಲ್ಲನ್ನು ಜೇಬಿನಲ್ಲಿಟ್ಟುಕೊಂಡು ಹೋಗಿ ಹೊಡೆಯುತ್ತೇನೆಂದರೆ ಹುಡುಗಾಟದ ಕೆಲಸವಲ್ಲ. ಅದನ್ನು ಹೊಡೆಯಬೇಕಾದರೆ ನಾವು ಮದ್ದುಗುಂಡುಗಳನ್ನೆ ತಯಾರು ಮಾಡಬೇಕು. ನಾವು ಹೇಳುವಂತಹ ಮದ್ದುಗುಂಡು ರೂಪಕವಾದದ್ದು ಅಂತ ಇಟ್ಟುಕೊಳ್ಳೋಣ. ವಾಚ್ಯವಾಗಿಯೆ ಗುಂಡಿನಲ್ಲಿ ಹೊಡೆಯಬೇಕು ಅಂತ ಅಲ್ಲ. ಆದರೆ ಈ ವಿಚಿತ್ರ ಬೇಟೆಯಲ್ಲಿ (ಈ ಸಂದರ್ಭದಲ್ಲಿ) ಮೊದಲಗುಂಡು ತಗುಲಬೇಕಾದದ್ದು ಹುಲಿಯ ತಲೆಗಲ್ಲ, ನಿಮ್ಮ ತಲೆಗೇ! ತಲೆ........ತಲೆ........ತಲೆ, ಮೊದಲು ತಲೆಯಲ್ಲಿರುವ ಮೆದುಳನ್ನು ಕ್ಲೀನ್ ಮಾಡಬೇಕು. ಅವರಿಗಲ್ಲ. ಆ ಪುರೋಹಿತ ವರ್ಗದವರಿಗಲ್ಲ. ನಿಮಗೆ! 'ನೀವು' ಅಂತ ಹೇಳಿದೆ. ನನ್ನ ಮಟ್ಟಿಗೆ ನಾನೇನೋ ಅವರಿಂದ ಸಂಪೂರ್ಣ ಪಾರಾಗಿದ್ದೇನೆ. ಆದ್ದರಿಂದ ನನಗೇನೂ ರಗಳೆ ಇಲ್ಲ, ಗೊತ್ತಾಯಿತೇ? ನಾನು ಯಾವ ದೇವಸ್ಥಾನಕ್ಕಾಗಲಿ ಪೂಜೆ ಮಾಡಿಸಲು ಹೋಗದೆ ಬಹುಶಃ ಐವತ್ತು ವರುಷಗಳ ಮೇಲೆ ಆಗಿದೆ. ಯಾವ ಭಟ್ಟನಾಗಲಿ, ಯಾವ ಪುರೋಹಿತನಾಗಲಿ, ಯಾವ ಪಂಚಾಂಗವಾಗಲಿ ನನ್ನ ಬಳಿ ಸುಳಿಯಗೊಡುವುದಿಲ್ಲ. ನಮ್ಮ ಮದುವೆಗಿದುವೆಗೆ ಯಾವ ಹಾರುವನನ್ನಾಗಲಿ ಪೌರೋಹಿತ್ಯಕ್ಕೆ ಕರೆಸುವುದಿಲ್ಲ. ಕರೆಸಲೂ ಇಲ್ಲ. ಆದರೆ ಬೇರೆ ಬೇರೆ ಜನರಿಗೆ ಇದನ್ನೆಲ್ಲ ಹೇಳಿದರೆ 'ಏನಿದು? ನೀವು ಹೇಳುವುದು ಭಯಂಕರವಾಗಿ ಕಾಣಿಸುತ್ತದೆ' ಎನ್ನುತ್ತಾರೆ. ಅಂದರೇನು ಅದರ ಅರ್ಥ? ಅಜ್ಞಾನದ ಇಲ್ಲಣ ತಲೆಯೊಳಗೆ ತುಂಬಿದೆ. ಮೊದಲು ನಿಮ್ಮವರ ತಲೆಯೊಳಗಿರುವ ಅಜ್ಞಾನದ ಇಲ್ಲಣ, ಅದನ್ನು ನೀವು ತೆಗೆಯಬೇಕು. ಅದಕ್ಕೆ ಎಷ್ಟು ಕೆಲಸ ಮಾಡಬೇಕಾಗುತ್ತದೆ ಗೊತ್ತೇ? ಆ ಅರ್ಥದಲ್ಲಿ ನಾನು ಹೇಳಿದ್ದು-ಈ ವಿಚಿತ್ರ ಬೇಟೆಯುಲ್ಲಿ ಮೊದಲ ಗುಂಡು ತಗುಲಬೇಕಾದ್ದು ನಿಮ್ಮ ತಲೆಗೇ ಎಂದು.
ಈ ಅಜ್ಞಾನ ಎಲ್ಲಿ ಹೊರಟುಹೋಗಿಬಿಡುತ್ತದೊ ಎಂದು ರಾಷ್ಟ್ರೋತ್ಥಾನ ಸಾಹಿತ್ಯ ಮೊದಲಾದವರು ಅದನ್ನು ರಕ್ಷಣೆಮಾಡುವುದಕ್ಕೋಸ್ಕರ ಬೇರೆ ಸಣ್ಣ ಸಣ್ಣ ಪುಸ್ತಕಗಳನ್ನು ಮಾಡಿ ಪ್ರಕಟಿಸುತ್ತಾ ಇದ್ದಾರೆ. ಕಾಗಕ್ಕ ಗುಬ್ಬಕ್ಕನ ಕಟ್ಟುಕತೆಗಳನ್ನೆಲ್ಲಾ ದೊಡ್ಡ ದೊಡ್ಡ ಋಷಿಗಳ ವಿಚಾರದಲ್ಲಿ ಬರೆಯುತ್ತಾರೆ. ಬರೆದು ನಮ್ಮ ಮಕ್ಕಳನ್ನು ಕೆಡಿಸುತ್ತಾ ಇದ್ದಾರೆ.[೧೦] ನನಗೊಂದು ಪುಸ್ತಕ ಬಂತು, ಜಯತೀರ್ಥರು ಅಂತ ಮೂಲದಲ್ಲಿ ಆತ ಮಧ್ವಾಚಾರ್ಯರ ಕೃತಿಗಳಿಗೆ ಟೀಕೆ ಬರೆದಿದ್ದಾರಂತೆ. ಮಧ್ವಾಚಾರ್ಯರು ಏನು ಅನ್ನುವುದನ್ನು ನಾನು ನಿಮಗಾಗಲೆ ಸೂಚ್ಯವಾಗಿ ಹೇಳಿದ್ದೇನೆ. ಅದು ಅವರ ಶಿಷ್ಯರಿಗೆ ಭಾರಿ ದೊಡ್ಡದಾಗಿರಬಹುದು. I don't think that there is any worse phylosophy than Madhwa's.[೧೧]
ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿಗಳಿಂದ ಪರಿಶೀಲಿಸಿದರೆ, ಮಧ್ವ ಸಿದ್ಧಾಂತಕ್ಕಿಂತ ಕಳಪೆ ಸಿದ್ಧಾಂತ ಮತ್ತೊಂದಿಲ್ಲ-ಈ ಅರ್ಥದಲ್ಲಿ. ಅದಕ್ಕೇನೆ ಆ ಮಾರ್ಗದ ಅನುಯಾಯಿಗಳಾದವರಿಗೆ ರಾಮಾಯಣದರ್ಶನದಂತಹ ಕೃತಿಗಳನ್ನು ಕಂಡರೆ ಆಗುವುದಿಲ್ಲ. ಏಕೆಂದರೆ ರಾಮಾಯಣದರ್ಶನದಲ್ಲಿರುವುದು ಸರ್ವೋದಯ, ಸಮನ್ವಯ ಮತ್ತು ಪೂರ್ಣದೃಷ್ಟಿ. ನಿತ್ಯನಾರಕಿ, ಮುಕ್ತಿಯೋಗ್ಯ, ತಮೋಯೋಗ್ಯ, ನಿತ್ಯಸಂಸಾರಿ-ಇದನ್ನೆಲ್ಲ ನಂಬಿದವರಿಗೆ ಶ್ರೀ ರಾಮಾಯಣದರ್ಶನವನ್ನು ಅಪ್ರೀಸಿಯೇಟ್ (appreciate) ಮಾಡುವುದಕ್ಕೆ ಸಾಧ್ಯವೇ ಇಲ್ಲ. ಆದ್ದರಿಂದಲೆ ಅವರು, ಆ ಗುಂಪಿಗೆ ಸೇರಿದ ವಿಮರ್ಶಕ ಮನ್ಯರು, ಇಡೀ ಕಾವ್ಯವನ್ನೇ ಹಳಿಯುತ್ತಾ ಕುಳಿತುಕೊಳ್ಳುತ್ತಾರೆ.[೧೧] ಇದೆಲ್ಲ ಏನು ಏಕೆ ಅನ್ನುವುದನ್ನು ನಮ್ಮ ಹುಡುಗರಿಗೆ ನೀವು ತಿಳಿಸಿಕೊಡಬೇಕು. ಅವರು ಏಕೆ ಹೀಗೆ ಟೀಕೆ ಮಾಡುತ್ತಾರೆ? ನೀವು ಏಕೆ ಪ್ರತಿಭಟಿಸುತ್ತೀರಿ ಎನ್ನುವುದೂ ಆ ಮಕ್ಕಳಿಗೆ ಗೊತ್ತಾಗಬೇಕು. ಇಲ್ಲದಿದ್ದರೆ ಸರ್ವೋದಯ ಭಾವನೆಯನ್ನು ಗ್ರಹಿಸುವುದಕ್ಕೆ ಸಾಧ್ಯವೇ ಇಲ್ಲ. ಈ ಸಿದ್ಧಾಂತವನ್ನು ಒಪ್ಪಿಕೊಂಡವರಿಗೂ ಅದನ್ನು ತಿಳಿಯಹೇಳಬೇಕು. If revolution takes place here then nobody can withstand. ಇಲ್ಲಿ ಕಲೆಯಲ್ಲಿ ಕ್ರಾಂತಿಯುಂಟಾದರೆ ಯಾರೂ ತಡೆಯುವುದಕ್ಕೆ ಆಗುವುದಿಲ್ಲ. ನೀವು ಬರೀ ಗುಂಡು ಹೊಡೆಯುವುದು, ಕೊಲ್ಲುವುದು ಅದೆಲ್ಲ ಪ್ರಯೋಜನವಿಲ್ಲ. ಹಿಂದೆ ಅದನ್ನೆಲ್ಲ ಮಾಡಿ ಸೋತಿದ್ದಾರೆ. ತಲೆ........ತಲೆ........ತಲೆಯನ್ನು ಕ್ಲೀನ್ ಮಾಡಬೇಕು. ಉಳಿದಿರುವುದು ಅದು. ಬರಹಗಾರರ ಕೆಲಸ ಅಷ್ಟೆ ಅಲ್ಲ. ನೀವು ಓದಿಯೂ ಹೇಳಬೇಕು, ವಾಚನಮಾಡಿಯೂ ತಿಳಿಸಬೇಕು. ಸಭೆಗಳನ್ನು ಕರೆಯಬೇಕು. ಹೋಗಿ 'ಶೂದ್ರ ತಪಸ್ವಿ' ನಾಟಕದ ಮೇಲೆ ಭಾಷಣ ಮಾಡಿ. ಹಿಂದಿನ ಕತೆ ಏನು? ಈಗಿನ ಕತೆ ಏನು? ಏಕೆ ಹೀಗೆ ಮಾಡಿದರು ಅಂತ ಹೇಳಿ, ಬೇಕಾದಷ್ಟಿದೆ, ಅದನ್ನು ಬಿಟ್ಟು ಸೋಬಾನೆ ಹಾಡುತ್ತಾ ಕುಳಿತುಕೊಳ್ಳಬೇಡಿ.
(ಜಯತೀರ್ಥರನ್ನು ಕುರಿತು ಏನೋ ಹೇಳುತ್ತಾ ಇದ್ದಿರಿ ಎಂದ ಪಾಟೀಲರ ಸೂಚನೆಗೆ ಮುಂದುವರಿಯುತ್ತಾ)
ಅದೇ? ಪುಸ್ತಕವನ್ನು ಓದಿದೆ: ಹೋಗಲಿ ಸಾಮಾಜಿಕವಾಗಿಯಾಗಲಿ, ಆಧ್ಯಾತ್ಮಿಕವಾಗಿಯಾಗಲಿ, ಶೈಕ್ಷಣಿಕವಾಗಿಯಾಗಲಿ ಏನಾದರೂ ಒಂದು ದೊಡ್ಡದನ್ನು ಮಾಡಿದ್ದಾರೇನು? ಅವರ ಶಿಷ್ಯರು ಹೇಳುವುದೆಂದರೆ ಮಧ್ವಾಚಾರ್ಯರ ಕೃತಿಗಳಿಗೆ ಟೀಕೆ ಬರೆದಿದ್ದಾರಂತೆ, ಟೀಕಾಚಾರ್ಯರೋ ಏನೋ ಎಂದು ಹೇಳುತ್ತಾರೆಂದು ತೋರುತ್ತದೆ. ಹೋಗಲಿ, ಜೀವನಚರಿತ್ರೆಯನ್ನು ನೋಡೋಣವೆಂದು ಹೋದರೆ, ಕಾಗಕ್ಕ ಗುಬ್ಬಕ್ಕನ ಕತೆಗಿಂತಲೂ ಭಯಂಕರವಾಗಿದೆ. ಅವರು ಇಬ್ಬರು ಹೆಂಡಿರನ್ನು ಮದುವೆಯಾಗಿದ್ದಾರಂತೆ. ಅವರು ಒಂದು ದಿವಸ ಕುದುರೆಯ ಮೇಲೆ ಹೋಗುತ್ತಾ, ಹೊಳೆ ಏರಿತ್ತಂತೆ. ಕುದುರೆ ಮೇಲೆ ಕುಳಿತು ಇವರು ಕೂಡಾ ಕುದುರೆ ಕುಡಿದ ಹಾಗೆ ನೀರು ಕುಡಿದರಂತೆ. ಆಗ ಎದುರುಗಡೆ ಇದ್ದ ಒಬ್ಬ ಸನ್ಯಾಸಿ "ನೀನೇನು ಪಶುವಿನ ಹಾಗೆ ನೀರು ಕುಡಿಯುತ್ತಿದ್ದೀಯಲ್ಲ, ಪಶು ಅಂತ ಕಾಣುತ್ತದೆ" ಅಂದರಂತೆ. ಅದಕ್ಕೆ ಅವರು "ಅಯ್ಯೊ ಪಶುವಿನ ಹಾಗೆ ಏನು? ನಾನು ನಿಜವಾಗಿಯೂ ಪಶು. ನನಗೆ ದೀಕ್ಷೆ ಕೊಡಿ" ಎಂದು ಹೇಳಿಬಿಟ್ಟು ಸನ್ಯಾಸಿಯಾಗಿಬಿಟ್ಟರಂತೆ. ಅವರು ಇಬ್ಬರು ಹೆಂಡಿರನ್ನು ಮದುವೆಯಾಗಿದ್ದರಲ್ಲ ಅವರಿಗೆ ಪ್ರಸ್ಥ ಆಗಿರಲಿಲ್ಲವಂತೆ. ಅವರ ತಂದೆ ಒಬ್ಬ ಪಾಳೆಯಗಾರರು. ಪಾಳೆಯಗಾರರೆಂದರೆ ಆಗಿನ ಕಾಲದ ಒಬ್ಬ ಪುಟ್ಟ ರಾಜ. ಅವನೂ ಅವನ ಪತ್ನಿಯೂ ಇಬ್ಬರೂ ಬಂದು ಆ ಸನ್ಯಾಸಿಗೆ "ನೀನು ಒಳ್ಳೆಯ ಮಾತಿನಲ್ಲಿ ಅವನನ್ನು ಹಿಂದಕ್ಕೆ ಕಳಿಸುತ್ತೀಯೊ? ಕತ್ತೀಲಿ ಕಡಿದುಹಾಕಿಬಿಡುತ್ತೇವೆ." ಎಂದು ಗದರಿಸಿದರಂತೆ. ಅವರೇನೋ ಇವರು ಸನ್ಯಾಸಿ ಗಿನ್ಯಾಸಿ ಅಂತ ನೋಡಲಿಲ್ಲ. ಕಡಿದುಹಾಕಿಯೆ ಬಿಡುತ್ತಿದ್ದರು. ಅದಕ್ಕೇ ಅವನನ್ನು ಹಿಂದಕ್ಕೆ ಕಳಿಸಲಾಯಿತು. ಜಯತೀರ್ಥ ಸನ್ಯಾಸಿಯಾಗಿದ್ದನಲ್ಲ ಆ ಸನ್ಯಾಸತ್ವವನ್ನು ತೆಗೆಯುವುದಕ್ಕೆ ಇವರೊಂದು ಪ್ರಾಯಶ್ಚಿತ್ತ ಮಾಡಿದರು. ಆಮೇಲೆ ರಾತ್ರಿ ಅವನ ಕೋಣೆಗೆ ಆ ಇಬ್ಬರು ಹೆಣ್ಣುಮಕ್ಕಳನ್ನು ಕಳಿಸಿದರಂತೆ. ಅಷ್ಟು ಹೊತ್ತಿಗೆ ಆ ಹೆಣ್ಣುಮಕ್ಕಳು ಕಿಟ್ಟನೆ ಕಿರುಚಿಕೊಂಡರಂತೆ. ಏನು ಅಂತ ಎಲ್ಲರೂ ನೋಡಿದಾಗ ಆದಿಶೇಷ ಹೆಡೆ ಎತ್ತಿ ನಿಂತುಕೊಂಡಿತ್ತಂತೆ. ಆಮೇಲೆ ಬೇಡಪ್ಪಾ ನೀನು ಅಂತ ಕರೆದುಕೊಂಡು ಹೋಗಿ ಗುರುವಿಗೆ ಒಪ್ಪಿಸಿ ಬಂದರಂತೆ. ಹೀಗೆಯೇ ಎಲ್ಲ. ಇದನ್ನೂ ಸ್ವಲ್ಪ ವೈಚಾರಿಕವಾಗಿ ಬರೆಯಬಹುದಿತ್ತು. ವಾಸ್ತವವಾಗಿ ಇವನು ಮನಃಪೂರ್ವಕವಾಗಿ ಸನ್ಯಾಸಧರ್ಮವನ್ನು ಸ್ವೀಕರಿಸಿದ್ದರೆ, ಬಲಾತ್ಕಾರವಾಗಿ ಅಲ್ಲಿಗೆ ಎಳೆದುತಂದು ಕೂರಿಸಿದಾಗ ಆ ಹೆಣ್ಣುಮಕ್ಕಳೇ ಈತನನ್ನು ನೋಡಿ, ನೀವು ಈ ತರದಲ್ಲಿರುವವರು, ನಿಮ್ಮನ್ನು ಕೆಡಿಸುವುದಕ್ಕೆ ನಾವು ಬರಲಿಲ್ಲ ಅಂತ, ಹೇಗೆ ಶಾರದಾಮಣಿದೇವಿ ಶ್ರೀ ರಾಮಕೃಷ್ಣರಿಗೆ ಹೇಳಿದರೋ ಹಾಗೆ ಹೇಳಬಹುದಿತ್ತು. ರಾಮಕೃಷ್ಣರು ಏನು ಹೇಳಿದರು? ನಾನು ಎಲ್ಲವನ್ನು ತ್ಯಜಿಸಿ ಎಲ್ಲದರಲ್ಲಿಯೂ ತಾಯಿಯನ್ನು ನೋಡತಕ್ಕಂತಹವನು. ಆದರೆ ನೀನು ನಾನು ಈ ಲೌಕಿಕಕ್ಕೆ ಮತ್ತೆ ಬರಬೇಕೆಂದು ಅಪೇಕ್ಷೆ ಪಟ್ಟರೆ ಅದಕ್ಕೂ ಸಿದ್ದನಾಗಿದ್ದೇನೆ ಅಂದುಬಿಟ್ಟರು. ಆಕೆ ಹೇಳಿದರು-ಅಯ್ಯಯೊ ನಾನೇಕೆ ನಿಮ್ಮನ್ನು ಈ ಲೌಕಿಕಕ್ಕೆ ಎಳೆಯಲಿ? ನೀವು ಹೀಗಿರುವುದಾದರೆ ನಾನು ನಿಮ್ಮ ಸೇವೆಯನ್ನು ಮಾಡಿಕೊಂಡಿರುತ್ತೇನೆ ಎಂದರು. ಹಾಗೆ ಆದಿಶೇಷ ಪಾದಿಶೇಷ ಕಟ್ಟುಕತೆಯನ್ನೆಲ್ಲ ತರುವುದಕ್ಕೆ ಬದಲಾಗಿ ಬೇರೆ ತರದಲ್ಲಿ ನಿಜ ಹೇಳಬಹುದಿತ್ತು. ಇಲ್ಲ. ಇದೆಲ್ಲ ನಮಗೆ ಆಗುವುದಿಲ್ಲ. ಆದಿಶೇಷನೆ ಆಗಬೇಕು. ಆಮೇಲೆ ಇನ್ನೊಂದೇನು ಗೊತ್ತೇನು? ಇವರು ಯಾರು ಅಂತ? ಇವರ Origin (ಮೂಲ) ಏನೂ ಅಂತ? ಮಧ್ವಾಚಾರ್ಯರ ಪುಸ್ತಕ ಹೊರುವುದಕ್ಕೆ ಒಂದು ನಂದಿ ಇತ್ತಂತೆ. ಒಂದು ಎತ್ತಿನ ಮೇಲೆ ಪುಸ್ತಕಗಳನ್ನೆಲ್ಲ ಹೊರಿಸಿಕೊಂಡು ಹೋಗುತ್ತಿದ್ದರಂತೆ. ಎತ್ತು ಒಂದುಕಡೆ ಮಲಗಿತ್ತಂತೆ. ಅದು ಯಾರೊ ಅವರ ಶಿಷ್ಯವರ್ಗವಂತೆ. ಸ್ವಾಮೀ, ಮಧ್ವಾಚಾರ್ಯರೇ, ನೀವು ಇಷ್ಟು ಅದ್ಭುತವಾದ ಕೃತಿಗಳನ್ನು ಬರೆದಿದ್ದೀರಿ. ಅದೇ ಮುಕ್ತಿಯೋಗ್ಯರು; ಅದೇ ನಿತ್ಯನಾರಕಿಗಳು. ಅದ್ಭುತ ಕೃತಿಕಾರರಾಗಿದ್ದೀರಿ. ಹೋಗಲಿ ಅದ್ಭುತ ಅಂತ ನಾವು ಇಟ್ಟುಕೊಳ್ಳೋಣ. ಆದರೆ ಇದಕ್ಕೆ ಯಾರು ವ್ಯಾಖ್ಯಾನ ಮಾಡುವವರು ಎಂದು ಕೇಳಿದರಂತೆ. 'ಈ ಎತ್ತೇ ಮಾಡುತ್ತದೆ' ಎಂದರಂತೆ. ಆ ಎತ್ತೇ ಈಗ ಜಯತೀರ್ಥರಾಗಿ ಹುಟ್ಟಿದರಂತೆ... ಪಾಪ, ಇದನ್ನೆಲ್ಲ ಬರೆಯುವ ವ್ಯಕ್ತಿ ಎಷ್ಟು ಸಂತೋಷದಿಂದ, ಎಷ್ಟು ಉತ್ಸಾಹದಿಂದ, ನಾನೇನೋ ಜಯತೀರ್ಥರಿಗೆ ಮಹಾತ್ಕಾರ್‍ಯ ಮಾಡುತ್ತಿದ್ದೇನೆಂದು ಬರೆಯುತ್ತಿದ್ದಾರೆ. ಸ್ವಲ್ಪ ವಿಚಾರ ತಲೆಯಲ್ಲಿದ್ದರೆ, ಏನು ಅವಿವೇಕ? ಈ ತರ ಹೀಗೆ. ಇಂಥವನ್ನೆಲ್ಲ ಕಟ್ಟುಕತೆ ಮಾಡದೆ ವೈಚಾರಿಕವಾಗಿ ವೈಜ್ಞಾನಿಕವಾಗಿ ಬರೆಯಬೇಕು ಎನ್ನುವುದಿಲ್ಲ. ನೀವೇನಾದರೂ ಸಣ್ಣ ಸಣ್ಣ ಪುಸ್ತಕಗಳನ್ನು ಬರೆದು ಜನರಿಗೆ ಕೊಡುವುದಾದರೆ ಸ್ವಲ್ಪ ವೈಚಾರಿಕವಾಗಿ ಇಂಥದನ್ನೆಲ್ಲ ಬರೆದುಕೊಡಿ. ಅಷ್ಟೆ.
ಆಮೇಲೆ ಇನ್ನೊಂದೇನೆಂದರೆ ಕರ್ನಾಟಕ, ಕನ್ನಡ ಇಷ್ಟೇ ಸಂಕುಚಿತದಲ್ಲಿ ನಿಮ್ಮ ಪ್ರಜ್ಞೆ ಇಟ್ಟುಕೊಳ್ಳುವುದು ಬೇಡ. ನಾನೂ ಕರ್ನಾಟಕಕ್ಕಾಗಿ ಕನ್ನಡಕ್ಕಾಗಿ ಕೆಲಸ ಮಾಡಿದ್ದೇನೆ. ಆದರೆ ನನ್ನ ಪ್ರಜ್ಞೆ ವಿಶ್ವಪ್ರಜ್ಞೆ. ಈವೊತ್ತು ಚಿಲಿಯಲ್ಲಿ ಏನು ನಡೆಯುತ್ತಿದೆ ಎನ್ನುವುದು ನನಗೆ ಗೊತ್ತು. ಈವೊತ್ತು ವಿಯಟ್ನಾಂನಲ್ಲಿ ಏನು ನಡೆಯುತ್ತಿದೆ ಎನ್ನುವುದೂ ಗೊತ್ತು. ಅಲ್ಲಲ್ಲಿ ಏನೇನು ನಡೆಯುತ್ತಿದೆ ಎನ್ನುವುದನ್ನು ಪತ್ರಿಕೆಗಳಲ್ಲಿ ಮಾತ್ರವಲ್ಲ ಬೇರೆ ಬೇರೆ ಕಡೆಗಳಿಂದಲೂ ತಿಳಿದಿದ್ದೇನೆ. ಈ ಹೋರಾಟ ಎಲ್ಲಿ ಏನೇ ನಡೆಯುತ್ತಾ ಇರಲಿ, ಇದೇ ಹೋರಾಟ. ಅದೆಲ್ಲದರ ಮೂಲ ಇದೇ. ಯಾವುದಕ್ಕಾಗಿ ಹೊರಟಿದ್ದೀರೋ ಆ ಮೂಲ. ಅದೇ ಮೂಲದ ಹೋರಾಟವೇ ನಾನಾ ರೂಪಗಳಲ್ಲಿ ನಾನಾ ಕಡೆಗಳಲ್ಲಿ ಯುದ್ಧ ರೂಪದಲ್ಲಿ ನಡೆಯುತ್ತಾ ಇದೆ. ಮುಷ್ಕರ ರೂಪದಲ್ಲಿಯೂ ನಡೆಯುತ್ತಾ ಇದೆ. ಹರತಾಳ ಆದಿಯಾಗಿ ನಾನಾ ರೂಪಗಳಲ್ಲಿ ನಡೆಯುತ್ತಾ ಇದೆ. ಆದ್ದರಿಂದ ನಿಮ್ಮ ಪ್ರಜ್ಞೆ ಬರೀ ಕರ್ನಾಟಕ, ಬರೀ ಇಂಡಿಯಾ ಮಾತ್ರ ಅಲ್ಲದೆ ವಿಶ್ವಪ್ರಜ್ಞೆಯಾಗಿರಲಿ. ನೀವು ಬರೆಯುವ ಬರಹಗಳಲ್ಲಿ ಈ ವಿಶ್ವಪ್ರಜ್ಞೆ ಕಾಣುತ್ತಾ ಇರಬೇಕು. ಸಂಕುಚಿತ ಭಾವದಿಂದ ಬರೀ ನಮ್ಮದಷ್ಟನ್ನೆ ಕೊಡಬೇಡಿ. ಮಾಸ್ಕೋದಿಂದ ಹೊರಡುವಂತಹ ಕೆಲವು ಪತ್ರಿಕೆಗಳಿವೆ. "ಮಾಸ್ಕೋ ನ್ಯೂಸ್" "ನ್ಯೂ ಟೈಂಸ್" ಪತ್ರಿಕೆಗಳಲ್ಲಿ ಇಡೀ ಪ್ರಪಂಚದಲ್ಲಿ ವಾರಾವಾರ ನಡೆಯುವಂತಹುದೆಲ್ಲ ಸಿಕ್ಕುತ್ತದೆ. ಎಷ್ಟರಮಟ್ಟಿಗೆ ನಿಮ್ಮದು ವಿಶ್ವಪ್ರಜ್ಞೆಯಾಗುತ್ತದೆಯೋ ಅಷ್ಟರಮಟ್ಟಿಗೆ ನಿಮ್ಮ ಸಾಹಿತ್ಯ ವಿಶ್ವ ಸಾಹಿತ್ಯವಾಗುತ್ತದೆ. ಅದನ್ನು ಬಿಟ್ಟು ಈ ಕಟ್ಟುಕತೆ, ಈ ಬುರ್ನಾಸುಗಳನ್ನೆ ಪುರಾಣ, ಹರಿಕಥೆ ಹೇಳುತ್ತಾ, ಹೇಳಿದ ಬುರ್ನಾಸುಗಳನ್ನೆ ಬಯ್ಯುತ್ತಾ ಕೂಡುವುದು ಕಾಲನಷ್ಟ. ಯಾರುಯಾರೊ ಹೇಳಿದ ಮತ್ತು ಹೇಳುವ ಅವಿವೇಕವನ್ನೆ ತಿದ್ದುವುದರಲ್ಲಿಯೆ ಜೀವಮಾನ ಕಳೆದರೆ ಏನು ಗತಿ? ಅದಕ್ಕೋಸ್ಕರ ಪ್ರಜ್ಞೆಯನ್ನು ಸ್ವಲ್ಪ ವಿಶಾಲ ಮಾಡಿಕೊಳ್ಳಿ ಎಂದು ನಾನು ಹೇಳಿದ್ದು.
ಕೊನೆಯದಾಗಿ ನಾನು ನಿಮಗೆ ಹೇಳುವುದೊಂದಿದೆ. ಸಾಮಾನ್ಯವಾಗಿ ನೀವು ಒಂದು "ಪಕ್ಷ". ರಾಜಕೀಯದಲ್ಲೇನೊ ಹೌದು. ಒಂದು ಪಕ್ಷ ಕಟ್ಟಿದ್ದೀರಿ. ಸಮಾಜವಾದಿಪಕ್ಷ ಅಂತ ಇಟ್ಟುಕೊಳ್ಳೋಣ. ಕಾಂಗ್ರೆಸ್ ಪಕ್ಷಕ್ಕೆ ನೀವು ವಿರೋಧಿಗಳು. ಸಮಾಜವಾದಿಪಕ್ಷ ಏನು ಧ್ಯೇಯಗಳನ್ನು ಇಟ್ಟುಕೊಂಡಿದೆಯೋ ಅದೇ ಧ್ಯೇಯಕ್ಕೋಸ್ಕರವಾಗಿ ಕಾಂಗ್ರೆಸ್‌ನವರೇನಾದರೂ ಮಾಡಿದರೆ ಅದನ್ನು ವಿರೋಧಿಸುತ್ತೀರಿ. ಏಕೆಂದರೆ, ವಿರೋಧ ಪಕ್ಷದವರು ಏನುಮಾಡಿದರೂ ಅದನ್ನು ವಿರೋಧಿಸಲೇಬೇಕು ಅಂತ. 'ಅಲ್ಲಯ್ಯ, ನೀವೇನು ಮಾಡಬೇಕು ಅಂತ ಇದ್ದೀರೋ ಅದನ್ನೆ ತಾನೇ ಅವರೂ ಮಾಡುತ್ತಿರುವುದು. ಅದನ್ನು ಸಪೋರ್ಟು ಮಾಡಿ' ಎಂದರೆ, ಆಗುವುದಿಲ್ಲ. ವಿರೋಧ ಪಕ್ಷವನ್ನು ಬೀಳಿಸಲೆಬೇಕಷ್ಟೆ! ನೀವು ಮಾತ್ರ ಆ ಕೆಲಸಕ್ಕೆ ಹೋಗಬೇಡಿ. ನೀವು ಒಪ್ಪಿರುವ ತತ್ವಗಳನ್ನು ಲೋಕಕ್ಕೆ ಒಳ್ಳೆಯದು ಮಾಡುವ ಯಾರೇ ಮಾಡಿದರೂ ನೀವು ಅದಕ್ಕೆ ಬೆಂಬಲ ಕೊಡಬೇಕು, ಸಹಕರಿಸಬೇಕು. ನೀವು ಒಪ್ಪಿರುವ ತತ್ವಗಳನ್ನೆ ಆಚರಿಸ ಹೊರಡುವವರನ್ನು, ವಿರೋಧಿಗಳೆಂದು ಹೇಳುವುದು ಅವಿವೇಕ. ಒಳ್ಳೆಯ ಕೆಲಸ ಎಲ್ಲಿ ನಡೆಯುತ್ತದೆಯೋ ಅದನ್ನು ನೀವು ಒಪ್ಪಿಕೊಳ್ಳಬೇಕು. ಬೆಂಬಲ ಕೊಡಬೇಕು. ಅದನ್ನು ಪ್ರಚೋದಿಸಬೇಕು. ಪ್ರಚಾರಮಾಡಬೇಕು. ಯಾವುದನ್ನೂ ವಿರೋಧಪಕ್ಷವೆಂದು ಮಾಡಿಕೊಳ್ಳಬೇಡಿ. ಅದು ವಿರೋಧ ತತ್ವಕ್ಕೆ ಮಾತ್ರ ಸೀಮಿತವಾಗಿರಲಿ ಅಷ್ಟೆ. ವಿರೋಧ ತತ್ವವನ್ನು ವಿರೋಧಿಸಿ.
ಈಗ ಅಕ್ಷರ ಪ್ರಚಾರ ಇದೆ. ಬ್ರಾಹ್ಮಣ ಅಕ್ಷರ ಪ್ರಚಾರ ಮಾಡುತ್ತಿದ್ದಾನೆಂದು ಅದಕ್ಕೆ ವಿರೋಧವಾಗಿ ಹೋಗುತ್ತೀರಾ? ಅಕ್ಷರ ಪ್ರಚಾರ ಮಾಡುವುದು ಮುಖ್ಯ. ಬ್ರಾಹ್ಮಣನಾದರೂ ಮಾಡಲಿ, ಮುಸಲ್ಮಾನನಾದರೂ ಮಾಡಲಿ, ಯಾರಾದರೂ ಮಾಡಲಿ, ಅಂತಹುದನ್ನೆಲ್ಲ ನೀವು ವಿರೋಧಿಸಬಾರದು. ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಎಲ್ಲೆಲ್ಲಿ ಒಳ್ಳೆಯ ಕೆಲಸ ನಡೆಯುತ್ತಾ ಇದೆಯೋ ಯಾವ ಪಕ್ಷದಿಂದ ನಡೆಯುತ್ತಾ ಇದೆಯೋ ಅದಕ್ಕೆಲ್ಲ ನಿಮ್ಮ ಬೆಂಬಲ ಇರಬೇಕು. ಏಕೆಂದರೆ ನೀವು ಎಲ್ಲವನ್ನೂ ವಿರೋಧಿಸುವ ಮತ್ತೊಂದು ವಿರೋಧ ಪಕ್ಷವಾಗಿ ಉಳಿಯಬಾರದು. Get away from this negative attitude. ಯಾವಾಗಲೂ ಸೃಜನ ಕಾರ್ಯ, ಸೃಷ್ಟಿಕಾರ್ಯ ವಿಧ್ಯುಕ್ತವಾಗಿ ನಡೆಯಲಿ; ಬರಿಯ ನಿಷೇಧ ಅನಾವಶ್ಯಕ.
ನಾನು ಎಷ್ಟು ಹೊತ್ತು ಮಾತನಾಡಿದೆನೋ ದೇವರಿಗೇ ಗೊತ್ತು; ಇಷ್ಟನ್ನು ಹೇಳಿ ನನ್ನ ಭಾಷಣವನ್ನು ಮುಗಿಸುತ್ತೇನೆ. ಅಂದರೆ ನಾನು ನಿಮ್ಮನ್ನು ಒಲಿಸಿಕೊಳ್ಳಬೇಕು ಅಂತ ಯೋಚನೆ ಮಾಡಿಲ್ಲ. ನನಗೆ ಸರಿ ಅಂದು ತೋರಿದ್ದನ್ನು ಹೇಳಿದ್ದೇನೆ. ಈ ದ್ವೇಷ ಈ ಅಸೂಯೆ ಇಂಥದನ್ನೆಲ್ಲ ಬಿಟ್ಟು, ಒಳ್ಳೆಯದು ಎಲ್ಲೆಲ್ಲಿ ನಡೆಯುತ್ತಿದೆಯೋ ಅದಕ್ಕೆ ಸಹಾಯಮಾಡುವ ರೀತಿಯಲ್ಲಿ ಮಾಡಿ, ಬರೆಯಿರಿ, ಪಕ್ಷಗಿಕ್ಷ ಅಂತಹದನ್ನೆಲ್ಲ ಯೋಚನೆ ಮಾಡಬೇಡಿ. ಇಷ್ಟನ್ನು ಹೇಳಿ ಮುಗಿಸುತ್ತೇನೆ.
ಅಡಿಟಿಪ್ಪಣಿಗಳು:
೧.
ತಾರೀಖು ೨೦-೪-೧೯೭೪ರಂದು ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟವನ್ನು ಉದ್ಘಾಟಿಸಿದ ಶ್ರೀ ಕುವೆಂಪುರವರ ಭಾಷಣದ ಪೂರ್ಣ ವರದಿ.
೨.
ಆದರೆ ಬ್ರಾಹ್ಮಣರಲ್ಲಿ, ಅದರಲ್ಲಿಯೂ ಮಾಧ್ವರಲ್ಲಿ, ಈಗಲೂ ಕಿರುಕುಳ ಕೊಡುತ್ತಾರಂತೆ. ಒಬ್ಬ ವಿಭಾಗಾಧಿಕಾರಿ ಮತ್ತು ಒಬ್ಬ ಜಿಲ್ಲಾಧಿಕಾರಿ ಮಾಧ್ವರು ಮಾಧ್ವರಲ್ಲದ ಗುರು ರಾಮದಾಸ ಸ್ವಾಮಿಗಳಿಂದ 'ರಾಮಮಂತ್ರ' ದೀಕ್ಷೆ ತೆಗೆದುಕೊಂಡಿದ್ದಕ್ಕೆ ಅವರಿಗೆ ಅವರ ಜಾತಿಯ ಸಂಪ್ರದಾಯ ಮಠಾಧೀಶ್ವರರು ತುಂಬ ಕಿರುಕುಳ ಕೊಟ್ಟರಂತೆ. ಅವರ ಹೆಣ್ಣು ಮಕ್ಕಳಿಗೆ ಜಾತಿಯಲ್ಲಿ ಗಂಡು ಸಿಗುವುದಕ್ಕೂ ತೊಂದರೆಯಾಯಿತಂತೆ!
ಇನ್ನೂ ಆಶ್ಚರ್ಯದ ಸಂಗತಿಯೂ ಉಂಟು; ಇಬ್ಬರು ಮಾಧ್ವಸ್ವಾಮಿಗಳು ತಮಗೆ ನಿಜವಾಗಿ ವೈರಾಗ್ಯ ಪ್ರವೃತ್ತಿಯಿಲ್ಲ ಎಂದು ಪೀಠತ್ಯಾಗ ಮಾಡಿದರೆಂಬ ಸ್ತುತ್ಯವಾದ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತಷ್ಟೆ. ಉಳಿದ ಅನೇಕ ಸಂಪ್ರದಾಯಸ್ಥ ಮಾಧ್ವರು ಅವರಿಗೆ ಬೇಕಾದಷ್ಟು ಕಿರುಕುಳ ಕೊಟ್ಟರು ಎಂಬ ವದಂತಿಯೂ ಹಬ್ಬಿದೆ
೩.
ಇಲ್ಲಿ ಗೀತೆಯದೇನೂ ತಪ್ಪಿಲ್ಲ. ಅದು ವಿಶ್ವಜನತೆಗೆ ಅನ್ವಯವಾಗುವಂತೆ ಮನಃಶಾಸ್ತ್ರೀಯ ಸಮ್ಮತವಾಗಿ ಗುಣ ಕರ್‍ಮ ವಿಭಾಗಶಃ ವರ್ಣಗಳು ಸೃಷ್ಟಿಯಾಗಿವೆ ಎಂದೇ ಹೇಳುತ್ತದೆ. ಅಂದರೆ ವರ್ಣನಿರ್ಣಯ ಹುಟ್ಟಿನಿಂದಲ್ಲ, ಜೀವದಸ್ವರೂಪ ಸ್ವಭಾವ ಜನ್ಮಾಂತರ ಸಂಸ್ಕಾರ ಮತ್ತು ಅದಕ್ಕೆ ಅನುಸಾರವಾಗಿ ಅದು ಸಹಜವಾಗಿಯೆ ಕೈಕೊಳ್ಳುವ ಕರ್ಮ ಇವುಗಳಿಂದ ಸಿದ್ಧವಾಗುತ್ತದೆ. ಇದು ಸರ್ವಮಾನವರಿಗೂ ಅನ್ವಯವಾಗುವ ವಿಶ್ವತತ್ತ್ವ: ಹಿಂದೂಗಳಿಗೆ ಮಾತ್ರವೇ ಅಲ್ಲ. ಹೀಗೆ ಹೇಳಿದ್ದಾರೆ ಸ್ವಾಮಿ ವಿವೇಕಾನಂದರು "ಪ್ರಪಂಚದಲ್ಲಿರುವ ಪ್ರತಿಯೊಬ್ಬರಲ್ಲಿಯೂ ಇಂದ್ರಿಯವನ್ನು ಮೀರಿಹೋಗುವ ಶಕ್ತಿ ಸುಪ್ತವಾಗಿದೆ. ಒಂದು ಸಣ್ಣ ಕೀಟ ಕೂಡ ಒಂದಲ್ಲ ಒಂದು ದಿನ, ಇಂದ್ರಿಯವನ್ನು ಮೀರಿ ದೇವರನ್ನು ಸೇರುವುದು. ಯಾವ ಜೀವನವೂ ನಿರರ್ಥಕವಾಗುವುದಿಲ್ಲ. ಪ್ರಪಂಚದಲ್ಲಿ ನಿರರ್ಥಕ ಎನ್ನುವುದು ಇಲ್ಲ. ಮನುಷ್ಯ ನೂರುವೇಳೆ ಹಿಂಸೆಗೆ ಒಳಗಾಗಬಹುದು, ಸಾವಿರವೇಳೆ ಬೀಳಬಹುದು. ಆದರೂ ಕೊನೆಗೆ ತಾನು ದೇವರೆಂಬುದನ್ನು ತಿಳಿದುಕೊಳ್ಳುವನು. ಸರಳರೇಖೆಯಲ್ಲಿ ಅಭಿವೃದ್ಧಿ ಎನ್ನುವುದು ಇಲ್ಲವೆಂಬುದು ನಿಮಗೆ ಗೊತ್ತಿದೆ. ಪ್ರತಿಯೊಂದು ಜೀವವೂ ಒಂದು ವೃತ್ತದೊಳಗೆ ಸಂಚರಿಸುವಂತೆ ತೋರುವುದು. ಅದನ್ನು ಎಲ್ಲರೂ ಪೂರ್ಣಮಾಡಬೇಕು, ಎಂದಾದರೊಂದುದಿನ. ಮೇಲಕ್ಕೆ ಏಳದೆ ಇರುವ ಅಧಃಪಾತಾಳಕ್ಕೆ ಯಾರೂ ಬೀಳಲಾರರು. ಯಾರೂ ನಾಶವಾಗುವುದಿಲ್ಲ. ನಾವೆಲ್ಲ ಒಂದು ಸಾಮಾನ್ಯ ಕೇಂದ್ರವಾದ ದೇವರಿಂದ ಬಂದಿರುವೆವು. ದೇವರಿಂದ ಬಂದಿರುವ ಅತಿಕ್ಷುದ್ರ ಅಥವಾ ಕೀಳು ಪ್ರಾಣಿಯೂ ಎಲ್ಲ ಜೀವಿಗಳ ಪಿತನೆಡೆಗೆ ಕೊನೆಗೆ ಬರಲೇಬೇಕು. ಯಾರಿಂದ ಎಲ್ಲ ಬಂದಿದೆಯೊ, ಯಾರಲ್ಲಿ ಎಲ್ಲ ಜೀವಿಸಿದೆಯೊ, ಎಲ್ಲಿಗೆ ಎಲ್ಲವೂ ತೆರಳುವುದೊ ಅದೇ ದೇವರು." (ಉಲ್ಲೇಖದ ಸ್ವಸ್ಥಾನಕ್ಕೆ)
೪.
ಹಿಂದೂಗಳಿಗೆ ಮಾತ್ರ ಎಂದು ಅವರು ಹೇಳಿದರೆ ನೀವು ಹೇಳಬೇಕಾಗುತ್ತದೆ: "ಹಾಗಾದರೆ ನಿಮ್ಮ ಶ್ರೀಕೃಷ್ಣ ಭಗವಂತನಲ್ಲ, ಅವನೂ ಒಬ್ಬ ಬ್ರಾಹ್ಮಣಪರ ಆಚಾರ್ಯನಾಗುತ್ತಾನೆ. ಅಲ್ಲದೆ, ರಣರಂಗದ ಮಧ್ಯೆ ಶ್ಲೋಕ ರಚಿಸಿ ಹದಿನೆಂಟು ಅಧ್ಯಾಯ ಪದ್ಯದಲ್ಲಿ ಹೇಳುವುದಕ್ಕೆ ಅದೇನು ಯುದ್ಧರಂಗವೊ ಭೋಜನಕೂಟವೊ? ಯಾವನೊ ಪದ್ಯ ರಚನಾಸಾಮರ್ಥ್ಯವುಳ್ಳ ಹಾರುವನೆ ಬರೆದಿರಬೇಕು ಗೀತೆಯನ್ನು. ಇಂತಹ ಅವಿವೇಕವನ್ನು ನಾವು ಇನ್ನು ಮುಂದೆ ಸಹಿಸುವುದಿಲ್ಲ. ಒಂದುವೇಳೆ, ನೀವು ಹೇಳುವಂತೆ, ವರ್ಣ ಜಾತಿ ವರ್ಗಗಳನ್ನು ನಿಮ್ಮ ಆ ದೇವರೇ ಸೃಷ್ಟಿ ಮಾಡಿದ್ದರೂ ಅವನ್ನೆಲ್ಲ ಇಂದು ಸರ್ವೋದಯಕ್ಕಾಗಿ ನಾವು ಧ್ವಂಸಮಾಡಬೇಕಾಗುತ್ತದೆ. ಕಾಲರಾ, ಪ್ಲೇಗು, ಮಲೇರಿಯಾಗಳನ್ನು ದೇವರೇ ಸೃಷ್ಟಿಮಾಡಿದ್ದು ಅಂತಾ ಹೇಳಿ ನಾವು ಸುಮ್ಮನಿರುವುದಕ್ಕೆ ಆದೀತೆ? ಅನಾರೋಗ್ಯಕರವೂ ಮೃತ್ಯುಕರವೂ ಆಗಿರುವ ಅವನ್ನೆಲ್ಲ ನಾಶಪಡಿಸಿ ನಮ್ಮ ಆರೋಗ್ಯವನ್ನು ನಾವು ರಕ್ಷಿಸಿಕೊಳ್ಳುವಂತೆ ವರ್ಣ ಜಾತಿ ವರ್ಗ ಮೊದಲಾದ ದುರ್ಭಾವನೆಗಳನ್ನೆಲ್ಲ ಧ್ವಂಸಮಾಡಿ ಸಮಾಜ ಕ್ಷೇಮವನ್ನು ಸಾಧಿಸಿಯೆ ಸಾಧಿಸುತ್ತೇವೆ"ಎಂದು.
೫.
According to Sri Madhva, all the souls are not alike in their intrinsic nature. The nature of the soul is a fixity and it is Unalterable. The destiny of the soul is determined by its ಸ್ವರೂಪ. In all there are three kinds of souls. (1) Mukti Yogyas(ಮುಕ್ತಿಯೋಗ್ಯರು) destined to attain Moksha (2) Those that eternally dangle between death and birth called nitya--samsarins (ನಿತ್ಯ ಸಂಸಾರಿಗಳು) (3) The last class called tamo-yogyasa (ತಮೋಯೋಗ್ಯರು) destined to eternal hell. There is no hope for them.
No soul can outstrip and change its nature(¸ÀégÀÆ¥À).--P.Nagaraj Rao. The Concept of God in Madhwa's Vedanta'. Hiriyanna Birth Centenary Commemoration Volume 1972 P.170.(ಉಲ್ಲೇಖದ ಸ್ವಸ್ಥಾನಕ್ಕೆ)
೬.
ಭಗವದ್ಗೀತೆಯನ್ನು ಭಗವಂತನ ವಾಣಿ ಎಂದು ಗೌರವಿಸುವ ಈ ಆಚಾರ್ಯರಿಗೆ "ಮವೈವಾಂಶೋ ಜೀವಲೋಕೇ ಜೀವಭೂತಃ ಸನಾತನಃ" "ನನ್ನ ಒಂದು ಸನಾತನ ಅಂಶವೇ ಜೀವ ಆಗಿದೆ" ಎಂದು ಜೀವರುಗಳ ದಿವ್ಯತ್ವವವನ್ನು ಸಾರಿದ ಶ್ರೀಕೃಷ್ಣವಾಕ್ಕಿನಲ್ಲಿಯೂ ಶ್ರದ್ಧೆಯಿಲ್ಲ. (ಉಲ್ಲೇಖದ ಸ್ವಸ್ಥಾನಕ್ಕೆ)
೭.
ಸ್ವಾಮಿ ವಿವೇಕಾನಂದರು ತಮ್ಮ ಚಿಕಾಗೊ ಭಾಷಣದಲ್ಲಿ ಏನು ಹೇಳಿದ್ದಾರೆ ನೋಡಿ: "ನೀವೆಲ್ಲರೂ ಅಮೃತ ಪುತ್ರರು. ಅಮೃತ ಪುತ್ರರಿರಾ, ಹಿಂದುವು ನಿಮ್ಮನ್ನೆಂದಿಗೂ ಪಾಪಿಗಳೆಂದು ಕರೆಯನು. (ಪಾಪ! ಅವರಿಗೆ ಮಧ್ವಾಚಾರ್‍ಯರ ಈ ತತ್ವ ಗೊತ್ತಿರಲಿಕ್ಕಿಲ್ಲ!) ನೀವೆಲ್ಲರೂ ಈಶ್ವರನ ಶಿಶುಗಳು, ಆನಂದಾಂಶರು, ನಿತ್ಯ ಪವಿತ್ರರು, ನಿತ್ಯ ಮುಕ್ತರು. ಮಾನವನನ್ನು ಪಾಪಿಯೆಂದು ಕರೆಯುವುದಕ್ಕಿಂತಲೂ ಬೇರೊಂದು ಮಹಾಪಾಪವಿಲ್ಲ. ಹಾಗೆ ಕರೆಯುವುದು ಮನುಷ್ಯತ್ವಕ್ಕೇ ಒಂದು ಮಹಾನಿಂದೆ." (ಉಲ್ಲೇಖದ ಸ್ವಸ್ಥಾನಕ್ಕೆ)
೮.
"I am afraid it must be confessed that Kanarese writers, highly skilful though they are in the manipulation of their language, and very pleasing to listen to in the original, have as yet contributed extremely little to the stock of the world's knowledge and inspiration...there is little of original and imperishable thought on the questions of perennial interest to man......" (A History of Kanarese Literature, P.108) A.D.1914
---E.P.Rice
(ಉಲ್ಲೇಖದ ಸ್ವಸ್ಥಾನಕ್ಕೆ)
೯.
Caught in endless thread of the net of infinite rites, ceremonies, and customs, which it spread on all sides as external means for purification of the body and the mind with a view to keeping the society with the iron grasp of these innumerable bonds--the priestly power, thus hopelessly entangled from head to foot, is now asleep in despair. There is no escape out of it now. Tear the net and the priesthood of the priest is shaken to its foundation! There is implanted in every man, naturally a strong desire for progress......The chief cause of India's ruin has been the monopolising of the whole education and intelligence of the land, by dint of pride and royal authority, among a handful of men......Those who lay the fault of attempting to bring down the priestly class at the door of any particular person, or body of persons, other than themselves, ought to know that, in obedience to the inevetable law of nature, the Brahmin caste is erecting with its own hands, its own sepulehur: and that is what ought to be. It is good and appropriate that every caste of high birth and privileged nobility should make it its principal duty to raise it's own funeral pyre with it's own hands.
--Swami Vivekananda
Complete works: Vol.IV, pp.456, 458, 482
(ಉಲ್ಲೇಖದ ಸ್ವಸ್ಥಾನಕ್ಕೆ)
೧೦.
ಆ ದಿನ ನನ್ನ ಉದ್ಘಾಟನಾ ಭಾಷಣದಲ್ಲಿ ಪ್ರಕಾಶಕರ ಹೆಸರುಗಳನ್ನು ಪಟ್ಟಿ ಹೇಳುತ್ತಾ ಹೋಗುವುದಕ್ಕೆ ಬದಲಾಗಿ ಸುಪ್ರಸಿದ್ಧ ಪ್ರಕಾಶನ ಸಂಸ್ಥೆಯ ಒಂದು ಹೆಸರನ್ನು ಹೇಳಿ ಅದಕ್ಕೆ "ಮೊದಲಾದವರು" ಎಂದು ಮಾತ್ರ ಸೇರಿಸಿದೆ. ವಾಸ್ತವವಾಗಿ ಅಂದು ನನ್ನ ವಿಮರ್ಶೆಗೆ ಗುರಿಯಾದ ಪುಸ್ತಕ 'ಜಯತೀರ್ಥರು' ಎಂಬುದು ಐ.ಬಿ.ಹೆಚ್.ಪ್ರಕಾಶನದ್ದು. ಪತ್ರಿಕೆಗಳಲ್ಲಿ ರಾಷ್ಟ್ರೋತ್ಥಾನ ಒಂದನ್ನೆ ನಾನು ಖಂಡಿಸಿದೆ ಎಂಬಂತೆ ಸುದ್ದಿ ಪ್ರಕಟವಾಯಿತು. ರಾಷ್ಟ್ರೋತ್ಥಾನ ಸಂಸ್ಥೆಯವರೇ ನನಗೆ ಏನೂ ಕಾಗದ ಬರೆಯಲಿಲ್ಲ. ಬದಲಾಗಿ ಅವರ ಎಲ್ಲ ೧೧೦ ಪ್ರಕಟಣೆಗಳನ್ನು ಕಳಿಸಿ ಮಾರ್ಗದರ್ಶನ ಮಾಡಲು ಕೇಳಿಕೊಂಡರು. ರಾಷ್ಟ್ರೋತ್ಥಾನದ ಮೊತ್ತಮೊದಲ ಹತ್ತು ಪುಸ್ತಕಗಳನ್ನು ನಾನೆ ಬಿಡುಗಡೆಮಾಡಿದ್ದೆ. ಆಗಲೂ ನಾನು ಮಕ್ಕಳಿಗೆ ನಾವು ಒದಗಿಸುವ ಸಾಹಿತ್ಯ ಬರಿಯ ಭಾವಾವೇಶಪೂರ್ಣವಾಗಿದ್ದರೆ ಸಾಲದು, ಅವರಲ್ಲಿ ವೈಜ್ಞಾನಿಕ ದೃಷ್ಟಿಯನ್ನೂ ವೈಚಾರಿಕ ಬುದ್ಧಿಯನ್ನೂ ಪ್ರಚೋದಿಸುವಂತಿರಬೇಕು ಎಂದು ಭಾಷಣ ಮಾಡಿದ್ದೆ. ಈಗಲೂ ಅದನ್ನೆ ಬೇರೆ ರೀತಿಯಿಂದ ತುಸು ಮುಟ್ಟಿನೋಡಿಕೊಳ್ಳುವಂತೆ ಹೇಳಿದ್ದೆನಷ್ಟೆ.
ನನ್ನ ಟೀಕೆ ರಾಷ್ಟ್ರೋತ್ಥಾನ ಅಥವಾ ಐ.ಬಿ.ಹೆಚ್. ಪ್ರಕಾಶನದ ಅಥವಾ ಇನ್ನಾವ ಬೇರೆ ಪ್ರಕಾಶನದ ಎಲ್ಲ ಪ್ರಕಟಣೆಗಳನ್ನೂ ಕುರಿತು ಆಗಿರಲಿಲ್ಲ. ಉದಾಹರಣೆಗೆ ರಾಷ್ಟ್ರೋತ್ಥಾನದ ಪ್ರಕಟಣೆಗಳಲ್ಲಿ ಐತಿಹಾಸಿಕ ವ್ಯಕ್ತಿಗಳು, ದೇಶಭಕ್ತ ವ್ಯಕ್ತಿಗಳು, ಸ್ವಾತಂತ್ರ್ಯ ಸಂಗ್ರಾಮದ ವ್ಯಕ್ತಿಗಳು, ವಿಜ್ಞಾನದ ವ್ಯಕ್ತಿಗಳು ಇಂತಹ ವ್ಯಕ್ತಿಗಳನ್ನು ಕುರಿತು ಪ್ರಸಿದ್ಧ ಲೇಖಕರು ಬರೆದಿರುವ ಪುಸ್ತಕಗಳ ವಿಚಾರವಾಗಿ ನಾನು ಅಂದು ಟೀಕಿಸಲಿಲ್ಲ. ನನ್ನ ಭಾಷಣ ಧ್ವನಿಮುದ್ರಿತದಲ್ಲಿ ಹೀಗಿದೆ: 'ಕಾಗಕ್ಕ ಗುಬ್ಬಕ್ಕನ ಕಟ್ಟುಕತೆಗಳನ್ನೆಲ್ಲ ದೊಡ್ಡ ದೊಡ್ಡ ಋಷಿಗಳ ವಿಚಾರದಲ್ಲಿ ಬರೆಯುತ್ತಾರೆ.' ಅಂದರೆ, ಧಾರ್ಮಿಕ ವಲಯಕ್ಕೂ ಆಧ್ಯಾತ್ಮಿಕ ವಲಯಕ್ಕೂ ಸೇರಿದ ವ್ಯಕ್ತಿಗಳನ್ನು ಕುರಿತು ಬರೆಯುವಾಗ ಆಧುನಿಕ ವೈಜ್ಞಾನಿಕ ದೃಷ್ಟಿಗೆ ಕಾಗಕ್ಕ ಗುಬ್ಬಕ್ಕನ ಕತೆಗಳಂತೆ ತೋರುವ (ಇಂಗ್ಲೀಷಿನಲ್ಲಿ 'ಫೇರೀ ಟೇಲ್ಸ್' ಅನ್ನುತ್ತಾರೆ) ಹಾಸ್ಯಾಸ್ಪದವಾದ ವಿಷಯಗಳನ್ನು ಬರೆಯುತ್ತಾರೆ ಎಂದೆನಷ್ಟೆ.
ಅಂದು 'ಜಯತೀರ್ಥರು' ಎಂಬ ಪುಸ್ತಕವನ್ನು ಟೀಕಿಸಿದ್ದೆ ಮಾತ್ರ. ಆದರೆ ರಾಷ್ಟ್ರೋತ್ಥಾನದವರು ಅವರ ಪುಸ್ತಕಗಳನ್ನೆಲ್ಲ ಕಳಸಿದ ಮೇಲೆ ನೋಡುತ್ತೇನೆ: ನನ್ನ ಟೀಕೆ 'ಜಯತೀರ್ಥ'ರಿಗಿಂತಲೂ ಹೆಚ್ಚಾಗಿ 'ವಾದಿರಾಜ'ರಿಗೆ ಅನ್ವಯವಾಗುವಂತೆ ತೋರಿತು. ಅಂದರೆ ಏನು ತೋರುತ್ತದೆ? ನಿಜವಾಗಿಯೂ ಲೋಕಕ್ಕೂ ದೇಶಕ್ಕೂ ಸರ್ವಜನರಿಗೂ ಸೇವೆ ಮಾಡಿರುವ ವಿಭೂತಿ ವ್ಯಕ್ತಿಗಳ ವಿಚಾರದಲ್ಲಿ ಬರೆಯಲು ಬೇಕಾದಷ್ಟು ವಾಸ್ತವವಾದ ಸತ್ಯ ಸಂಗತಿಗಳೆ ಇರುವುದರಿಂದ ಅಲ್ಲಿ ಲೇಖಕ ಕಾಗಕ್ಕ ಗುಬ್ಬಕ್ಕನ ಕಟ್ಟುಕತೆಗೆ ಶರಣಾಗುವ ಅವಶ್ಯಕತೆಯೂ ಇರುವುದಿಲ್ಲ, ಅವಕಾಶವೂ ಇರುವುದಿಲ್ಲ. ಹಾಗಲ್ಲದೆ ಬರಿಯ ಒಂದು ಕೋಮಿಗೆ ಸೇರಿ, ಸಾರ್ವಜನಿಕ ಸೇವೆಯ ಸ್ವರೂಪದ ಯಾವ ಕೆಲಸವನ್ನೂ ಮಾಡದ ಸ್ಥಳೀಯಮಾತ್ರದವರನ್ನು ಅಟ್ಟಕ್ಕೇರಿಸುವ ಅಥವಾ ಆಕಾಶಕ್ಕೇರಿಸುವ ಸ್ವಜಾತಿ ಸ್ತೋತ್ರಕ್ಕೆ ಹೊರಟರೆ ಬರಿಯ ಸುಳ್ಳು ಸುಳ್ಳು ಪವಾಡಗಳನ್ನು ಅಲ್ಲದ ಸಲ್ಲದ ಹೊಗಳಿಕೆಗಳನ್ನು ಬರೆದು ಸ್ವಮತ ಪ್ರಚಾರ ಮಾಡಬೇಕಾಗುತ್ತದೆ. ಈ ಜಯತೀರ್ಥ ಮತ್ತು ವಾದಿರಾಜರಂಥವರು ಬರಿಯ ಒಂದು ಕೋಮಿಗೆ ಪೂಜ್ಯರೂ ಗೌರವಾರ್ಹರೂ ಆಗುತ್ತಾರೆಯೆ ಹೊರತು ಉಳಿದವರಿಗೆ ನಗೆಪಾಟಲಾಗುತ್ತಾರೆ. [ನಾನು ಜಯತೀರ್ಥರನ್ನು ಅಪಹಾಸ್ಯ ಮಾಡಿದೆನೆಂದೂ ಅದರಿಂದ ಮಾಧ್ವರಾದ ತಮ್ಮ ಕಕ್ಷಿದಾರರೊಬ್ಬರು ಬಹಳ ಮನ ನೊಂದಿದ್ದಾರೆಂದೂ ನನಗೆ ಒಬ್ಬ ಮಾಧ್ವ ಲಾಯರು ನೋಟೀಸು ಕಳಿಸಿದ್ದಾರೆ. ಲಾಯರು ಮತ್ತು ಅವರ ಕಕ್ಷಿದಾರರು ಇಬ್ಬರೂ ಬಿ.ಎಸ್ಸಿ., ಬಿ.ಎಲ್., ಪಾಸುಮಾಡಿದವರು. ಅಂದರೆ ವಿಜ್ಞಾನವನ್ನೇ ವಿಶೇಷ ಅಧ್ಯಯನ ಮಾಡಿದವರು. ಆದರೂ ಅವರಿಗೆ ವೈಜ್ಞಾನಿಕದೃಷ್ಟಿ ದಕ್ಕಿಲ್ಲ. ನಾನು ಜಯತೀರ್ಥರ ವ್ಯಕ್ತಿತ್ವ ವಿಚಾರವಾಗಿ ಮಾತಾಡಲಿಲ್ಲ. ಅವರನ್ನು ಕುರಿತು ಮಕ್ಕಳಿಗಾಗಿ ಬರೆದ ಪುಸ್ತಕದ ವಿಮರ್ಶೆ ಮಾಡುತ್ತಿದ್ದೆ. ಈಗಿರುವಂತೆ ಆ ಪುಸ್ತಕದಲ್ಲಿ ಜಯತೀರ್ಥರನ್ನು ನಗೆಪಾಟಲು ಮಾಡಲಾಗಿದೆ. ನಾನು ಹೇಳಿದ್ದು: ಈಗಿನವರ ವೈಜ್ಞಾನಿಕ ವಿಚಾರಕ್ಕೆ ಆ ಅವಾಸ್ತವ ಪವಾಡರೂಪದ ಬರವಣಿಗೆ ಹಾಸ್ಯಾಸ್ಪದವಾಗುತ್ತದೆ. ಅದನ್ನು ಇತರ ಐತಿಹಾಸಿಕ ವ್ಯಕ್ತಿಗಳನ್ನು ಕುರಿತು ಬರೆಯುವಂತೆ ವೈಜ್ಞಾನಿಕ ದೃಷ್ಟಿಗೆ ಭಂಗ ಬರದಂತೆ ವಿಚಾರ ಸಮ್ಮತವಾಗಿ ವಾಸ್ತವ ಜೀವಿತಕ್ಕೆ ಸಮೀಪವಾಗುವಂತೆ ಬರೆದರೆ ಗೌರವಾಸ್ಪದವಾಗುತ್ತದೆ ಎಂದು. ನಿಜವಾಗಿ ನಾನು ಜಯತೀರ್ಥರ ವ್ಯಕ್ತಿತ್ವಕ್ಕೆ ಅ ಪುಸ್ತಕದಲ್ಲಿ ಆಗಿರುವ ಅಪಹಾಸ್ಯವನ್ನು ಪರಿಹರಿಸುವ ಸಲಹೆ ಕೊಡುತ್ತಿದ್ದೆನೆ ಹೊರತು ಅವರನ್ನೇ ಕುರಿತು ಮಾತಾಡಲೆ ಇಲ್ಲ. ನನ್ನ ವಿಮರ್ಶೆ ಬರಹಗಾರರಿಗೆ ಕೊಡುತ್ತಿದ್ದ ಸಲಹೆಯಾಗಿತ್ತೆ ಹೊರತು ಯಾವ ವ್ಯಕ್ತಿಯನ್ನೂ ಕುರಿತು ಆಡಿದ ಮಾತಾಗಿರಲಿಲ್ಲ.] ಇವರೇನು ರಾಷ್ಟ್ರವ್ಯಕ್ತಿಗಳಲ್ಲ. ನಾರಾಯಣಗುರು ಅಥವಾ ಅಂಬೇಡಕರ ಅಥವಾ ಬಸವೇಶ್ವರ ಅಥವಾ ಸ್ವಾಮಿ ವಿವೇಕಾನಂದ ಮೊದಲಾದವರಂತೆ. ಇವರು ಒಪ್ಪಿರುವ ತತ್ವಗಳೂ ಜನತಾಘಾತಕವಾದವು; ನಮ್ಮ ರಾಜ್ಯಾಂಗಕ್ಕೂ ವಿರುದ್ಧವಾದುವು; ವಿವೇಕಿಗಳೆಲ್ಲರ ಖಂಡನೆಗೂ ಒಳಗಾಗುವಂಥವು; ಉಚ್ಛಾಟನಾರ್ಹವಾದುವು.
ಆದ್ದರಿಂದ ಈ ಪ್ರಕಾಶನ ಸಂಸ್ಥೆಗಳಿಗೆ ನನ್ನ ಸಲಹೆ: ಧಾರ್ಮಿಕ ಮತ್ತು ಆಧ್ಯಾತ್ಮಿಕ ವರ್ಗದ ವ್ಯಕ್ತಿಗಳನ್ನು ಕುರಿತು ಬರೆಯಿಸುವಾಗ ಕ್ಷುದ್ರ ಕೋಮುವ್ಯಕ್ತಿಗಳನ್ನು ಆರಿಸಿಕೊಳ್ಳಬೇಡಿ: ವಿಶ್ವವ್ಯಕ್ತಿಗಳನ್ನೂ ರಾಷ್ಟ್ರವ್ಯಕ್ತಿಗಳನ್ನೂ ಮಾತ್ರ ಆರಿಸಿಕೊಳ್ಳಿ. ಮೌಢ್ಯ ಪ್ರಚೋದಕವಾಗುವಂತಹ ತೀರ್ಥಕ್ಷೇತ್ರಗಳ ಪವಾಡದ ಸುಳ್ಳುಸುಳ್ಳು ಕತೆಗಳನ್ನೆಲ್ಲ ನಿಜ ಎಂದು ಹೇಳಿ ಮಕ್ಕಳನ್ನೂ ಮೂಢರನ್ನಾಗಿ ಮಾಡಬೇಡಿ. ವೈಜ್ಞಾನಿಕ ದೃಷ್ಟಿಯ ವಿಚಾರವಂತರನ್ನಾಗಿ ಮಾಡಿ. (ಉಲ್ಲೇಖದ ಸ್ವಸ್ಥಾನಕ್ಕೆ)
೧೧.
In fact it is not philosophy at all; it is mere Theology.
೧೨.
ನಾನು ವಿಮರ್ಶಕರನ್ನು ಕುರಿತು ಹೇಳುತ್ತಿದ್ದೆನೆ ಹೊರತು ಗಮಕಿಗಳನ್ನು ಕುರಿತಲ್ಲ. ಮಾಧ್ವರೊಬ್ಬರು ನನಗೆ ಕಾಗದ ಬರೆದು, ನಾನೆ ಮೆಚ್ಚಿಕೊಂಡಿರುವ ಗಮಕಿಗಳಲ್ಲಿ ಅಗ್ರಗಣ್ಯರಾದ ಶ್ರೀ ಕೃಷ್ಣಗಿರಿ ಕೃಷ್ಣರಾಯರು ಮತ್ತು ಶ್ರೀಮತಿ ಶಕುಂತಲಾ ಬಾಯಿ ಪಾಂಡುರಂಗರಾಯರು ಮಾಧ್ವರೆಂದೂ ಅವರಿಬ್ಬರಿಂದಲೆ ಚಿತ್ರಾಂಗದಾ ಮತ್ತು ಶ್ರೀ ರಾಮಾಯಣದರ್ಶನಂ ಕಾವ್ಯ ಮತ್ತು ಮಹಾಕವ್ಯಗಳು ಜನಪ್ರಿಯವಾದುವೆಂದೂ ಬರೆದಿದ್ದಾರೆ. ತುಂಬ ನಿಜ. ಆದರೆ ಅವರು ಬ್ರಾಹ್ಮಣರೆಂದು ಮಾತ್ರ ನನಗೆ ಗೊತ್ತಿತ್ತೇ ಹೊರತು 'ಮಾಧ್ವ'ರೆಂದು ತಿಳಿದದ್ದು ಅವರ ಕಾಗದದಿಂದಲೆ! ದಿವಂಗತ ಕೃಷ್ಣಗಿರಿ ಕೃಷ್ಣರಾಯರು ದಿವಂಗತ 'ಆನಂದ' ಎ.ಸೀತಾರಾಂರೊಡನೆ ನನ್ನ ಕಾವ್ಯಗಳು ಹಸ್ತಪ್ರತಿಯಲ್ಲಿದ್ದಾಗಲೆ ನಮ್ಮ ಮನೆ 'ಉದಯರವಿ'ಗೆ ಬಂದು ಗಂಟೆಗಟ್ಟಲೆ ನನಗೆ ತಮ್ಮ ಅನ್ಯಾದೃಶ ಗಮಕದಿಂದ ರಸದೂಟ ಉಣಬಡಿಸಿ, ನಾವು ಕೊಟ್ಟ ಕಾಫಿ ತಿಂಡಿ, ಹೋಳಿಗೆ, ತುಪ್ಪ, ಪಾಯಸ ಎಲ್ಲ ಸ್ವೀಕರಿಸುತ್ತಿದ್ದರು! ಅಂಥಾ 'ಮಾಧ್ವ'ರೂ ಇದ್ದಾರಲ್ಲಾ!

Saturday, April 2, 2011

ಕುವೆಂಪು - ವಿಚಾರ ಕ್ರಾಂತಿಗೆ ಆಹ್ವಾನ


ವಿಚಾರ ಕ್ರಾಂತಿಗೆ ಆಹ್ವಾನ
(ಬೆಂಗಳೂರು ವಿಶ್ವವಿದ್ಯಾನಿಲಯದ ಹತ್ತನೆಯ ಘಟಿಕೋತ್ಸವದಲ್ಲಿ ೮-೧೨-೧೯೭೪ ರಂದು ಮಾಡಿದ ಭಾಷಣ.)
ಸನ್ಮಾನ್ಯರಾದ ಸರ್ವಶ್ರೀ ಕುಲಾಧಿಪತಿಗಳಲ್ಲಿ, ಕುಲಪತಿಗಳಲ್ಲಿ, ಸೆನೆಟ್ ಸದಸ್ಯರಲ್ಲಿ ಮತ್ತು ಸ್ನಾತಕಮಿತ್ರ ಮಹಾಶಯರಲ್ಲಿ ವಿಜ್ಞಾಪನೆ.
ಈ ವರ್ಷದ ಘಟಿಕೋತ್ಸವ ಭಾಷಣ ಮಾಡಲು ನನ್ನನ್ನಿಲ್ಲಿಗೆ ಎಳೆತಂದಿದ್ದಾರೆ ಡಾ.ನರಸಿಂಹಯ್ಯನವರು. ಸುಮಾರು ಒಂದೂವರೆ ತಿಂಗಳ ಹಿಂದೆ ಒಂದು ಹಗಲು ಯಾವ ಪೂರ್ವಸೂಚನೆಯನ್ನೂ ನೀಡದೆ ಅತ್ಯಂತ ಅನಿರೀಕ್ಷಿತವಾಗಿ, ಏಕಾಕಿಯಾಗಿ, ಏಕಾಏಕಿ, ನಮ್ಮ ಮನೆಗೆ ಬಂದು ನಿರಾಯುಧನಾಗಿದ್ದ ನನ್ನ ಮೇಲೆ ಅಕ್ರಮಣ ನಡೆಸಿದರು. ನಾನು ಕೈಮುಗಿದು ಪರಿಪರಿಯಲ್ಲಿ ಬೇಡಿಕೊಂಡರೂ ಬಿಡಲಿಲ್ಲ. ಈ ಕೆಲಸಕ್ಕೆ ನನ್ನ ಅನರ್ಹತೆಯನ್ನು ವಿಶದಪಡಿಸಿದರೂ ಪ್ರಯೋಜನವಾಗಲಿಲ್ಲ. ಅವರ ನಿರಾಡಂಬರ ನಿಷ್ಪೃಹ ನಿರಹಂಕಾರದ ವ್ಯಕ್ತಿತ್ವದ ಓಜಿಗೆ ನಾನು ಶರಣಾಗಲೇಬೇಕಾಯಿತು. ಒಪ್ಪಿಕೊಂಡು ಇಂದು ಇಲ್ಲಿಗೆ ಬಂದು ನಿಮ್ಮ ಮುಂದೆ ಉಪದೇಶಭಾಷಣ ಮಾಡಲು ನಿಂತಿದ್ದೇನೆ.
ಜಗತ್ತು, ಅದರಲ್ಲಿಯೂ ನಮ್ಮಗೆ ಪ್ರಕೃತವಾಗಿರುವ ಭಾರತೀಯ ಜಗತ್ತು, ಭಯಂಕರ ಸಮಸ್ಯೆಗಳ ಜಟಿಲ ಕಂಟಕಮಯ ಸಂಕಟದಲ್ಲಿ ಸಿಕ್ಕಿ ದಿಕ್ಕುಗಾಣದೆ ದಾರಿತಪ್ಪಿ ತೋಳಲುತ್ತಿರುವಾಗ ಯಾರು ತಾನೆ ಏನು ಉಪದೇಶ ಭಾಷಣಮಾಡಿ ನಿಮ್ಮ ಮನಸ್ಸನ್ನು ಅಶಾವಾದದತ್ತ ಕರೆದೊಯ್ಯಲು ಸಾಧ್ಯ? "ಸರ್ವನಾಶದಲ್ಲಿಯೂ ಆಶಾವಾದಿ" ಎಂದು ತನ್ನನ್ನು ತಾನು ಬಣ್ಣಿಸಿಕೊಳ್ಳುತ್ತಿದ್ದ ಕವಿಯ ಚೇತನವೂ ಕಿಬ್ಬಿಯಂಚಿನಲ್ಲಿ ತತ್ತರಿಸುತ್ತಾ ನಿಂತಂತಿದೆ. ನಾನಿಂದು ನಿಮ್ಮ ಹೆಗಲಿನ ಹೊರೆಯನ್ನು ಇಳಿಸಲು ಬಂದಿಲ್ಲ; ಇನ್ನಷ್ಟು ಹೊರೆಗಳನ್ನು ಹೊರಿಸಲು ಬಂದಿದ್ದೇನೆ. ನೀವಿನ್ನೂ ಜೀವನದ ಉತ್ಸಾಹದಲ್ಲಿರುವ ಯುವಜನರು; ಎಂತಹ ಕಷ್ಟಗಳು ಎದುರಾದರೂ ಧೈರ್‍ಯದಿಂದ ಇದಿರಿಸುವ ಸಾಹಸ ಚೇತನರಾಗಿದ್ದೀರಿ. ನಾವು ಎದೆಗೆಟ್ಟರೂ ನೀವು ಎದೆಗೆಡುವುದಿಲ್ಲ ಎಂಬ ಭರವಸೆ ನನಗಿದೆ.
ನನ್ನ ಉಪದೇಶ ಭಾಷದಿಂದ ಮಹತ್ಸಾಧನೆಯಾಗಿಬಿಡುತ್ತದೆ ಎಂಬ ನಂಬಿಕೆ ಏನೂ ನನಗಿಲ್ಲ. ಏಕೆಂದರೆ ಹಿಂದೆಯೂ ನಮ್ಮ ರಾಷ್ಟ್ರದ ನೂರಾರು ವಿಶ್ವವಿದ್ಯಾನಿಲಯಗಳಲ್ಲಿ ಇಂತಹ ಘಟಿಕೋತ್ಸವ ಭಾಷಣಗಳು ಸಾವಿರಾರು ನಡೆದಿವೆ. ಆ ಭಾಷಣಗಳನ್ನು ಕೇಳಿ "ಸತ್ಯಂ ವದ-ಧರ್‍ಮಂ ಚರ" ಮೊದಲಾದ ನೀತಿ ಸೂಕ್ತಿಗಳನ್ನು ಸಾಮೂಹಿಕವಾಗಿ ಯಾಂತ್ರಿಕವಾಗಿ ಉಚ್ಚರಿಸಿ ಪ್ರತಿಜ್ಞೆಮಾಡಿದ್ದ ನಿಮ್ಮಂತಹ ಲಕ್ಷಾಂತರ ಸ್ನಾತಕರೆ ಇಂದು ರಾಜಕೀಯ ರಂಗದಲ್ಲಿ, ಆರ್ಥಿಕ ರಂಗದಲ್ಲಿ, ಅಧಿಕಾರ ರಂಗದಲ್ಲಿ, ಶಿಕ್ಷಣ ರಂಗದಲ್ಲಿ ನಿರ್ಲಜ್ಜೆಯಿಂದ ಪಾಪಮಯ ಭ್ರಷ್ಟಾಚಾರಗಳಲ್ಲಿ ತೊಡಗಿ ದೇಶವನ್ನು ದುರ್ಗತಿಗೆ ಒಯ್ಯುತ್ತಿರುವುದನ್ನು ನೆನೆದರೆ ಬದುಕು ಬೆಬ್ಬಳಿಸಿ ಹದುಗುವಂತಾಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮಾ ಗಾಂಧೀಜಿಯ ಆತ್ಮಶ್ರೀಯ ತೇಜಸ್ಸಿಗೊಳಗಾಗಿ ಸ್ವಾರ್ಥತ್ಯಾಗದ ಮತ್ತು ಸರಳ ಜೀವನದ ಧ್ಯೇಯಜ್ಯೋತಿಯಿಂದ ದೀಪ್ತವಾಗಿ ಇಷೀಕಾಸ್ತ್ರಗಳಾಗಿದ್ದ ಜೀವರುಗಳೆಲ್ಲ ಇಂದು ಮತ್ತೆ ತಮ್ಮ ನಿಜ ಸ್ವರೂಪದ ಹುಲ್ಲುಕಡ್ಡಿಗಳಾಗಿವೆ. ಎಲ್ಲರೂ ಹಾಗಾಗಿಲ್ಲ, ನಿಜ. ಗಾಂಧೀಜಿಯ ಅನುಯಾಯಿಗಳಾಗಿದ್ದ ವಿನೋಬಾಜಿ, ಜಯಪ್ರಕಾಶ ನಾರಾಯಣರಂತಹ ಕೆಲವರಾದರೂ ಆ ಧ್ಯೇಯಜ್ಯೋತಿಯನ್ನು ಬೆಳಗುತ್ತಾ ನಾಡನ್ನು ಎಚ್ಚರಿಸುವ ಮತ್ತು ಮುನ್ನಡೆಸುವ ಕ್ಲಿಷ್ಟಕಾರ್‍ಯದಲ್ಲಿ ತೊಡಗಿದ್ದಾರೆ. ಆದರೆ ಅಲ್ಪ ಸಂಖ್ಯಾತರಾಗಿರುವ ಆ ಗುಂಪಿನವರು ರಾಜಕೀಯ ರಂಗದಲ್ಲಿ ಅಧಿಕಾರದಲ್ಲಿರುವ ಬಹುಸಂಖ್ಯಾತರೊಡನೆ ಹೋರಾಡಬೇಕಾಗಿ ಬಂದಿರುವ ದುರಂತ ದುಃಸ್ಥಿತಿಯೊದಗಿದೆ, ನಮ್ಮ ನಾಡಿಗೆ.
ಇಂತಹ ಪರಿಸ್ಥಿತಿ ಇರುವ ಬದುಕಿನ ಕಣಕ್ಕೆ ನೀವು ಇಂದು ನಿಮ್ಮ ವಿದ್ಯಾರ್ಥಿದಶೆಯಿಂದ ಉತ್ತೀರ್ಣರಾಗಿ ಪ್ರವೇಶಿಸುತ್ತಿದ್ದೀರಿ. ಎಂತಹ ಭಯಂಕರ ಹೋರಾಟ ಕಾದಿದೆಯೊ ನಿಮಗೆ ಆ ಕಾಲಪುರುಷನೆ ಬಲ್ಲ!
ನಮ್ಮ ಸ್ವಾತಂತ್ರ್ಯ ಸಂಪಾದನೆಗೆ ನಮ್ಮ ರಾಷ್ಟ್ರತನನ್ನೇನೊ ಉಪಯೋಗಿಸಿ ಕೊಂಡೆವು, ಆತ ಬೋಧಿಸಿದ ಸ್ವದೇಶಿ, ಸತ್ಯಾಗ್ರಹ, ಅಹಿಂಸೆ, ಗ್ರಾಮ ಸ್ವರಾಜ್ಯ, ಸರಳಜೀವನ, ತ್ಯಾಗಬುದ್ಧಿ ಮೊದಲಾದ ಕೈದುಗಳನ್ನಾಂತು. ಆದರೆ ಸ್ವಾತಂತ್ರ್ಯ ಸಂಪಾದನೆ ಆದೊಡನೆಯೆ ಆತನನ್ನು ತೊಲಗಿಸಿದೆವು; ಆತನ ದೇಹಕ್ಕೆ ಗುಂಡಿಕ್ಕಿದವನೇನೊ ಒಬ್ಬನೆ; ಆದರೆ ತರುವಾಯ ಆತನ ಧ್ಯೇಯಕ್ಕೆ ಉರುಳಿಕ್ಕಿ ಕೊಂದವರು ಹಲವರು ಆತನ ಅನುಯಾಯಿಗಳೆ! ನೆಹರೂ ಅವರ ಮುಂದಾಳುತನದ ನೇತೃತ್ವದಲ್ಲಿ ನಾವು ಗಾಂಧೀಜಿಯ ತತ್ತ್ವಗಳನ್ನೆಲ್ಲ ಮೂಲೆಗೊತ್ತಿ, ನಮ್ಮ ರಾಷ್ಟ್ರವನ್ನು ಏಕಾಏಕಿ ಅಭಿವೃದ್ಧ ಶ್ರೀಮಂತ ಪಾಶ್ಚಾತ್ಯ ದೇಶಗಳ ಸರಿಸಮಕ್ಕೇರಿಸುವ ಹುಮ್ಮಸ್ಸಿನಲ್ಲಿ ಸಂಪೂರ್ಣವಾಗಿ ಅವರ ಅನುಕರಣೆಗೆ ದೀಕ್ಷಿತರಾದೆವು. ತರುವಾಯ ಸ್ವದೇಶದ ಮತ್ತು ವಿದೇಶದ ಕೆಲವು ರಾಜಕೀಯ ಮತ್ತು ಆರ್ಥಿಕಪ್ರಾಜ್ಞರು ಕೊಟ್ಟ ಎಚ್ಚರಿಕೆಯನ್ನೂ ನಾವು ಲೆಕ್ಕಿಸಲಿಲ್ಲ; ಪ್ರತಿಗಾಮೀ ಸೂಚನೆಗಳೆಂದೂ ಅವನ್ನು ತಿರಸ್ಕರಿಸಿದೆವು. ಆದರೂ ಗಾಂಧೀಜಿಯನ್ನು ಕೈಬಿಟ್ಟೆವು ಎಂದಾಗಬಾರದೆಂದು ಅವರ ಧ್ಯೇಯಗಳನ್ನು ಮ್ಯೂಸಿಯಂಗಳಲ್ಲಿ ಪ್ರದರ್ಶನಕ್ಕಿಟ್ಟೆವು: ಅಂದರೆ ಆ ಧ್ಯೇಯಗಳ ಜೀವ ತೆಗೆದು, ಜೀವವಿದ್ದರೆ ಅವುಗಳಿಂದ ತೊಂದರೆಯಾಗಬಹುದೆಂಬ ಮುಂದಾಲೋಚನೆಯಿಂದ ಅವುಗಳನ್ನು ಕೊಂದು, ಚರ್ಮ ಸುಲಿದು, ಹದಹಾಕಿ, ಪ್ರದರ್ಶನ ಮಂದಿರಗಳನ್ನು ಕಟ್ಟಿಸಿಟ್ಟೆವು. ಅವುಗಳ ಪೂಜೆಗೂ ಏರ್ಪಾಟುಮಾಡಿ, ಅವರ ಭಕ್ತರನ್ನು ಸಮಾಧಾನಪಡಿಸಿ, ಮೂಲೆಗೆ ತಳ್ಳಿ, ಮತ್ತೆ ನಮ್ಮ ಪಾಶ್ಚಾತ್ಯರ ಅನುಕರಣೆಯ ಪಾಂಚವಾರ್ಷಿಕ ಯೋಜನೆಗಳ ಯಾಗಕ್ಕೆ ಶುರುಮಾಡಿದೆವು.
ಪರಕೀಯರ ಶೋಷಣೆಯಿಂದ ನಮ್ಮ ದೇಶ ಎಂತಹ ಬಡತನಕ್ಕೆ ಇಳಿದಿತ್ತು ಎಂದರೆ ಯಂತ್ರನಾಗರಿಕತೆಯಲ್ಲಿ ತುಂಬ ಮುಂದುವರಿದ ದೇಶಗಳಂತೆ ಮಹಾ ಮಹಾ ಕಾರ್ಖಾನೆಗಳ ಮತ್ತು ಕೈಗಾರಿಕೆಗಳ ಭಾರವನ್ನು ಹೊರುವ ತ್ರಾಣವೆ ಅದಕ್ಕಿರಲಿಲ್ಲ. ಆದರೂ ಅದರ ಹೆಗಲಮೇಲೆ ಅದನ್ನೆಲ್ಲ ಹೇರಿದೆವು, ಕೋಟ್ಯಾಂತರ ಧನದ ಸಾಲವೆತ್ತಿ. ನಮಗೆ ಆಗ ತುರುತ್ತಾಗಿ ಬೇಕಾಗಿದ್ದುದು ಅನ್ನ ನೀರು ಬಟ್ಟೆ ಗುಡಿಸಲು. ಆದರೆ ನಾವು ಮೋಟಾರು ಕಾರುಗಳನ್ನು ತಯಾರಿಸುವ ಏರ್ಪಾಡಿಗೆ ಬೆಂಬಲ ಕೊಟ್ಟೆವು. ನಾವೂ ಉಪಗ್ರಹಗಳನ್ನು ಹಾರಿಸಬೇಕೆಂದು ಹಠತೊಟ್ಟೆವು. ನಾವೂ ರಿಯಾಕ್ಟರುಗಳನ್ನು ಸ್ಥಾಪಿಸಿದೆವು. ಕೊನೆಗೆ ಆಟಂ ಸಾಧನವನ್ನೂ ಸಿಡಿಸಿದೆವು. ಹೀಗೆ ಅನೇಕ ರೀತಿಯ ಭೋಗದ ಮತ್ತು ಷೋಕಿಯ ವಸ್ತುಗಳ ತಯಾರಿಕೆಗೆ ಬಡರೈತರ ತೆರಿಗೆಯ ಧನವನ್ನು ವ್ಯಯಮಾಡಿದೆವು, ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಭೋಗಜೀವನ ನಡೆಸುವ ಶ್ರೀಮಂತರ ಸುಖಕ್ಕಾಗಿ. ಹಳ್ಳಿಗಳನ್ನೂ ರೈತವರ್ಗವನ್ನೂ ಮರೆತುಬಿಟ್ಟೆವು. ಅಥವಾ ಮರೆತೇಬಿಟ್ಟೆವು ಎಂಬ ದೂರಿನಿಂದ ಪಾರಾಗುವುದಕ್ಕಾಗಿಯೂ ಮತ್ತು ಅವರು ಸಂಪೂರ್ಣವಾಗಿ ನಿರ್ಜೀವವಾದರೆ ನಮಗಾಗಿ ದುಡಿಯುವವರು ಯಾರೂ ಇಲ್ಲದಂತೆ ಆಗಬಾರದು ಎಂಬುವುದಕ್ಕಾಗಿಯೂ ಜೀವವಾಡುವಷ್ಟರಮಟ್ಟಿಗೆ ಅವರ ಭಿಕ್ಷಾಪಾತ್ರೆಗೂ ಕಾಸು ಎಸೆದದ್ದುಂಟು. ನಗರಗಳಲ್ಲಿ ಮಹಾ ಪರ್ವತೋಪಮ ಕಟ್ಟಡಗಳನ್ನು ಕಟ್ಟುವುದಕ್ಕೆ ನಮಗೆ ದುಡ್ಡು ಇತ್ತು. ಆದರೆ ಹಳ್ಳಿಗಳಲ್ಲಿ ಬಾವಿ ತೋಡಲು ಹಣವಿರಲಿಲ್ಲ. ಯಾವುದಕ್ಕೆ ಮೊದಲ ಗಮನ ಕೊಡಬೇಕಾಗಿತ್ತೊ ಅದಕ್ಕೆ ಕೊಡಲಿಲ್ಲ. ಬಡರೈತನನ್ನು ಹಿಂಡಿ ತೆಗೆದ ತೆರಿಗೆ ದವಸ ಧಾನ್ಯಗಳು ನಗರಗಳ ಶ್ರೀಮಂತ ವರ್ಗಕ್ಕೂ ಅಧಿಕಾರ ವರ್ಗದ ಧಾಳಾಧೂಳಿಗೂ ವ್ಯಯವಾಯಿತು. ರಾಷ್ಟ್ರಪತಿಯಿಂದ ಹಿಡಿದು ರಾಯಭಾರಿ, ಪ್ರಧಾನಿ, ಮಂತ್ರಿ, ಲೋಕಸಭಾ ಸದಸ್ಯ, ಮೇಲ್ಮನೆ, ಕೆಳಮನೆ, ಐಎಎಸ್, ಐಪಿಎಸ್ ಇತ್ಯಾದಿ ಅಧಿಕಾರಿಗಳವರೆಗೆ ಸಮೃದ್ಧ ಸಂಬಳ ಗಿಂಬಳಗಳ ಹಂಚಿಕೆ ನಡೆಯಿತು. ದೊಡ್ಡ ದೊಡ್ಡ ವಿದ್ವತ್ಪೂರ್ಣವಾದ ಹೆಸರು ಹೊತ್ತ ನಕಲಿ ಸಂಸ್ಥೆಗಳೂ ಈ ಲೂಟಿಯಲ್ಲಿ ಭಾಗಿಯಾಗುವುದನ್ನು ಮರೆಯಲಿಲ್ಲ. ಗ್ರಾಮಸ್ವರಾಜ್ಯ ಪರಿಕಲ್ಪನೆಯ ವಿಕೇಂದ್ರಿಕರಣದ ಸ್ಥಾನದಲ್ಲಿ ಸಂಪೂರ್ಣ ಕೇಂದ್ರೀಕರಣ ಸ್ಥಾಪನೆಯಾಗಿ, ದೆಹಲಿಗೆ ಹೋಗಿ ಬರುವುದೆ ಕರ್‍ತವ್ಯಕರ್‍ಮದ ಪ್ರಧಾನಭಾಗವಾಯಿತು. ಆಡಳಿತ ಮತ್ತು ನ್ಯಾಯ ವಿತರಣೆಗಳು ಬ್ರಿಟಿಷರ ಕಾಲದಲ್ಲಿದ್ದುದಕ್ಕಿಂತಲೂ ಜಟಿಲವಾಗಿ ಅನಕ್ಷರಸ್ಥ ಹಳ್ಳಿಗರು ಅಧಿಕಾರದ ಗಾಣಕ್ಕೆ ಸಿಕ್ಕಿ ನರಳುವಂತಾಯಿತು. ನಮ್ಮ ಹೊಟ್ಟೆಗೆ ಬೇಕಾದ ಕೆಲವು ಅತ್ಯಾವಶ್ಯಕ ವಸ್ತುಗಳನ್ನು ಮಾರಿ ದುಡಿದ ವಿದೇಶಿ ವಿನಿಮಯದಿಂದ ವರ್ಷವರ್ಷವೂ ೧೪೦೦ ಕೋಟಿ ರೂಪಾಯಿ ಪೆಟ್ರೋಲು ಎಣ್ಣೆ ತರಿಸಿ ಸುಡುತ್ತೇವಂತೆ! ಹೀಗೆ ಹೇಳುತ್ತಾ ಹೋದರೆ ಕೊನೆಮುಟ್ಟುವುದೆಲ್ಲಿ ? ಈ ವಿಚಾರದಲ್ಲಿ ನನಗಿಂತಲೂ ಆ ಆ ಕ್ಷೇತ್ರಗಳಲ್ಲಿ ಪರಿಣತರಾದವರಿಂದ ಈಗ ಒದಗಿರುವ ದುಃಸ್ಥಿತಿಯ ಕಥೆಯ ವಿವರಗಳನ್ನು ನೀವು ಕೇಳಿದರೆ ಮೂರ್ಛೆ ಹೋಗುತ್ತೀರೊ ಏನೋ?
ಇಂತಹ ಪರಿಸ್ಥಿತಿಯ ಪಿತ್ರಾರ್ಜಿತ ಆಸ್ತಿಗೆ ನೀವು ಹಕ್ಕುದಾರರಾಗಿ ಹೋಗುತ್ತಿದ್ದೀರಿ. ಏಕೆ ಹೀಗಾಯಿತು? ಸಮಾಜವಾದವೆ ನಮ್ಮ ಗುರಿ ಎಂದು ಘೋಷಿಸಿದ್ದೆವು; ಪ್ರಜಾಸತ್ತೆಯೆ ನಮ್ಮ ವಿಧಾನಮಾರ್ಗ ಎಂದೂ ಸಾರಿಸಾರಿ ಪ್ರತಿಜ್ಞೆ ಮಾಡಿದ್ದೆವು. ಆದರೂ ಹೀಗಾಯಿತಲ್ಲ ಏಕೆ? ಇತರ ದೇಶಗಳು ಶತಮಾನಗಳ ವಿಕಾಸದಿಂದ ಸಾವಧಾನವಾಗಿ, ಆದರೂ ಸುದೃಢವಾಗಿ ಸಾಧಿಸಿದ್ದನ್ನು ನಾವು ತಕ್ಷಣವೆ ಸಾಧಿಸಲು ಹೊರಟಿದ್ದು ನಮಗೊದಗಿರುವ ಅಪಘಾತಕ್ಕೆ ಮೂಲಕಾರಣವಾಯಿತು. ನೂರಕ್ಕೆ ತೊಂಬತ್ತರಷ್ಟು ಅನಕ್ಷರರಿರುವ ದೇಶದಲ್ಲಿ ಅದೆಂತಹ ಪ್ರಜಾಸತ್ತೆ ಸಾಧ್ಯವಾದೀತು? ಅದರಲ್ಲಿಯೂ ನಮ್ಮ ದೇಶ, ಯಾವತ್ತೂ ಪ್ರಜಾಸತ್ತೆಯ ಗಾಳಿಯನ್ನೂ ಮೂಸಿ ನೋಡದಿದ್ದ ದೇಶ. ರಾಜರನ್ನು ಪ್ರತ್ಯಕ್ಷ ದೇವರೆಂದು ಪೂಜಿಸಿದ ದೇಶ; ಪುರೋಹಿತರನ್ನು ಭೂಸುರರೆಂದು ಆರಾಧಿಸಿದ ದೇಶ! ಮತಮೌಢ್ಯ ಎಂಬ ನಿತ್ಯರೋಗವು ಅದರ ನಾಡಿನಾಡಿಗಳಲ್ಲಿ ಮಾತ್ರವಲ್ಲದೆ ಎಲುಬಿನಲ್ಲಿಯೂ ಐದುಸಾವಿರ ವರ್ಷಗಳಿಂದ ಸರ್ವವ್ಯಾಪಿಯಾಗಿದ್ದು ವರ್ಗ ವರ್ಣ ಮತ ಜಾತಿ ಪಂಥ ಪಂಗಡ ಎಂಬ ನೂರಾರು ಭೇದಗಳಿಂದ ನರಳುತ್ತಿರುವ ದೇಶ! ಇಲ್ಲಿ "ಡೆಮಾಕ್ರಸಿ" (Democracy) ಬರಿಯ "ಮಾಕರಿ" (Mockery) ಆಗಿದೆ. ಅಮೇರಿಕಾದಂತಹ ಮುಂದುವರಿದ ದೇಶದಲ್ಲಿಯೆ ಅದರ ಮಹಾಧ್ಯಕ್ಷರ ಚುನಾವಣೆಯಲ್ಲಿ ಧನಸಂಪತ್ತಿಯೆ ನಿರ್ಣಾಯಕ ಶಕ್ತಿಯಾಗಿರುವುದನ್ನು ನಾವು ಕಾಣುತ್ತಿದ್ದೇವೆ. ಅಲ್ಲಿ ಹಿಂದೆ ಏಬ್ರಹಾಂ ಲಿಂಕನ್ ಅಂತಹ ಬಡವರೂ ನೀತಿಸಂಪನ್ನರಾಗಿದ್ದ ಪಕ್ಷದಲ್ಲಿ ಮಹಾಧ್ಯಕ್ಷತೆಗೆ ಏರುವ ಸನ್ನಿವೇಶವಿತ್ತು. ಈಗ ಕೋಟ್ಯಾಧೀಶ್ವರರಲ್ಲದವರಾರೂ ಚುನಾವಣೆಯನ್ನು ಗೆಲ್ಲುವುದಿರಲಿ, ಚುನಾವಣೆಗೆ ನಿಲ್ಲುವುದೂ ಅಸಾಧ್ಯ. ಇನ್ನು ನಮ್ಮ ದೇಶದಲ್ಲಿ ಆ ರೀತಿಯ ಚುನಾವಣಾ ಪದ್ದತಿಯಿಂದ ಏನೇನು ಅನಾಹುತವಾಗಬಹುದೊ ಅದೆಲ್ಲ ಆಗಿದೆ ಮತ್ತು ಆಗುತ್ತಲೂ ಇದೆ. ಜಾತಿ, ಮತ, ಹೆಂಡ, ದುಡ್ಡು ಇವೇ ಓಟರುಗಳು; ಓಟುಕೊಡುವ ಪ್ರಜೆಗಳು ಬರಿಯ ನಿಮಿತ್ತ ಮಾತ್ರ ಮೂಕ ವಾಹನಗಳಷ್ಟೆ! ನಾಲ್ಕಾರು ಜನ ಯಾತಕ್ಕೂ ಹೇಸದ ಖದೀಮರು ಸೇರಿ, ಯಾವ ಉಪಾಯದಿಂದಾದರೂ, ಕಾಳಸಂತೆಯ ಕಪ್ಪುಹಣವೊ, ಕಳ್ಳಸಾಗಾಣಿಕೆಯ ಹಳದಿ ಹಣವೊ, ಅಂತೂ ಹೆಚ್ಚು ಹಣ ಒಟ್ಟುಮಾಡಿದರಾಯ್ತು ನಮ್ಮ ಚುನಾವಣೆಗಳಲ್ಲಿ ಗೆಲ್ಲಬಹುದು. ಒಮ್ಮೆ ಗೆದ್ದು ಅಧಿಕಾರ ಸೂತ್ರವನ್ನು ಹಿಡಿದರಾಯ್ತು, ನಾಡಿನ ಸರ್ವ ಪ್ರಚಾರ ಮಾರ್ಗಗಳನ್ನೂ ಅಧಿಕಾರದ ಭಯದಿಂದಲೂ ದುಡ್ಡಿನ ಬಲದಿಂದಲೂ ವಶಪಡಿಸಿಕೊಂಡು ತಮ್ಮ ಸರ್ವಾಧಿಕಾರಕ್ಕೆ ವ್ಯಾಘಾತ ಒದಗದಂತೆ ನೋಡಿಕೊಳ್ಳಬಹುದು. ಒಂದುವೇಳೆ ಜನಶಕ್ತಿ ಎಚ್ಚತ್ತು ಪ್ರತಿಭಟಿಸಿದರೂ ಅದನ್ನು ವಿಫಲಗೊಳಿಸಲು ವಿಶೇಷಾಜ್ಞೆಗಳನ್ನೂ ಪೋಲೀಸ್ ಪಡೆಯನ್ನೂ ಕಡೆಗೆ ಸೈನ್ಯಬಲವನ್ನೂ ಪ್ರಯೋಗಿಸಬಹುದು.
ನಿಜವಾದ ಪ್ರಜಾಸತ್ತೆ ಎಂದರೆ ಅನಿರ್ಬಾಧಿತ ಇಚ್ಛಾ ಸ್ವಾತಂತ್ರ್ಯದಿಂದ ಪ್ರಜೆಗಳು ಆಯುವ ಪ್ರಾಮಾಣಿಕ ವ್ಯಕ್ತಿಗಳಿಂದ ಸರ್ವರ ಅಭ್ಯುದಯಕ್ಕಾಗಿ ನಡೆಯುವ ರಾಜ್ಯಭಾರ. ಆ ದೃಷ್ಟಿಯಿಂದ ನೋಡಿದರೆ ಈಗ ನಡೆಯುವ ಚುನಾವಣೆಗಳು ಪ್ರಜಾಸತ್ತಾತ್ಮಕ ಎಂದು ಹೇಳಲಾಗುತ್ತದೆಯೆ? Politics is the last resort of a scoundrel ಎಂದಿದ್ದನಂತೆ ಒಬ್ಬ ಪಾಶ್ಚಾತ್ಯ ಮನೀಷಿ. ನಮ್ಮ ಇಂದಿನ ರಾಜಕಾರಣರಂಗವನ್ನು ನೋಡಿದರೆ ಅವನು ತನ್ನ ಸೂಕ್ತಿಯನ್ನು ತಿದ್ದಿಕೊಳ್ಳುತ್ತಿದ್ದನು,-Politics is the first resort of a scoundrel ಎಂದು ಬದಲಾಯಿಸಿ! ಈಗ ನಮ್ಮ ರಾಜಕೀಯ ರಂಗ ಹೇಗಾಗಿದೆ ಎಂದರೆ ಪ್ರಾಮಾಣಿಕರೂ ಸಂಭಾವಿತರೂ ಸುಸಂಸ್ಕೃತರೂ ಯಾರೂ ಅದರ ಹತ್ತಿರ ಸುಳಿಯಲೂ ಅಂಜುತ್ತಾರೆ. ಚುನಾವಣೆಯ ರೀತಿಯನ್ನೆ ಬದಲಾಯಿಸದಿದ್ದರೆ ಮಾನಮರ್‍ಯಾದೆಯುಳ್ಳ ಯಾವ ಪ್ರಾಮಾಣಿಕ ಯೋಗ್ಯನೂ ಅದರಲ್ಲಿ ಪಾಲುಗೊಳ್ಳುವ ಸಂಭವವಿಲ್ಲ. ಹಣದ ಹೊಳೆಹರಿಸಿ ಚುನಾವಣೆಯಲ್ಲಿ ಗೆಲ್ಲುವ ಯಾವ ವ್ಯಕ್ತಿಯಾಗಲಿ ಯಾವ ಪಕ್ಷವಾಗಲಿ ಭ್ರಷ್ಟಾಚಾರಕ್ಕೆ ಬಲಿಯಾಗದೆ ಇರಲು ಸಾಧ್ಯವೆ ಇಲ್ಲ. ಆದ್ದರಿಂದ ಭ್ರಷ್ಟಾಚಾರವನ್ನು ನಿರ್ಮೂಲ ಮಾಡುವ ಮತ್ತು ನಿಜವಾದ ಪ್ರಜಾಸತ್ತೆಯನ್ನು ರಕ್ಷಿಸುವ ಇಚ್ಚೆ ನಿಮಗಿದ್ದರೆ ಇಂದಿನ ರೀತಿಯ ಧನಾಶ್ರಿತ ಚುನಾವಣೆಯ ಪದ್ದತಿಯನ್ನೆ ಬದಲಾಯಿಸಿ ಅದನ್ನು ಗುಣಾಶ್ರಿತವನ್ನಾಗಿ ಪರಿವರ್ತಿಸುವ ಕರ್‍ತವ್ಯ ನಿಮ್ಮ ಹೆಗಲಮೇಲೆ ಬೀಳುತ್ತದೆ. ಉಗ್ರ ಕ್ರಾಂತಿಯಿಂದಲಾದರೂ ನೀವು ಚುನಾವಣೆಯನ್ನು ಸಾತ್ತ್ವಿಕಮಾರ್ಗಕ್ಕೆ ತಿರುಗಿಸದಿದ್ದರೆ ಖದೀಮರೂ, ಚಾರಿತ್ರಹೀನರೂ ಪ್ರಜಾಸತ್ತೆಯ ಹುಸಿಹೆಸರಿನ ಹಿಂದೆ ಪ್ರಚ್ಛನ್ನಸರ್ವಾಧಿಕಾರ ನಡೆಸುತ್ತಾರೆ.
ನಮ್ಮ ಪ್ರಜಾಸತ್ತೆ ಕಲುಷಿತವಾಗಲು ಹಣ ಒಂದೆಯೆ ಕಾರಣವೆಂದು ತಿಳಿಯುವುದು ತಪ್ಪಾಗುತ್ತದೆ. ಅದಕ್ಕಿಂತಲೂ ಮಹತ್ತಾದ ಮತ್ತು ಮೂಲಭೂತವಾದ ಮತ್ತೊಂದು ಕಾರಣವೂ ಇದೆ, ನಮ್ಮ ಪುಣ್ಯಭೂಮಿ ಭಾರತದಲ್ಲಿ! ಅದು ಒಂದು ಅಮೂರ್‍ತ ವಸ್ತು, ಅದು ಭಾವರೂಪಿಯಾದುದರಿಂದ ಅತಿ ಸೂಕ್ಷ್ಮವಾಗಿ ಹೃದಯಪ್ರವೇಶಮಾಡಿ ನಮ್ಮನ್ನು ಆಕ್ರಮಿಸುತ್ತದೆ. ಮತ್ತು ನಮ್ಮಲ್ಲಿ ನಿಜವಾಗಿಯೂ ಇರುವ ಒಂದು ಅನಿರ್ವಚನೀಯ-ಅತ್ಯಂತ ಅಂತರತಮ-ಸತ್ಯಸ್ಯ ಸತ್ಯವಾದ ಸನಾತನ ತತ್ತ್ವಕ್ಕೆ (ಅದನ್ನು ಆಧ್ಯಾತ್ಮ ಎಂದು ಹೆಸರಿಸುತ್ತೇವೆ.) ಅದು ತನ್ನ ಬಾಂಧವ್ಯವನ್ನು ಘೋಷಿಸುತ್ತಾ ಬಂದಿರುವುದರಿಂದಲೂ ಮತ್ತು ಅದನ್ನೆ ತಾನು ಪೋಷಿಸುತ್ತಿರುವುದಾಗಿ ಹೇಳುತ್ತಲೂ ಇರುವುದರಿಂದಲೂ ಅದರ ಪ್ರಚ್ಛನ್ನ ವಂಚನೆಯ ಮುಷ್ಟಿಯಿಂದ ತಪ್ಪಿಸಿಕೊಳ್ಳುವುದೂ ಕಷ್ಟಸಾಧ್ಯವಾಗಿದೆ. ಅದರ ಹೆಸರು 'ಮತ'! ಈ ಮತಭ್ರಾಂತಿಯಿಂದ ಲೋಕಕ್ಕೆ ಆಗಿರುವಷ್ಟು ಹಾನಿ ಮತ್ತಾವುದರಿಂದಲೂ ಆಗಿಲ್ಲ ಎಂದು ತೋರುತ್ತದೆ. ಇನ್ನು ಮುಂದೆಯಾದರೂ ನೀವು ಆಧ್ಯಾತ್ಮವನ್ನು ಉಳಿಸಿಕೊಂಡು ಮತ ಮತ್ತು ಅದರಿಂದ ಜನ್ಯವಾದ ಮತಭ್ರಾಂತಿ ಮತ್ತು ಮತಮೌಢ್ಯಗಳನ್ನು ನಿರಾಕರಿಸದಿದ್ದರೆ ನಿಜವಾದ ಪ್ರಜಾಸತ್ತೆಯಾಗಲಿ ಸಮಾಜವಾದವಾಗಲಿ ಸಮಾನತಾಭಾವ ಸ್ಥಾಪನೆಯಾಗಲಿ ಎಂದೆಂದಿಗೂ ಸಾಧ್ಯವಾಗುವುದಿಲ್ಲ.
ಐಕ್ಯಕ್ಕೂ ಮೈತ್ರಿಗೂ ಸಾಧನವಾಗುವ ಆ ಚಿರಂತನ ಆಧ್ಯಾತ್ಮವನ್ನು ಈ ಅಜ್ಞಾನಜನ್ಯವಾದ ಮತಭಾವನೆ ಆಕ್ರಮಿಸಿ ವರ್ಣ ಜಾತಿ ಪಂಥ ಕೋಮು ಪಂಗಡಗಳೆಂಬ ನೂರಾರು ಭೇದಭಾವನೆಗಳ ಬಿರುಕು ಒಡಕುಗಳಿಗೆ ಸಮಾಜವು ಸಿಕ್ಕಿ ಛಿದ್ರಛಿದ್ರವಾಗುವಂತೆ ಮಾಡಿದೆ. ಈ ಭೇದಭಾವಗಳೂ ಛಿದ್ರಗಳೂ ಎಲ್ಲಿಯವರೆಗೆ ಇರುತ್ತವೆಯೊ ಅಲ್ಲಿಯವರೆಗೆ ನಿಜವಾದ ಸಮಾನತಾಭಾವನೆಯ ಪ್ರಜಾಸತ್ತೆ ಬರಿಯ ಮರುಮರೀಚಿಕೆಯ ಭ್ರಾಂತಿಜಲವಾಗುತ್ತದೆ. ಆದ್ದರಿಂದ ಸಮಾಜವಾದದ ಪ್ರಜಾಸತ್ತೆ ನಿಮ್ಮ ಗುರಿಯಾಗಿದ್ದರೆ ಮತಭಾವನೆಯ ಶನಿಸಂತಾನವಾದ ಜಾತಿಪದ್ದತಿಯ ಸಂಪೂರ್ಣ ವಿನಾಶಕ್ಕೆ ನೀವು ಕಂಕಣ ಕಟ್ಟಿಕೊಂಡು ಹೋರಾಡಬೇಕು.
ಈ ಬಿರುಕು ಒಡಕುಗಳಿಗೆ ಮತ್ತು ಭೇದಭಾವನೆಗಳಿಗೆ ಮೂಲಕಾರಣ ಎಲ್ಲಿದೆ ಎಂಬುದನ್ನು ಹುಡುಕಿ, ನೀವು ಅದರ ಬೇರಿಗೆ ಬೆಂಕಿ ಹೊತ್ತಿಸಿ ಸಮಾನತೆಯನ್ನು ಸಾಧಿಸಬೇಕಾಗಿದೆ. ಮೊದಲು ನಿಮ್ಮ ನಿಮ್ಮ ಹೃದಯಗಳನ್ನೆ ಶೋಧಿಸಿಕೊಳ್ಳಬೇಕು. ಶತಮಾನಗಳ ಬೋಧನೆ ಮತ್ತು ನಂಬಿಕೆಗಳ ಫಲವಾಗಿ ನಿಮ್ಮ ವಿಚಾರ ಶಕ್ತಿಯೆ ಕುಂಠಿತವಾಗಿ ಹೋಗಿದೆ. ವಿಜ್ಞಾನ ಸಂಪನ್ನವಾದ ಪಾಶ್ಚಾತ್ಯ ನಾಗರಿಕತೆ ನಮ್ಮನ್ನು ಇನ್ನೂರು ವರ್ಷ ಆಳಿದರೂ ಅದರ ವಿಜ್ಞಾನ ಸೃಷ್ಟಿಸಿದ ಯಂತ್ರನಾಗರಿಕತೆಯನ್ನು ಅನುಕರಿಸಿದೆವೆ ಹೊರತು ಅದರ ವೈಜ್ಞಾನಿಕದೃಷ್ಟಿ ನಮ್ಮದಾಗಲಿಲ್ಲ; ಮತ್ತು ಆ ವೈಜ್ಞಾನಿಕ ದೃಷ್ಟಿಗೂ ತಾಯಿಬೇರಾದ ವೈಚಾರಿಕತೆಯನ್ನೂ ನಾವು ಮೈಗೂಡಿಸಿಕೊಳ್ಳಲಿಲ್ಲ. ಇನ್ನು ಮುಂದಾದರೂ ನಾವು ವೈಜ್ಞಾನಿಕ ದೃಷ್ಟಿಯ ಮತ್ತು ವೈಚಾರಿಕ ಬುದ್ಧಿಯ ನೆರವಿನಿಂದ ನಮ್ಮ ನಾಡಿನ ರಾಜಕೀಯ, ಸಾಮಾಜಿಕ ಮತ್ತು ಮತಧಾರ್‍ಮಿಕ ರಂಗಗಳನ್ನು ಪರಿಶೋಧಿಸದಿದ್ದರೆ ನಮಗೆ ಕೇಡು ತಪ್ಪದು.
ನಾಲ್ವತ್ತು ವರ್ಷಗಳ ಪೂರ್ವದಲ್ಲಿಯೆ ನಾನು ಹಾಡಿದ ಒಂದು ಕವನದ ಕಡೆಗೆ ನಿಮ್ಮ ಗಮನ ಸೆಳೆಯಲು ಬಯಸುತ್ತೇನೆ. ಅದು ನಿಮ್ಮ ಮುಂದಣ ಮಾರ್ಗದರ್ಶಕ ಮಂತ್ರದೀಪವಾಗಿ ನಿಮಗೆ ದಾರಿತೋರಿ ನಡೆಸಲಿ ಎಂದು ಹಾರೈಸುತ್ತೇನೆ:
ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ,
ಬಡತನವ ಬುಡಮುಟ್ಟಿ ಕೀಳಬನ್ನಿ.
ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ,
ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ.
ಓ, ಬನ್ನಿ, ಸೋದರರೆ, ಬೇಗ ಬನ್ನಿ!

ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ;
ಮತಿಯಿಂದ ದುಡಿಯಿರೈ ಲೋಕಹಿತಕೆ.
ಆ ಮತದ ಈ ಮತದ ಹಳೆಮತದ ಸಹವಾಸ
ಸಾಕಿನ್ನು ಸೇರಿರೈ ಮನುಜಮತಕೆ:
ಓ, ಬನ್ನಿ, ಸೋದರರೆ, ವಿಶ್ವಪಥಕೆ!

ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ-ಈ ಪದಗಳು ಮಂತ್ರಗಳಾಗಿ ನಿಮ್ಮನ್ನು ಜಾತಿಮತಗಳಿಂದಲೂ ಪಾರುಮಾಡಿ ನಿಮ್ಮಿಂದ ನಿಜವಾದ ಪ್ರಜಾಸತ್ತೆ ಮತ್ತು ಸಮಾಜವಾದ ಸ್ಥಾಪನೆಯಾಗಲಿ ಎಂದು ಹಾರೈಸುತ್ತೇನೆ.
ನಮಗೆ ಬೇಕಾಗಿರುವ ಶಿಕ್ಷಣದ ಸ್ವರೂಪ, ರಾಷ್ಟ್ರೀಯ ಶಿಕ್ಷಣೋದ್ದೇಶ, ದೇಶಭಾಷಾ ಶಿಕ್ಷಣ ಮಾಧ್ಯಮ, ಅಧಿಕಾರ ಮತ್ತು ಆಡಳಿತದ ವಿಕೇಂದ್ರೀಕರಣ, ಗ್ರಾಮಸ್ವರಾಜ್ಯ, ನಿರುದ್ಯೋಗ, ಅಭಾವ ಪೀಡೆ, ಬೆಲೆಏರಿಕೆ ಇತ್ಯಾದಿ ಪ್ರಚಲಿತ ಬಿಸಿಬಿಸಿ ಸಮಸ್ಯೆಗಳಾವುವನ್ನೂ ನಾನು ಪ್ರಸ್ತಾಪಿಸಿಲ್ಲ. ಏಕೆಂದರೆ ಅವುಗಳಿಗಿರುವ ಕಾರಣಗಳೆಲ್ಲ ಜನ್ಯಅನಿಷ್ಟ ವರ್ಗಕ್ಕೆ ಸೇರುತ್ತವೆ. ಆ ಉಪಕಾರಣಗಳಿಗೆಲ್ಲ ಮುಖ್ಯ ಜನಕಕಾರಣಗಳೆಂದರೆ ನಾನು ಮೇಲೆ ಪ್ರಸ್ತಾಪಿಸಿರುವ ಆ ಎರಡು: ಮತಭಾವನೆ ಪ್ರಚೋದಿಸಿರುವ ಜಾತಿಭೇದ ಬುದ್ಧಿ, ಮತ್ತು ಚುನಾವಣೆ ಅನುಸರಿಸುತ್ತಿರುವ ಕುಟಿಲ ಕುನೀತಿ. ಆ ಎರಡು ಜನಕ ಅನಿಷ್ಟಗಳನ್ನೂ ನೀವು ತೊಲಗಿಸಿದರೆ ಉಳಿದ ಎಲ್ಲ ಜನ್ಯ ಅನಿಷ್ಟಗಳನ್ನೂ ಬಹುಬೇಗನೆ ತೊಲಗಿಸಲು ನೀವು ಖಂಡಿತವಾಗಿಯೂ ಸಮರ್ಥರಾಗುತ್ತೀರಿ.
ತನ್ನ ಕ್ಷೇತ್ರವಲಯಕ್ಕೆ 'ಜ್ಞಾನ ಭಾರತಿ' ಎಂದು ಹೆಸರಿಟ್ಟುಕೊಂಡಿರುವ ನಿಮ್ಮ ವಿಶ್ವವಿದ್ಯಾನಿಲಯ 'ಜ್ಞಾನಂ ವಿಜ್ಞಾನಸಹಿತಂ' ಎಂಬ ಗೀತಾಮಂತ್ರವನ್ನು ತನ್ನ ಧ್ಯೇಯೋಕ್ತಿಯನ್ನಾಗಿ ಸ್ವೀಕರಿಸಿದೆ. ಆ ಹೆಸರು ನಿಮ್ಮ ಬದುಕಿನ ಉಸಿರಾಗಿ, ಆ ಮಂತ್ರ ನಿಮ್ಮ ಆಲೋಚನೆಯ ತಂತ್ರವಾಗಿ, ಆ ಧ್ಯೇಯ ನಿಮ್ಮ ಬದುಕಿನಲ್ಲಿ ಯಥಾರ್ಥವಾಗಲಿ ಎಂದು ನಿಮಗೆಲ್ಲ ಶುಭಕೋರಿ ವಿರಮಿಸುತ್ತೇನೆ.
ನಿಮಗೆಲ್ಲರಿಗೂ ನಮಸ್ಕಾರ.

Friday, April 1, 2011

ಕುವೆಂಪು


ಸಾವಿರದ ಒಂಬೈನೂರ ನಾಲ್ಕು, ಡಿಸೆಂಬರ್, ಇಪ್ಪತ್ತೊ೦ಭತ್ತರಂದು ಕುಪ್ಪಳಿ ವೆಂಕಟಪ್ಪಗೌಡ (ವೆಂಕಟಯ್ಯಗೌಡ) ಪುಟ್ಟಪ್ಪ (ಕೆ. ವಿ. ಪುಟ್ಟಪ್ಪ - ಕುವೆಂಪು) ಜನಿಸಿದರು. ಅಂದರೆ, ಇಂದಿಗೆ (೨೯-೧೨-೨೦೦೦) ತೊಂಬತ್ತಾರು ವರ್ಷಗಳ ಹಿಂದೆ ಕ್ರೋಧಿನಾಮ ಸಂವತ್ಸರದ ಮಾರ್ಗಶೀರ್ಷ - ಬಹುಳ ಸಪ್ತಮೀ ಗುರುವಾರದ ಉತ್ತರಾ ನಕ್ಷತ್ರದಲ್ಲಿ. ಇದೇ ದಿನ ಶ್ರೀ ಮಹಾಮಾತೆ ಶಾರದಾದೇವಿಯವರ ಜನ್ಮತಿಥಿಯೂ ಆಗಿರುವುದು ಪುಟ್ಟಪ್ಪನವರಿಗೆ ಆನಂದದ ಮತ್ತು ಹೆಮ್ಮೆಯ ವಿಷಯ. ಅವರು ಭೂಸ್ಪರ್ಶ ಮಾಡಿದ್ದು ತಮ್ಮ ತಾಯಿಯ ತವರಾದ ಹಿರಿಕೊಡಿಗೆ ಮನೆಯಲ್ಲಿ. ಹಿರಿಕೊಡಿಗೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಒಂದು ಕುಗ್ರಾಮ. ಮಲೆನಾಡಿನ ಸಹ್ಯಾದ್ರಿಯ ಮಡಿಲಲ್ಲಿರುವ ಎಲ್ಲ ಹಳ್ಳಿಗಳಂತೆಯೆ ಹಿರಿಕೊಡಿಗೆಯೂ ಒಂದೇ ಮನೆಯ ಹಳ್ಳಿ. ಅನಂತರ ``ತವರು ಮನೆ ಹಿರಿಕೊಡಿಗೆಯಿಂದ ಗಂಡನ ಮನೆ ಕುಪ್ಪಳಿಗೆ ಚೊಚ್ಚಲು ತಾಯಿಯಾಗಿ ಸೀತಮ್ಮನವರು ತೊಟ್ಟಿಲ ಕೂಸನ್ನು ಕರೆತಂದು ಮನೆವುಗಿಸಿದಂದಿನಿಂದ '' ತಂದೆಯ ಮನೆ ಕುಪ್ಪಳಿ ಪುಟ್ಟಪ್ಪನವರ ``ಮನೆ''ಯಾಯಿತು.


ತೀರ್ಥಹಳ್ಳಿಯ ಕಳೆದು, ತಾಯಿ ತುಂಗೆಯ ದಾಟಿ ,
ಒಂಬತ್ತು ಮೈಲಿಗಳ ದೂರದಲಿ, ನಮ್ಮೂರು ಕುಪ್ಪಳಿ .
ಊರಲ್ಲ ನಮ್ಮ ಮನೆ. ನಮ್ಮ ಕಡೆ ಊರೆಂದರೊಂದೆ ಮನೆ.

ಕುಪ್ಪಳಿ ಮನೆ ತಮ್ಮ ತಾಯಿಯ ತವರು ಮನೆಗಿಂತ ನೆಮ್ಮದಿಯ ಬೀಡಾಗಿತ್ತು. ಕುಪ್ಪಳಿಯನ್ನು ದೊಡ್ಡಮನೆಯೆಂದೂ, ಕುಪ್ಪಳಿ ಮನೆಯವರನ್ನು ದೊಡ್ಡ ಮನೆತನದವರೆಂದೂ ಜನ ಗೌರವಿಸುತ್ತಿದ್ದರು. ಬತ್ತದ ಗದ್ದೆ, ಅಡಕೆ ತೋಟ, ಜಾನುವಾರು, ಆಳುಕಾಳು, ಪಟೇಲಿಕೆಯ ಅಧಿಕಾರ - ಹೀಗೆ ಎಲ್ಲ ವಿಧದಲ್ಲಿಯೂ ಕುಪ್ಪಳಿ ಮನೆ ಸಮೃದ್ಧವಾಗಿತ್ತು. ಕುಪ್ಪಳಿಯ ಮನೆಯ ಸುತ್ತಣ ಪರಿಸರವು ಅತ್ಯಂತ ಸಮೃದ್ಧ. ಈ ಪರಿಸರ ಕವಿಚೇತನಕ್ಕೆ, ಮಹಾಕವಿಯಾಗಲಿರುವ ಚೇತನಕ್ಕೆ, ಅದರಲ್ಲೂ ಅವರ ಬಾಲ್ಯದ ಬದುಕಿಗೆ ಉಸಿರನ್ನಿತ್ತು ಸಲಹಿದೆ.

ಕುಪ್ಪಳಿಯ ಮನೆಯ ಸುತ್ತಣ ಪರಿಸರವು ಅತ್ಯಂತ ಸಮೃದ್ಧ. ಈ ಪರಿಸರ ಕವಿಚೇತನಕ್ಕೆ, ಮಹಾಕವಿಯಾಗಲಿರುವ ಚೇತನಕ್ಕೆ, ಅದರಲ್ಲೂ ಅವರ ಬಾಲ್ಯದ ಬದುಕಿಗೆ ಉಸಿರನ್ನಿತ್ತು ಸಲಹಿದೆ.
ಕುಪ್ಪಳಿ ಪುಟ್ಟಕೋಟೆಯಂತಿರುವ ಹೆಮ್ಮನೆ. ದೊಡ್ಡ ಹೆಬ್ಬಾಗಿಲು, ದಪ್ಪವಾದ ಸುತ್ತುಗೋಡೆ, ನಾಜೋಕಿಗಿಂತ ಬಲದ ದೃಷ್ಟಿಯಲ್ಲಿ ಕಟ್ಟಿರುವ ಗೋಡೆಗಳು. ಏಕೆಂದರೆ ಕಾಡಿನಲ್ಲಿ, ಮಳೆಯಲ್ಲಿ, ಬಿರುಗಾಳಿಯಲ್ಲಿ, ಸಿಡಿಲು ಮಿಂಚುಗಳ ಆರ್ಭಟದಲ್ಲಿ ತಾಳಿ-ಬಾಳಬೇಕಾದರೆ ದಪ್ಪ ಗೋಡೆಗಳು ಅಗತ್ಯ.
ಕುಪ್ಪಳಿ ಮನೆ ಮಲೆನಾಡಿನ ವನಾಲಂಕೃತ ಗಿರಿಶ್ರೇಣಿಗಳ ತೊಡೆಯ ಮೇಲೆ ಕೂತಿದೆ. ಮನೆಯಿಂದ ಪೂರ್ವದಿಕ್ಕಿಗೆ ಹತ್ತುಮಾರು ಹೋಗುವುದರೊಳಗಾಗಿ ಬೆಟ್ಟವೇರಿ ಕಾಡಿನಲ್ಲಿ ತೂರಬೇಕು. ಕುಪ್ಪಳಿ ಮನೆಗೆ ಪೂರ್ವೋತ್ತರ ದಕ್ಷಿಣ ಭಾಗಗಳಲ್ಲಿ ಭೀಮಾಕಾರದ ಪರ್ವತ ಶ್ರೇಣಿಗಳು ದಿಗಂತವನ್ನು ನಡುಬಾನಿಗೆತ್ತಿ ನಿಂತಿವೆ. ಪಶ್ಚಿಮ ಭಾಗದಲ್ಲಿಯೂ ಬೆಟ್ಟಗಳಿವೆ; ಆದರೆ ಒಂದು ಮೈಲಿಯಷ್ಟು ದೂರ. ನಡುವೆಯೇನೋ ಬೇಕಾದಷ್ಟು ಕಾಡುಗಳಿವೆ. ಕುಪ್ಪಳಿ ಮನೆಗೂ ಪೂರ್ವಾದ್ರಿಗೂ ನಡುವೆ ಅಡಕೆ ತೋಟವಿದೆ. ಅದರ ಸೆರಗಿನಲ್ಲಿಯೆ ಕುಪ್ಪಳಿ ಮನೆಯ ಕೆರೆಯಿದೆ. ಕೆರೆ ಬೆಟ್ಟದ ಬುಡದಲ್ಲಿ ಅರಣ್ಯದ ಮಡಿಲಲ್ಲಿ ಮಲಗಿದೆ. ಹೆಮ್ಮರಗಳು, ಪೊದೆಗಳು, ಬಿದಿರು ಮೆಳೆಗಳು ಅದರ ನೀರಿನ ಮೇಲೆ ಚಾಚಿಕೊಂಡಿವೆ.

ಕುಪ್ಪಳಿ ಮನೆಯ ಉಪ್ಪರಿಗೆ ಪೂರ್ವದಿಕ್ಕಿಗೆ ತೆರೆದುಕೊಂಡಿದೆ. ಉಳಿದೆಲ್ಲ ದಿಕ್ಕಿಗೂ ಗೋಡೆ, ಕಿಟಕಿಗಳಿವೆ. ಅಲ್ಲಿ ಕುಳಿತು ನೋಡಿದರೆ ಎದುರಿಗೆ ಇಳಿಜಾರಾಗಿ ಮೇಲೆದ್ದಿರುವ ಅನಂತ ನಿಬಿಡಾರಣ್ಯ ಶ್ರೇಣಿಗಳು ಸುಂದರವಾಗಿ ರಂಜಿಸುವುವು. ಮನೆಯ ಮುಂದೆಯೆ, ಅಡಕೆ ತೋಟದಾಚೆಯ ಮೊದಲುಗೊಂಡು ನಡು ಆಕಾಶದವರೆಗೆಂಬಂತೆ ಗೋಡೆ ಹಾಕಿದಂತೆ ಕಡಿದಾಗಿ ವಿಜೃಂಭಿಸಿ ಮಹೋನ್ನತವಾಗಿ ಮೇಲೆದ್ದು, ನಿತ್ಯ ಶ್ಯಾಮಲ ಅರಣ್ಯಾಚ್ಛಾದಿತವಾಗಿರುವ ಮಲೆ ಮತ್ತು ಮನೆಯ ಹಿಂಬದಿಯಿಂದಲೆ ಪ್ರಾರಂಭವಾಗಿ ವಿರಳ ಮರಪೊದೆಗಳಿಂದ ಹಕ್ಕಲು ಹಕ್ಕಲಾಗಿ ಮೇಲೇರಿ ಏರಿ ಬಂಡೆ ಮಂಡೆಯಲ್ಲಿ ಕೊನೆಗೊಂಡಿರುವ ಹಿರಿಯ ಹಾಸುಗಳಲ್ಲಿನ ಕವಿಶೈಲ! - ಇವೆರಡೂ ಕವಿ ಹೃದಯದ ಅಕ್ಕಪಕ್ಕದಲ್ಲಿರುವ ಎರಡು ಶ್ವಾಸಕೋಶಗಳಂತೆ ಅವರ ಬಾಲ್ಯದ ರಸಜೀವನದ ಬದುಕಿಗೆ ಉಸಿರನ್ನಿತ್ತು ಪೊರೆದಿವೆ. ಮುಂದೆ ಮಹಾಕವಿಯಾಗಲಿರುವ ಒಂದು ಋಷಿ ಚೇತನದ ವಿಕಾಸನಕ್ಕೆ ವಿಧಿ ಅದಕ್ಕಿಂತಲೂ ಹೆಚ್ಚು ಅರ್ಹವೂ ಅನುಕೂಲವೂ ಆದ ಭಿತ್ತಿರಂಗವನ್ನು ಕೆತ್ತಲಾರದೆಂದೇ ತೋರುತ್ತದೆ. 
ಕುವೆಂಪು ಹಸ್ತಾಕ್ಷರ






ಡಾ ಎಚ್ ಎಸ್ ವೆಂಕಟೇಶ ಮೂರ್ತಿ (೨೩.೦೬.೧೯೪೪-೩೦.೦೫.೨೦೨೫) - ಒಂದು ನೆನಪು - ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

  "ಪ್ರೀತಿ ಕೊಟ್ಟ ರಾಧೆಗೆ...ಮಾತು ಕೊಟ್ಟ ಮಾಧವ..." "ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ..." "ಲೋಕದ ಕಣ್ಣಿಗೆ ರಾಧೆಯೂ ಕೂಡ ......