Friday, November 21, 2025

ಸಿಹಿಸುಳ್ಳು - ಮನದ ಮಾತನ್ನು ದಾಟಿಸಲೊಂದು ತೆಪ್ಪ - ರೋಹಿತ್ ಚಕ್ರತೀರ್ಥ

 


ಕೆ.ಎಸ್. ನರಸಿಂಹಸ್ವಾಮಿಯವರ "ಮೈಸೂರು ಮಲ್ಲಿಗೆ" ಕವನ ಸಂಕಲನದಲ್ಲಿ "ತೌರ ಸುಖದೊಳಗೆನ್ನ.." ಎಂಬೊಂದು ಕವಿತೆ ಇದೆ. ಇದನ್ನು ರತ್ನಮಾಲಾ ಪ್ರಕಾಶ್ ಹಾಡಿದ್ದಾರೆ. ಸಿ. ಅಶ್ವಥ್ ಈ ಕವಿತೆಗೆ ರಾಗ ಸಂಯೋಜಿಸಿದ್ದಾರೆ. ಅದೇಕೋ ಏನೋ, ಹಾಡಿನ ರಾಗ, ಧಾಟಿಗಳು ಈ ಕವಿತೆಯ ಅಂತಃಸತ್ತ್ವವನ್ನು ಕೊಂದುಬಿಟ್ಟಿವೆಯೇನೋ ಅನ್ನಿಸುತ್ತದೆ. ಯಾಕೆಂದರೆ ಇದೊಂದು ಹಾಸ್ಯಕವಿತೆ. ಇಲ್ಲಿನ ಹಾಸ್ಯವು ಸಮುದ್ರದ ತೆರೆಗಳ ಅಬ್ಬರದ ರೀತಿಯದಲ್ಲ; 'ಜೀವವಾಹಿನಿಯೊಂದು ಹರಿಯುತಿದೆ.." ಎಂಬಂಥ ಅಂತರ್ವಾಹಿನಿಯ ರೂಪದ್ದು. ಇದನ್ನು ಅತ್ಯಂತ ಲವಲವಿಕೆಯಿಂದ, ಕೀಟಲೆ ಮಾಡುವಂಥ ಧಾಟಿಯಲ್ಲಿ, ಪರಸ್ಪರ ಕಚಗುಳಿಯಿಟ್ಟು ನಕ್ಕುನಗಿಸುವಂಥ ರಾಗದಲ್ಲಿ ಹಾಡಬೇಕು. ಆದರೆ ಕ್ಯಾಸೆಟ್ಟಿನ ಹಾಡನ್ನು ಕೇಳಿದಾಗ ಯಾವುದೋ ಶೋಕಗೀತೆ ಹಾಡುತ್ತಿದ್ದಾರೆ ಎಂಬ ಭಾವನೆ ಬರುತ್ತದೆ. ಇರಲಿ, ಈ ಕವಿತೆಯಲ್ಲಿ ನಾನು ಹೇಳಹೊರಟಿರುವ ಸಂಗತಿಯನ್ನು ಈಗ ವಿವರಿಸುತ್ತೇನೆ.


ನರಸಿಂಹಸ್ವಾಮಿಯವರ ಈ ಕವಿತೆಯ ಪ್ರಾರಂಭವು ಅತ್ಯಂತ ಚೇತೋಹಾರಿಯಾಗಿದೆ. ಹೆಂಡತಿ ತವರಿಗೆ ಬಂದಿದ್ದಾಳೆ. ಬಹುಶಃ ಕನಿಷ್ಠ ಆರು ತಿಂಗಳಿAದ ಅಲ್ಲೇ ಇದ್ದಾಳೆ. ಅದಕ್ಕೆ ಸಾಕ್ಷಿ ಪದ್ಯದೊಳಗಿಂದಲೇ ಸಿಗುತ್ತದೆ - "ಐದು ತಿಂಗಳ ಕಂದ ನಗುತಲಿಹುದು"! ಅಂದರೆ ಸೀಮಂತದ ಬಳಿಕ ತೌರು ಸೇರಿಕೊಂಡವಳು ಇನ್ನೂ ಗಂಡನ ಮನೆಗೆ ಹೋಗಿಲ್ಲ. ಹೋಗಿಲ್ಲ ಮಾತ್ರವಲ್ಲ, ಕನಿಷ್ಠ ಇನ್ನೊಂದು ತಿಂಗಳು ಹೋಗುವ ಯೋಚನೆಯೂ ಆಕೆಗಿಲ್ಲ. ಯಾಕೆಂದರೆ ಕಾರಣ ಹೇಳುತ್ತಾಳೆ: "ತಾಯಡಿಗೆ ರುಚಿಯೆಂದು ನಾನಿಲ್ಲಿ ಕುಳಿತಿಲ್ಲ, ಇನ್ನು ತಂಗಿಯ ಮದುವೆ ತಿಂಗಳಿಹುದು"! ಕೇವಲ ಒಂದು ತಿಂಗಳಲ್ಲಿ ತಂಗಿಯ ಮದುವೆ ಆಗಿಬಿಡುತ್ತದೆ, ಹಾಗಿರುವಾಗ ನಾನು ತೌರನ್ನು ಬಿಟ್ಟು ಬರುವುದು ಹೇಗೆ - ಇದವಳ ಪ್ರಶ್ನೆ. ಆದರೆ ಈ ಸಂಗತಿಯನ್ನು ಹೇಳಿ ಗಂಡನ ಎದೆಯನ್ನು ಘಾಸಿಗೊಳಿಸುವ ಮೊದಲು ಅವಳೊಂದು ಭೂಮಿಕೆ ನಿರ್ಮಿಸುತ್ತಾಳೆ. ಹಗಲು ನಿಮ್ಮ ನೆನಪು ನನ್ನನ್ನು ಹಿಂಡುತ್ತದೆ, ರಾತ್ರಿಯ ಕನಸಿನಲ್ಲಂತೂ ನೀವೇ ನೀವು - ಎಂದು ಹೇಳಿ ಗಂಡನ ಹೃದಯವನ್ನು ತನ್ನ ವಶಕ್ಕೆ ತೆಗೆದುಕೊಂಡುಬಿಡುತ್ತಾಳೆ. ಇದರ ನಂತರ ಬರುವ ಸಾಲು ದಾಂಪತ್ಯದ ಮೇರು ವ್ಯಾಖ್ಯಾನ ಎನ್ನಬಹುದು. ಬೃಂದಾವನದ ಹಣೆಗೆ ಕುಂಕುಮವನ್ನು ಇಡುವಾಗ ಅವಳಿಗೆ ಕಾಣಿಸುವುದು ಶ್ರೀತುಳಸಿ, ಕೃಷ್ಣತುಳಸಿ. ಇದು ಲಕ್ಷ್ಮೀನಾರಾಯಣರ ಪ್ರತೀಕ; ಆದರ್ಶ ದಾಂಪತ್ಯದ ಸಂಕೇತ. ನೀಲಾಂಬರದಲ್ಲಿ ಚಂದಿರನು ಬೆಳಗುವಾಗ, ಅವನ ಪ್ರೀತಿಪಾತ್ರ ಪತ್ನಿಯಾದ ರೋಹಿಣಿಯೂ ಸನ್ನಿಧಿಯಲ್ಲಿ ಬೆಳಗುತ್ತಾಳೆ. ಎಂಥ ಸುಮಧುರ, ಸಮನೋಹರ ಕವಿಸಾಲು! ಇದನ್ನು ಓದುವ ಓದುಗನೇ ಬಿಸಿಗೆ ಕರಗಿದ ಬೆಣ್ಣೆಯಂತೆ ಕರಗಿಹೋಗುವಾಗ ಆ ಪತಿಯಾದರೂ ಕಲ್ಲುಗುಂಡಾಗಿ ಉಳಿದಾನೆ? ಹಾಗೆ ಅವನನ್ನು ಕರಗಿಸಿ ತನ್ನ ಹಿಡಿತಕ್ಕೆ ತೆಗೆದುಕೊಂಡ ಮೇಲೆ ಈ ಹೆಣ್ಣು ತನ್ನ ಸುಳ್ಳಿನ ಸಂಚಿ ಬಿಚ್ಚುತ್ತಾಳೆ. ಐದಾಗಿದೆ, ಇನ್ನೊಂದು ತಿಂಗಳು ಕಳೆದೇ ಬರುವೆನೆಂಬ ಸೂಚನೆ ಕೊಡುತ್ತಾಳೆ. ಆಗ ಗಂಡ "ಒಮ್ಮೆ ತಕ್ಷಣ ರೈಲು ಹತ್ತಿ ಬಂದುಹೋಗಿಬಿಡು" ಎನ್ನುತ್ತಾನೆ ಎಂಬುದೂ ಅವಳಿಗೆ ಗೊತ್ತು. ಆಗ ಹೇಳುತ್ತಾಳೆ: ತಕ್ಷಣ ಹೊರಟುಬರಲು ತಾನೇನೋ ಸಿದ್ಧ. ಆದರೆ ನಾಳೆ ಮಂಗಳವಾರ, ನಾಡಿದ್ದು ನವಮಿ, ಬರುವುದು ಹೇಗೆ? ಅಲ್ಲಿಗೆ ಮತ್ತೂ ಎರಡು ದಿನಗಳ ಮುಂದೂಡಿಕೆ ಆದಂತಾಯಿತು. ಈ ಸೂಚನೆ ಗಂಡನಿಗೆ ಸಿಕ್ಕಿ ಸಿಟ್ಟು ಬರುತ್ತದೆಂಬಷ್ಟರಲ್ಲಿ ಅವಳ ಮುಲಾಮು ತಯಾರಿದೆ: "ಆಮೇಲೆ ನಿಲ್ಲುವೆನೆ ನಾನು ಇಲ್ಲೆ?"


ಈ ಕವಿತೆಯಲ್ಲಿ ಬರುವ ಸಿಹಿಸುಳ್ಳಿಗೆ ಇನ್ನೊಬ್ಬರನ್ನು ಚುಚ್ಚುವ, ಅವರಿಗೆ ಕೇಡು ಬಯಸುವ ದುರುದ್ದೇಶಗಳಿಲ್ಲ. ಆದರೆ ಒಂದು ಸಂದರ್ಭವನ್ನು ಚಾಣಾಕ್ಷತನದಿಂದ ಸಂಭಾಳಿಸುವ, ಮುಗ್ಧವಲ್ಲದ ಒಳ್ಳೆಯತನವಿದೆ. ಹೌದು, ಇದು ಮುಗ್ಧತನವಲ್ಲ. ಹಾಗಂತ ಕಪಟತನವೂ ಅಲ್ಲ. ಇಲ್ಲಿ ಹೆಂಡತಿ ಗಂಡನೊಡನೆ ಆಡಿದ ಮಾತುಗಳು ನಿರುದ್ದಿಶ್ಯವಲ್ಲ, ಹಾಗಂತ ದುರುದ್ದೇಶವಂತೂ ಖಂಡಿತ ಅಲ್ಲ. ಈ ಸಿಹಿಸುಳ್ಳೇ ಇಲ್ಲಿ ಕಾವ್ಯದ ಆಭರಣ.


ಸಿಹಿಸುಳ್ಳುಗಳಿಗೆ ಅನೇಕ ಉದಾಹರಣೆಗಳನ್ನು ಕೊಡಬಹುದು. ಉದಾಹರಣೆಗೆ ಮನೆಯಲ್ಲಿ ಮಗು ಕಾಗದದ ಮೇಲೆ ನಾಲ್ಕು ಗೆರೆ ಗೀಚಿ ನಿಮ್ಮತ್ತ ಚಾಚುತ್ತದೆ. ನೀವು "ಆಹಾ ಎಷ್ಟು ಚೆನ್ನಾಗಿದೆ!" ಎನ್ನುತ್ತೀರಿ. ಅದು ಸುಳ್ಳೆಂಬುದು ನಿಮಗೆ ಗೊತ್ತು; ತನ್ನ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿದೆಯೆಂದು ಮಗು ನಂಬುತ್ತದೆ. ಇಲ್ಲಿ ಸುಳ್ಳುತನದ ನಿಜ ಗೊತ್ತಿದ್ದುದು ಒಬ್ಬರಿಗಷ್ಟೇ; ಇನ್ನೊಬ್ಬರು ಆ ಸುಳ್ಳನೇ ಸತ್ಯವೆಂದು ನಂಬಿದರು. ಇನ್ನೊಂದು ಉದಾಹರಣೆ ನೋಡೋಣ: ಯಾವುದೋ ಸಂದರ್ಭದಲ್ಲಿ ಉಭಯಕುಶಲೋಪರಿ ನಡೆಸುತ್ತ ಒಬ್ಬರು, "ನೀವು ಬೆಂಗಳೂರಿಗೆ ಬಂದರೆ ನಮ್ಮ ಮನೆಗೆ ಬರಲೇಬೇಕು" ಎಂದು ಪ್ರೀತಿಯ ಒತ್ತಾಯ ಹಾಕಿದರೆನ್ನಿ. ಆಗ ಎದುರಿನವರು "ಬರೋಣ, ಖಂಡಿತ ಬರೋಣ. ಮುಂದಿನ ಸಲ ನಿಮ್ಮ ಮನೆಗೆ ಬಂದೇ ಬರುವೆ" ಎನ್ನುತ್ತಾರೆ. ಇಲ್ಲಿ ಸುಳ್ಳಿನ ಸುಳ್ಳುತನ ಇಬ್ಬರಿಗೂ ಗೊತ್ತಿದೆ - ಅವರೇನೂ ಇವರನ್ನು ಮನಃಪೂರ್ವಕವಾಗಿ ಬರಲೇಬೇಕೆಂಬ ಆದೇಶದಂತೆ ಕರೆದೂ ಇಲ್ಲ; ಇವರು ಬರುತ್ತೇನೆಂಬ ಭರವಸೆ ಕೊಟ್ಟರೂ ಬರುವವರೇನೂ ಅಲ್ಲ. ಒಂದು ಶಿಷ್ಟಾಚಾರದಂತೆ ಈ ಸುಳ್ಳಿನ ಮಾತುಕತೆ ನಡೆಯಿತು. ಹಾಗಿದ್ದರೂ ಇಲ್ಲಿ ಸಿಹಿಸುಳ್ಳಿನ ಹಿಂದೆ ಒಂದು ಕಚಗುಳಿ ಇಲ್ಲ, ಮೃದುಹಾಸ್ಯವಿಲ್ಲ, ಪರಸ್ಪರರಿಗೆ ಏನನ್ನೋ ದಾಟಿಸುವ ಸೂಕ್ಷ್ಮವಿಲ್ಲ. ಇಂಥ ನೇರಾನೇರ, ಸರಳ, ಮುಗ್ಧ ಸುಳ್ಳಿನ ಮಾತುಕತೆಗೆ ಹಲವು ಉದಾಹರಣೆಗಳನ್ನು ಸಾಹಿತ್ಯದಿಂದ ಹೆಕ್ಕಿ ಕೊಡಬಹುದು.


ಉದಾಹರಣೆಗೆ, ಸಿಲಪ್ಪದಿಕಾರಮ್ ಕಾವ್ಯದಲ್ಲಿ ಕೋವಲನ್, ಕನ್ನಗಿಗೆ ತಾನು ಸೌಖ್ಯವೆಂಬ ಸಂದೇಶ ಕಳಿಸುತ್ತಾನೆ. ಅವನ ಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲವೆಂದು ಕನ್ನಗಿಗೆ ಗೊತ್ತಿದ್ದರೂ, ಅವಳಿಗೆ ಅದು ಗೊತ್ತೆಂದು ಕೋವಲನಿಗೆ ಗೊತ್ತಿದ್ದರೂ ಅವರಿಬ್ಬರೂ ಈ ಪರಸ್ಪರ ಕ್ಷೇಮಸಮಾಚಾರವನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಓ. ಹೆನ್ರಿಯ "ದ ಗಿಫ್ಟ್ ಆಫ್ ಮೆಜಾಯ್" ಎಂಬ ಕತೆಯಲ್ಲಿ ಬರುವ ಜಿಮ್ ಮತ್ತು ಡೆಲ್ಲಾ ಪಾತ್ರಗಳೂ ಅಷ್ಟೆ. ಅವರಿಬ್ಬರೂ ಬಡವರು. ಗಂಡಹೆಂಡತಿಯರಾದ್ದರಿಂದ ತಮ್ಮ ಕುಟುಂಬದ ಬಡತವನ್ನು ಮುಚ್ಚಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಅವರಿಗೇನೂ ಇಲ್ಲ. ಜಿಮ್ ಅವಳಿಗಾಗಿ ಒಂದು ಹೇರ್ ಕ್ಲಿಪ್ಪನ್ನು ಉಡುಗೊರೆಯಾಗಿ ತರುತ್ತಾನೆ - ಅದಕ್ಕಾಗಿ ತನ್ನ ವಾಚನ್ನೇ ಮಾರಬೇಕಾಗಿ ಬರುತ್ತದೆ. ಅವನ ಕೈಗಡಿಯಾರಕ್ಕೆ ಒಂದೊಳ್ಳೆಯ ಚೈನನ್ನು ಅವಳು ಉಡುಗೊರೆಯಾಗಿ ತರುತ್ತಾಳೆ - ತನ್ನ ಆ ಕೇಶರಾಶಿಯನ್ನೇ ಮಾರಿಕೊಂಡು! "ಅಯ್ಯೋ, ನನಗೆ ಉಡುಗೊರೆ ಕೊಡುವುದಕ್ಕಾಗಿ ನಿನ್ನ ಕೂದಲನ್ನೇ ಕತ್ತರಿಸಿಕೊಂಡೆಯಾ? ಎಂದು ಅವನು ಗೋಳಾಡಿದಾಗ ಡೆಲ್ಲಾ "ಬಿಟ್ಹಾಕು! ಆ ಕೂದಲಿಗೇನು! ಕೆಲವೇ ದಿನಗಳಲ್ಲಿ ಕಳೆಯಂತೆ ಬೆಳೆದುಬಿಡುತ್ತೆ" ಎನ್ನುತ್ತಾಳೆ. ಅವಳಾಡಿದ್ದು ತನ್ನನ್ನು ಸಮಾಧಾನಪಡಿಸಲು ಎಂಬುದು ಅವನಿಗೂ ಗೊತ್ತು; ಹಾಗೆ ಹೇಳಿದರೂ ತನ್ನೊಳಗೆ ದುಃಖ ಉಮ್ಮಳಿಸಿಬರುತ್ತಿದೆ ಎಂಬುದು ಆಕೆಗೂ ಗೊತ್ತು. ಟಾಲ್‌ಸ್ಟಾಯ್‌ಯ "ವಾರ್ ಆ್ಯಂಡ್ ಪೀಸ್" ಕೃತಿಯಲ್ಲಿ ರಾಜಕುಮಾರ ಆಂದ್ರೆ ಯುದ್ಧಕ್ಕೆ ಹೊರಟಾಗ ತನ್ನ ಹೆಂಡತಿಗೆ, "ಎಲ್ಲವೂ ಒಳ್ಳೆಯದೇ ಆಗುತ್ತದೆ. ನೀನೇನೂ ಹೆದರಬೇಕಾಗಿಲ್ಲ" ಎನ್ನುವುದಿಲ್ಲವೇ? ಅದೂ ಇಂಥದೇ ಒಂದು ಸಿಹಿಸುಳ್ಳು ಎಂಬುದು ಅವರಿಬ್ಬರಿಗೂ ಗೊತ್ತಿದ್ದ ಸಂಗತಿಯೇ ತಾನೆ? "ಯುದ್ಧದ ಕೊನೆಯಲ್ಲಿ ಎಲ್ಲವೂ ಒಳ್ಳೆಯದೇ ಆಗುತ್ತದೆ" ಎಂದು ಯಾರು ಭಾವಿಸಲು ಸಾಧ್ಯ? ಟಾಗೋರರ "ಪೋಸ್ಟ್ ಮಾಸ್ಟರ್" ಎಂಬ ಕತೆಯಲ್ಲಿ, ಊರು ಬಿಟ್ಟು ಮತ್ತೆಲ್ಲಿಗೋ ಹೋಗಲು ಹೊರಟುನಿಂತ ಅಂಚೆಮಾಸ್ತರರನ್ನು ರತನ್ ಎಂಬ ಹುಡುಗಿ ಕೊನೆಯ ಬಾರಿಗೆಂಬಂತೆ ಭೇಟಿ ಮಾಡುತ್ತಾಳೆ. "ನಾನೆಲ್ಲಿಗೆ ಹೋಗ್ತೀನಿ! ಮತ್ತೆ ಬರ್ತೀನಿ!" ಎಂದು ಹೇಳುವ ಅವನಿಗೆ ಮತ್ತೆ ಬರುವ ಸಾಧ್ಯತೆ ಕ್ಷೀಣವೆಂದು ಗೊತ್ತಿದೆ. ಮತ್ತೆ ಬರ್ತಾನೋ ಇಲ್ಲವೋ ಎಂಬ ಕ್ಷೀಣ ಸಂಶಯವೊಂದು ಈ ಹುಡುಗಿಯೊಳಗೂ ಇದೆ. ಆ ಕ್ಷಣಕ್ಕೆ ಆ ಸುಳ್ಳನ್ನಲ್ಲದೆ ಬೇರೇನು ಹೇಳಲು ಸಾಧ್ಯ?


ಆದರೂ, ಆಗಲೇ ಹೇಳಿದಂತೆ ಈ ಸಿಹಿಸುಳ್ಳುಗಳ ಒಳಗೆ ಪರಸ್ಪರರನ್ನು ನೋಯಿಸಬಾರದೆಂಬ ಎಚ್ಚರದ ಹೊರತಾಗಿ ಕೀಟಲೆಯ ಬುದ್ಧಿ ಇಲ್ಲ; ನವಿರುಹಾಸ್ಯದ ಲೇಪವಿಲ್ಲ. ಸಿಹಿಸುಳ್ಳಿಗೆ ಅಂಥ ಹಾಸ್ಯದ ಲೇಪನ ಕೊಡುವುದರಲ್ಲಿ ಕೆ.ಎಸ್.ನ. ಗಟ್ಟಿಗರು. ಅವರ ಮತ್ತೊಂದು ಕವಿತೆ "ಶಾನುಭೋಗರ ಮಗಳು"ನಲ್ಲಿ ಈ ಹಾಸ್ಯಲೇಪಿತ ಸಿಹಿಸುಳ್ಳೇ ವಸ್ತು. ಶಾನುಭೋಗರ ಮನೆಗೆ ವಧು ನೋಡಲು ಬಂದ ವರನನ್ನು ನೋಡಿ ಶಾನುಭೋಗರ ಮಗಳು ಸೀತೆ ಒಳಕೋಣೆಗೆ ಹೋಗುತ್ತಾಳೆ. ಅವಳ ಅಭಿಪ್ರಾಯ ಕೇಳಲು ಹೋದ ಶಾನುಭೋಗರಿಗೆ ಅವಳು "ವೈದಿಕರ ಮನೆಗಳಲ್ಲಿ ಊಟ ಹೊತ್ತಾಗುವುದು, ನಾನೊಲ್ಲೆ" ಎನ್ನುತ್ತಾಳೆ! (ಇದೆಂಥ ಹಾಸ್ಯಾಸ್ಪದ ಕಾರಣ ಎನ್ನಬೇಡಿ. ೧೨ರ ಎಳವೆಗೆ, ಊಟ ತಡವಾಗುವುದು ಕೂಡ ದೊಡ್ಡ ಕಾರಣವೇ ಅಲ್ಲವೆ?) ಮಗಳ ಮಾತನ್ನು ಕೇಳಿ, ಅವಳ ಇಂಗಿತ ಅರ್ಥಮಾಡಿಕೊಂಡು ನಕ್ಕ ತಂದೆ ಹೊರಬಂದು ವರನ ಕಡೆಯವರಿಗೆ "ಒಳಗೆ ನಂದಾದೀಪ ನಂದಿಹೋಯಿತು" ಎಂದುಬಿಡುತ್ತಾರೆ. ಇದು ಅಪಶಕುನ. ಅಪಶಕುನವನ್ನು ಮೀರಿ ಮದುವೆ ಮಾಡಿಸಿಬಿಡಿ ಎಂದು ಯಾರೂ ಒತ್ತಾಯ ಹಾಕಲಾರರು. ಬಂದ ದಾರಿಗೆ ಸುಂಕವಿಲ್ಲವೆಂದು ವರ ಹೊರಟುಹೋಗುತ್ತಾನೆ. ಹುಡುಗಿ ಹೇಳಿದ್ದು ಒಂದು ಸುಳ್ಳು; ಅದನ್ನು ಅರ್ಥ ಮಾಡಿಕೊಂಡ ತಂದೆ ಹೇಳಿದ್ದು ಇನ್ನೊಂದು ಸುಳ್ಳು! ಆದರೆ ಈ ಸುಳ್ಳಿನಿಂದ ಹುಡುಗಿಯ ಬಾಳು ಉಳಿಯಿತು; ಅವಳೊಳಗಿನ ನಿಜಕಾರಣವೂ ಬದುಕಿಕೊಂಡಿತು; ಮದುವೆಯ ಸಂಬಂಧ ಕೂಡಿಬರಲಿಲ್ಲವೆಂಬುದು ಬಿಟ್ಟರೆ ಆ ಎರಡು ಕುಟುಂಬಗಳ ಸಂಬಂಧವೂ ಕಹಿಗೊಳ್ಳದೆ ಉಳಿಯಿತು. ಒಂದು ಸಿಹಿಸುಳ್ಳಿಂದ ಎಷ್ಟೆಲ್ಲ ಪ್ರಯೋಜನ! ಮರುದಿನ ನೀರಿಗೆ ಹೋದಾಗ ಆ ಹುಡುಗಿ ತನ್ನ ಓರಗೆಯ ಹುಡುಗಿಯರಿಗೆ "ವಧುಪರೀಕ್ಷೆಗೆ ಬಂದಿದ್ದ ಗಂಡು ತನ್ನ ಕೂದಲಿಗಿಂತ ಕಪ್ಪು" ಎಂದು ಹೇಳಿದಳೇನೋ ಹೌದು; ಆದರೆ ಅದೂ ನಿಜಕಾರಣವೆಂದು ಹೇಳುವಂತಿಲ್ಲ! ಹುಡುಗಿಯ ಅಂತರಂಗದ ನಿಜಕಾರಣವೆಂಬುದು ಯಾರಿಗೂ ತಿಳಿಯದಂತೆ ಈ ಎಲ್ಲ ಸುಳ್ಳುಗಳಿಂದ ಮುಚ್ಚಿಹೋಗಿ ಸುರಕ್ಷಿತವಾಯಿತು. ಅಂಥ ಕೆಲವು ಖಾಸಗಿ ಸತ್ಯಗಳನ್ನು ರಕ್ಷಿಸಿಕೊಳ್ಳಲು ಎಷ್ಟೋ ಸಲ ಸಿಹಿಸುಳ್ಳುಗಳನ್ನು ಬಲಿಹಾಕಬೇಕಾಗುತ್ತದೆ!


"ಸತ್ಯವನ್ನು ಹೇಳು, ಪ್ರಿಯವಾದ್ದನ್ನು ಹೇಳು, ಅಪ್ರಿಯವಾದ ಸತ್ಯ ಹೇಳಬೇಡ" ಎಂದರು ಪುರಾತನರು. ಹಾಗೆಯೇ "ಪ್ರಿಯವಾದ ಸುಳ್ಳನ್ನೂ ಹೇಳಬೇಡ. ಇದುವೇ ಸನಾತನಧರ್ಮ" ಎಂದೂ ಆದೇಶಿಸಿದರು. ಆದರೆ ಯಾರಿಗೂ ಕೇಡೆನಿಸದ, ಕೇಡು ಬಯಸದ, ಒಳಿತಾದ್ದನ್ನು ರಕ್ಷಿಸಬಲ್ಲ ಅಂಥ ಸಿಹಿಸುಳ್ಳುಗಳನ್ನು ಹೇಳಬಹುದು. ಹೇಳಬೇಕು ಕೂಡ. ಭಯಹುಟ್ಟಿಸುವ ಕಠೋರ ರೂಪದ ಸತ್ಯದ ದರ್ಶನ, ಸಹವಾಸ ಯಾರಿಗೆ ಬೇಕಾಗಿದೆ?

Tuesday, November 4, 2025

ಹೀಗೂ ಇದ್ದರು ನಮ್ಮ ಹೆಮ್ಮೆಯ ಕನ್ನಡ ಸಾಹಿತಿಗಳು - ಸಂಗ್ರಹ


ಗಳಗನಾಥರು


ಗಳಗನಾಥರು

ಕನ್ನಡದ ಪುಸ್ತಕಗಳನ್ನು ತಲೆಯಲ್ಲಿ ಹೊತ್ತುಕೊಂಡು ಮಾರಾಟ ಮಾಡುತ್ತಿದ್ದ ಪುಣ್ಯಾತ್ಮರು ಇವರು.  ನಿಮ್ಮ ಮನೆಯಲ್ಲಿ ಲಕ್ಷ್ಮಿ ಇದ್ದರೆ ಸಾಲದು, ನಾನು ಸರಸ್ವತಿಯನ್ನು ಹೊತ್ತು ತಂದಿರುವೆ.  ಲಕ್ಷ್ಮಿಯೊಂದಿಗೆ ಸರಸ್ವತಿಯನ್ನು ಮನೆ ತುಂಬಿಸಿಕೊಳ್ಳಿ ಎಂದು ಹೇಳುತ್ತಾ, ರಾತ್ರಿ ದೇವಸ್ಥಾನದ ಅಂಗಳದಲ್ಲಿ ಮಲಗಿ, ಮಾರನೆಯ ದಿನ ಊರ ಕೆರೆ ಕಟ್ಟೆಗಳಲ್ಲಿ ಸ್ನಾನ ಮಾಡಿ, ಬೆಲ್ಲ ಕೊಬರಿ ತಿಂದುಕೊಂಡು ಊರೂರಿಗೆ ತಲೆಯ ಮೇಲೆ ಪುಸ್ತಕ ಹೊತ್ತು ಕನ್ನಡ ಸಾರಸ್ವತ ಲೋಕವನ್ನು ಮನೆ ಮನಗಳಿಗೆ ಹಂಚಿದವರು ನಮ್ಮ ಗಳಗನಾಥರು.  ಅವರು ಸತ್ತಮೇಲೆ ಅಂತ್ಯಸಂಸ್ಕಾರ ಮಾಡಲೂ ಇವರ ಮನೆಯವರ ಬಳಿ ಹಣವಿರಲಿಲ್ಲ. ಪುಸ್ತಕಗಳಿಂದಲೇ ಇವರ ಅಂತ್ಯಸಂಸ್ಕಾರ  ಮಾಡಬೇಕಷ್ಟೇಯೆಂದು ಅವರ ಮನೆಯವರು ಅ ಸಂದರ್ಭದಲ್ಲಿ ನೊಂದುಕೊಂಡು ನುಡಿದಿದ್ದರು.



ವಿ.ಸೀತಾರಾಮಯ್ಯ

ಇವರು ದಿನಾ ಬೆಳಿಗ್ಗೆ ಹೊಟೇಲಿನಿಂದ ಹತ್ತು ಇಡ್ಲಿ ತರಿಸುತ್ತಿದ್ದರಂತೆ.ಅದರಲ್ಲಿ ಒಂದು ಇಡ್ಲಿಯನ್ನಷ್ಟೇ ತಾವು ತಿಂದು ಉಳಿದ ಒಂಬತ್ತು ಇಡ್ಲಿಯನ್ನು ಪ್ರಾಣಿ ಪಕ್ಷಿಗಳಿಗೆ ತಿನ್ನಿಸುತ್ತಿದ್ದರು.  ಇದನ್ನು ಅವರು ತಮ್ಮ ಬದುಕಿನುದ್ದಕ್ಕೂ ದಿನಚರಿಯಂತೆ ಪಾಲಿಸುತ್ತಿದ್ದರು.  ತಾವೂ ಬದುಕುತ್ತಾ ಎಲ್ಲವನ್ನೂ ಬದುಕಿಸಬೇಕೆಂಬ ಅವರ ನಿರ್ಮಲ ಹೃದಯ ನಮಗೆ ದಾರಿದೀಪ. 


ದ.ರಾ.ಬೇಂದ್ರೆ:-🙏🏻 ಇವರೊಮ್ಮೆ ದಾರಿಯಲ್ಲಿ ನಡೆದುಕೊಂಡು ಬರಬೇಕಾದರೆ ಚಪ್ಪಲಿ ಕಿತ್ತುಹೋಗುತ್ತದೆ.  ಚಪ್ಪಲಿಯನ್ನು ಕೈಯಲ್ಲಿ ಹಿಡಿದು ಸ್ವಲ್ಪ ದೂರ ನಡೆದುಕೊಂಡು ಬಂದಮೇಲೆ, ದಾರಿಪಕ್ಕ ಕೂತಿದ್ದ ಚಮ್ಮಾರ ಸಿಗುತ್ತಾನೆ.  ಬಿರುಬಿಸಿಲು ಆಗಿದ್ದರಿಂದ ಬೇಂದ್ರೆ ಅಜ್ಜ ಛತ್ರಿಬಿಡಿಸಿಕೊಂಡಿದ್ದರು.  ಚಮ್ಮಾರ ತಮ್ಮ  ಚಪ್ಪಲಿಯನ್ನು ರಿಪೇರಿ ಮಾಡುವಾಗ ಅವರು ತಮ್ಮ ಛತ್ರಿಯನ್ನು ಬಿಸಿಲಲ್ಲಿದ್ದ ಚಮ್ಮಾರನಿಗೆ ಹಿಡಿದಿದ್ದರು..! ಇದರಿಂದ ಮುಜುಗರಗೊಂಡ ಚಮ್ಮಾರ, ನಾನು ದಿನಾ ಬಿಸಿಲಲ್ಲೇ ಕೂತು ಕೆಲಸ ಮಾಡುವವನು ನನಗಿದೆಲ್ಲ ಬೇಡ ಅಂದಿದ್ದಕ್ಜೆ ಬೇಂದ್ರೆ ಅಜ್ಜ ನೀನಿಗ ನಿನ್ನ ಕೆಲಸ ಮಾಡುತ್ತಿದ್ದೀಯ, ನಾನೀಗ ನನ್ನ ಕೆಲಸ ಮಾಡುತ್ತಿದ್ದೇನೆ ಅಂದರಂತೆ...!.   ಸರ್ವ ಸಮತಾ ಭಾವದ ವ್ಯಕ್ತಿತ್ವ ಅವರದಾಗಿತ್ತು. 



ಡಿವಿಜಿ:-🙏🏻



ಡಿವಿಜಿಯವರು ತಮ್ಮ ಹೆಂಡತಿಯನ್ನು ಆಪ್ತರೊಬ್ಬರ ಮದುವೆಗೆ ಹೋಗಲು ಹೇಳಿ ತಾವು ಬೇರೊಂದು ಕಾರ್ಯಕ್ರಮಕ್ಕೆ ಹೋಗಿದ್ದರು.ಕಾರ್ಯಕ್ರಮ ಮುಗಿಸಿ ಮನೆಗೆ ಬಂದಾಗ ಹೆಂಡತಿ ಮನೆಯಲ್ಲಿರೋದನ್ನು ನೋಡಿ ಸಿಟ್ಟಾದ ಡಿವಿಜಿ, ಮದುವೆಗೆ ಯಾಕೆ ಹೋಗಲಿಲ್ಲವೆಂದು ಹೆಂಡತಿಯನ್ನು ಪ್ರಶ್ನಿಸಿದರು.  ಅವರ ಪತ್ನಿ, ಮಗನನ್ನು ಕಳಿಸಿದ್ದೇನೆ ಅಂದರು.  ಡಿವಿಜಿ ಬಹಳ ಆತ್ಮೀಯರ ಮದುವೆ ಎಂದು ಹೇಳಿದ್ದೆನ್ನಲ್ಲ ನೀನೇ ಹೋಗಬೇಕಿತ್ತು ಎಂದು ಮತ್ತೊಮ್ಮೆ ಏರಿದ ಧ್ವನಿಯಲ್ಲಿ ಹೇಳಿದರು.  ಆಗ ಅವರ ಪತ್ನಿ,'ನನ್ನತ್ರ ಇರೋದು ಒಂದೇ ಸೀರೆ.  ಅದು ಕೂಡ ಅಲ್ಲಿ ಇಲ್ಲಿ ಹರಿದಿದೆ.ಅದನ್ನು ಉಟ್ಕೊಂಡು ಮದ್ವೆಗೆ ಹೋದ್ರೆ ನನ್ ಯಜಮಾನ್ರ ಮಾನ ಹೋಗುತ್ತೆ. ಅದ್ಕೆ ಮಗನನ್ನು ಕಳಿಸಿದೆ ಅಂದರಂತೆ.  ಈ ಮಾತನ್ನು ಕೇಳಿದ ಡಿವಿಜಿಯವರಿಗೆ ಮರು ಮಾತನಾಡಲು ಅವಕಾಶವೇ ಇರಲಿಲ್ಲ.

ತಿರುಕ ನೀನು ಈ ಬ್ರಹ್ಮಪುರಿಯೊಳಗೆ, 

ಸಿರಿಯಿದ್ದೊಡೇನು, ಪರಿಜನರಿದ್ದೋಡೇನು ? ಎನ್ನುವ ಮನಸ್ಸು ಅವರದಾಗಿತ್ತು.  


ಮಾಸ್ತಿ:-🙏🏻 ಜಿಲ್ಲಾಧಿಕಾರಿಯಾಗಿದ್ದ ಮಾಸ್ತಿಯವರು ಒಮ್ಮೆ ಊರಭೇಟಿಗೆ ತೆರಳಿರುತ್ತಾರೆ.  ದಾರಿ ಮಧ್ಯೆ ಬಾಯಾರಿಕೆ ಆದ್ದರಿಂದ ಸಾರ್ವಜನಿಕ ಬಾವಿಯಿಂದ ನೀರು ಸೇದುತ್ತಿದ್ದ ವ್ಯಕ್ತಿಯ ಬಳಿ ಒಂದು ಬೊಗಸೆ ಕುಡಿಯಲು ನೀರು ಕೇಳುತ್ತಾರೆ.  ಅವನು ನೀರನ್ನು ಸೇದಿ ಮಾಸ್ತಿಯವರಿಗೆ ಕೊಡುವ ಬದಲು ಪಕ್ಕದಲ್ಲಿರುವ ಟ್ಯಾಂಕಿಗೆ ಸುರಿಯುತ್ತಾನೆ.ಮಾಸ್ತಿಯವರಿಗೆ ಅವನು ನೀರು ಕೊಡದ್ದು ನೋಡಿ ಮುಜುಗರವಾಗುತ್ತದೆ.  ಮತ್ತೆ ಅವನು ಕೊಡವನ್ನು ಬಾವಿಗಿಳಿಸಿ ನೀರು ಸೇದುತ್ತಾನೆ.  ಈ ಬಾರಿ ಮಾಸ್ತಿಯವರನ್ನು ಕರೆದು ಬೊಗಸೆ ಹಿಡಿಯುವಂತೆ ಹೇಳಿ ನೀರು ಸುರಿಯುತ್ತಾನೆ.  ಮಾಸ್ತಿಯವರು ಆಶ್ಚರ್ಯದಿಂದ ಕೇಳುತ್ತಾರೆ ಆಗಲೆ ಯಾಕೆ ನೀನು ನನಗೆ ನೀರು ಕೊಡಲಿಲ್ಲ ಎಂದು.  ಅದಕ್ಕವನು ಸ್ವಾಮಿ ಈ ಬಾವಿ ತೋಡಿಸುವ ಮೊದಲು ಡಿಸಿಯವರು, ಯಾರೇ ನೀರು ಸೇದಿದರು ಮೊದಲ ಕೊಡವನ್ನು ಪಕ್ಕದಲ್ಲಿರುವ ಟ್ಯಾಂಕಿಗೆ ಸುರಿಯಬೇಕು, ಅ ನೀರು ಪ್ರಾಣಿಪಕ್ಷಿಗಳಿಗೆ ಕುಡಿಯೋಕೆ ಉಪಯೋಗವಾಗಬೇಕು ಎಂದಿದ್ದರು.ಹೀಗಾಗಿ ಈ ಊರಿನವರು ಅವರ ಅ ಮಾತನ್ನು ಪಾಲಿಸುತ್ತಿದ್ದೇವೆ ಎಂದ.  ಅಂದಹಾಗೆ ಹಾಗೆ ಆದೇಶ ಮಾಡಿದ್ದ ಡಿಸಿ ಮಾಸ್ತಿಯವರೇ ಆಗಿದ್ದರು...!  ಊರಿನವರ ಪ್ರಾಮಾಣಿಕತೆಯನ್ನು ನೋಡಿ ಮಾಸ್ತಿಯವರ ಕಣ್ಣುಗಳು ಒದ್ದೆಯಾಗಿದ್ದವು..!

ಸ್ವಾರ್ಥವಿಲ್ಲದಾ ಬದುಕು ಸರ್ವಕಾಲಕ್ಕೂ ಶ್ರೇಷ್ಠ ಎಂಬುದನ್ನು ತೋರಿಸಿಕೊಟ್ಟವರಿವರು.  


ದೇವುಡು ನರಸಿಂಹಶಾಸ್ತ್ರಿ

ದೇವುಡು ನರಸಿಂಹಶಾಸ್ತ್ರಿ


ಮಯೂರ ವರ್ಮನ ಬಗ್ಗೆ ಬೆಳಕು ಚೆಲ್ಲಿ ಐತಿಹಾಸಿಕ ಕಾದಂಬರ ಬರೆದರಿವರು.  ಅವರ ಕಾಲು ಗ್ಯಾಂಗರೀನ್ ಗೆ ಒಳಗಾದಾಗ ಅವರನ್ನು ಯಾವುದೋ ಒಂದು ಸಮಾರಂಭಕ್ಕೆ ನಾಲ್ಕು ಜನ ಎತ್ತಿಕೊಂಡು ಹೋಗುವಾಗ *ನೋಡ್ರಯಯ ನಾನೆಷ್ಟು ಅದೃಷ್ಠವಂತ, ಎಲ್ಲರೂ ಸತ್ತಾಗ ಅವರನ್ನು ನಾಲ್ಕು ಜನ ಹೊತ್ತೊಯ್ದರೆ ನಾನು ಬದುಕಿದ್ದಾಗಲೇ ನಾಲ್ಕು ಜನರ ಮೇಲೆ ಹೋಗುವ ಅದೃಷ್ಠಶಾಲಿ ಎಂದು ವಾಸ್ತವತೆಯನ್ನು ಅರುಹಿದ್ದವರು.  ದೇವರು ನನ್ನ ಕಾಲು ಕಿತ್ತುಕೊಂಡ ಆದರೆ ಕನ್ನಡ ಕಟ್ಟುವ ನನ್ನ ಕೈಂಕರ್ಯವನ್ನ ಅವನು ಕಿತ್ತುಕೊಳ್ಳಲಾರ ಎಂದು ಅಭಿಮಾನದಿಂದ ಹೇಳುತ್ತಿದ್ದವರು.  

ಇಂಥಃ ಮಹನೀಯರಿಂದಲೇ ಕನ್ನಡ ಉಳಿದು ಬೆಳಿದಿದ್ದು.  


ಟಿ ಎಸ್ ವೆಂಕಣ್ಣಯ್ಯ

ಟಿ ಎಸ್ ವೆಂಕಣ್ಣಯ್ಯ


ಮನೆಯಲ್ಲಿಯೇ ಕವಿಗೋಷ್ಠಿ ನಡೆಸಿ ಕನ್ನಡ ಕಟ್ಟಿದವರು.  ಒಮ್ಮೆ ಹೀಗೆ ಕವಿಗೋಷ್ಠಿ ಮನೆಯ ಮಹಡಿಯಲ್ಲಿ ನಡೆಯುತ್ತಿತ್ತು.  ಅವರ ಪುತ್ರ ಮರಣಿಸಿದ ಸುದ್ದಿಯನ್ನು ಅವರ ಶ್ರೀಮತಿ ಅವರ ಕಿವಿಯಲ್ಲಿ ಉಸುರಿಸಿದರು.   ಕವಿಗೋಷ್ಠಿಗೆ ಧಕ್ಕೆ ಬರಬಾರದೆಂದು ಮನಸ್ಸನ್ನು ಕಲ್ಲು ಮಾಡಿಕಂಡು ಕವಿಗೋಷ್ಠಿ ನಡೆಸಿ,  ಅದು ಮುಗಿದ ನಂತರ ಅವರ ಕಣ್ಣಾಲೆಗಳಲ್ಲಿ ಕಣ್ಣೀರು ಧುಮ್ಇಕ್ಕಿತ್ತು.   ಆಗ ಇತರರು ಇದಕ್ಕೆ ಕಾರಣ ಕೇಳಿದಾಗ ನಡೆದ ವಿಷಯವನ್ನು ಸಭೆಗೆ ಆಗ ತಿಳಿಸಿದರು.   ಆಗ ಅವರೆಲ್ಲರೂ ಹೀಗೇಕೆ ಮಾಡಿದಿರಿ ? ಎಂದು ಪ್ರಶ್ನಿಸಿದಾಗ ಕನ್ನಡ ಕಟ್ಟುವ ಕೆಲಸ ನಿಲ್ಲಬಾರದೆಂದೂ ಈ ರೀತಿ ಮಾಡಿದೆ ಎಂದು ಎಲ್ಲಕ್ಕೂ ಕನ್ನಡವೇ ಮಿಗಿಲು ಎಂದು ತೋರಿಸಿದ ಮಹಾತ್ಮರೀತ.  

ಕನ್ನಡ ಉಳಿದಿದ್ದೇ ಇಂಥಹವರ ಕೊಡುಗೆಯಿಂದ 


ಈ ಮೇರು ಸಾಹಿತಿಗಳು ನಮ್ಮ ನಾಡಿಗೆ ಆಸ್ತಿ |  ಸಿರಿಗನ್ನಡಂ ಗೆಲ್ಗೆ  

Krupe : Whatsapp / ಸಂಗ್ರಹ

ನುಡಿಮುತ್ತು

 ನಲ್ಬೆಳಗು

೩/೧೧/೨೦೨೫

ವಿಶ್ವ ಜೆಲ್ಲಿ ಮೀನು ದಿನ; ವಿಶ್ವ ಸ್ಯಾಂಡ್‌ವಿಚ್ ದಿನ

 ಕೆಳಗೆ ಬೀಳುವ ಬೀಜಕ್ಕೆ ಹೆದರುವ ಭಯವಿದ್ದರೆ  ಹೆಮ್ಮರವಾಗುತ್ತಿರಲಿಲ್ಲ;

 ಅದೇ ರೀತಿ ಸೋಲುತ್ತೇನೆoದು  ಪ್ರಯತ್ನವೇ ಪಡದೆ ಸುಮ್ಮನೆ ಇದ್ದಿದ್ದರೆ ಯಾರೂ ಇತಿಹಾಸ ಬರೆಯಲು ಆಗುತ್ತಿರಲಿಲ್ಲ

ಸಿಹಿಸುಳ್ಳು - ಮನದ ಮಾತನ್ನು ದಾಟಿಸಲೊಂದು ತೆಪ್ಪ - ರೋಹಿತ್ ಚಕ್ರತೀರ್ಥ

  ಕೆ.ಎಸ್. ನರಸಿಂಹಸ್ವಾಮಿಯವರ "ಮೈಸೂರು ಮಲ್ಲಿಗೆ" ಕವನ ಸಂಕಲನದಲ್ಲಿ "ತೌರ ಸುಖದೊಳಗೆನ್ನ.." ಎಂಬೊಂದು ಕವಿತೆ ಇದೆ. ಇದನ್ನು ರತ್ನಮಾಲಾ ಪ್ರಕಾಶ್...