ನಮ್ಮನು ಮತ್ತು ಬ್ಲಾಗಿನ ಓರೆ ಕೋರೆಯನು ತಿದ್ದಲು, ಬ್ಲಾಗಿಗೆನಲ್ಲಿ ಬರೆಯಲು.. ನಿಮ್ಮ ಸಂಗ್ರಹವನು ಪ್ರಕಟಿಸಲು ನಮ್ಮನ್ನು ತಲುಪಲು - ಇ ಮೇಲ್ ಕಳುಹಿಸಿ - kannada.info@gmail.com |.

Friday, February 14, 2020

ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು : ನಾಟಕಕಾರ, ಕತೆಗಾರ, ನಟ, ಚಿಂತಕ ಎಸ್. ಎನ್. ಸೇತುರಾಮ್ ಅವರ ಮುನ್ನುಡಿ

 ಪೌರತ್ವ ತಿದ್ದುಪಡಿ ಕಾಯಿದೆಯ ವಿರೋಧದ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಸಲ್ಮಾನ ಧುರೀಣರೊಬ್ಬರು ಭಾಷಣದಲ್ಲಿ ಘೋಷಿಸಿದ್ದು . .”ಜಗತ್ತಿನ ಎಲ್ಲ ಮುಸಲ್ಮಾನರೂ ನನ್ನ ಅಣ್ಣ ತಮ್ಮಂದಿರು”.  ಸತ್ಯವೇ !  ಬರೀ ಮುಸಲ್ಮಾನರೇಕೆ ? ಜಗತ್ತಿನ ಎಲ್ಲ ಮನುಷ್ಯರೂ ನನ್ನ ಅಣ್ಣ ತಮ್ಮಂದಿರೇ. ವಸುಧೈವ ಕುಟುಂಬಕಂ ಎಂದು ನಂಬಿದವನು ನಾನು.  ಸರಹದ್ದುಗಳ ಅವಶ್ಯಕತೆ ಇರಲಿಲ್ಲ. ಗಡಿ ಕಾಯುವ ಸೈನಿಕ ಬೇಕಿರಲಿಲ್ಲ. ಪೌರತ್ವದ ಪ್ರಶ್ನೆಯೇ ಇರಲಿಲ್ಲ. ನನಗಂತೂ ಏನೂ ಬೇಕೇ ಇರಲಿಲ್ಲ.


ತಪ್ಪೋ ಸರಿಯೋ !  ಮುಂಚೂಣಿಯಲ್ಲಿದ್ದ ವಿದ್ಯಾವಂತ ಧುರೀಣರು ದೇಶದ ಸ್ವಾತಂತ್ರ್ಯದ ಸಮಯದಲ್ಲಿ, ಅವರ ವಿವೇಕದಲ್ಲಿ, ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸಿದರು. ಧುರೀಣರಲ್ಲಿ ಮುಕ್ಕಾಲು ಮೂರು ವಾಸಿ ವಕೀಲರು... ಭಾವಕ್ಕಿಂತ ತರ್ಕವೇ ಮುಖ್ಯವಾಯಿತೇನೋ !  ಮೇಜಿನ ಮೇಲಿನ ಭೂಪಟದಲ್ಲಿ ಗೆರೆಗಳನ್ನು ಎಳೆದು ಸರಹದ್ದುಗಳನ್ನು ಗುರುತಿಸಿದಾಗ, ಅದೂ ಧರ್ಮದ ಆಧಾರದ ಮೇಲೆ ಗುರುತಿಸಿದಾಗ, ಇಲ್ಲಿರುವ ಆ ಧರ್ಮದವ ಮತ್ತು ಅಲ್ಲಿರುವ ಈ ಧರ್ಮದವನ ಮನಃಸ್ಥಿತಿಯ ಅರಿವೇ ಇರಲಿಲ್ಲ.
ಮನುಷ್ಯ ಯಂತ್ರವಲ್ಲ. ನೆನಪುಗಳ, ಭಾವಗಳ ಮುದ್ದೆ. ಇದು ನನ್ನ ನೆಲ. ನಾನು ನಡೆದಾಡಿದ ಹಾದಿ. ನನ್ನ ಶಾಲೆ. ನಾನು ಈಜಿದ ನದಿ, ಕೆರೆ. ನನ್ನ ಅಪ್ಪ, ಅಮ್ಮ, ಅಜ್ಜಂದಿರ ಜಾಗ. ನನ್ನ ಪೂಜಾ ಸ್ಥಳ. ಇದೆಲ್ಲದರ ಗುರುತು ಮತ್ತು ಹತ್ತು ತಲೆಮಾರುಗಳ ಪ್ರಜ್ಞೆಯಲ್ಲಿ ಅವನ ಅಸ್ತಿತ್ವ.

ಬದುಕು ಅನ್ನುವುದು ಬರೀ ದೈಹಿಕ ತುರ್ತಲ್ಲ. ಅದೊಂದು ಭಾವನಾತ್ಮಕ ಇರುವು. ನೆಲ ಅಂದ ಮೇಲೆ ಬರೀ ನೆಲ, ಇದೇನು ಅದೇನು, ಅನ್ನುವುದಾದರೆ, ಸುಖಕ್ಕೆ ಹೆಂಡತಿ, ಇವಳೇನು.. ಅವಳೇನು ..ಅಂದ ಹಾಗೇನೇ. ಮಾನಸಿಕವಾಗಿ ನನ್ನ ನೆಲ ಅನ್ನುವುದೊಂದು ನೆಲೆ. ಬುಡ ಕಿತ್ತು ಹೊರಡುವುದು ಸುಲಭವಲ್ಲ.

ನೆಲೆ ಇಲ್ಲದವರು ವಲಸೆ ಹೋದರು. ಇದ್ದವರು ಅಲ್ಲಲ್ಲೇ ಉಳಿದರು. ಸಮಸ್ಯೆ ಶುರುವಾದದ್ದೇ ಅಲ್ಲಿ. ಮುಸಲ್ಮಾನ ಬಂಧುಗಳಿಗೆ ಅಂತ ಹೇಳಿ ಪೂರ್ವ ಪಶ್ಚಿಮ ಪಾಕಿಸ್ತಾನವಾಯಿತು. ಆದರೆ ಸ್ಥಿತಿವಂತ ಹಿಂದೂಗಳು ಅಲ್ಲೇ ಉಳಿದರು. ಮನೆಯಲ್ಲಿ ಸ್ವಂತ ತಮ್ಮ, ಹೆಂಡತಿ, ಮಕ್ಕಳು ಹಸಿವೆಯಲ್ಲಿ ನರಳ್ತಿದ್ದಾರೆ.  ಪಕ್ಕದ ಹಿಂದೂವಿನ ನೆಲದಲ್ಲಿ ಪೈರು ನಳನಳಿಸ್ತಿದೆ. ಅವನ ಗೋದಾಮಿನಲ್ಲಿ ಧಾನ್ಯ ತುಂಬಿದೆ. ಕೊಟ್ಟಿಗೆಯಲ್ಲಿ ಕೆಚ್ಚಲು ತುಂಬಿದ ಹಸು ಮೆಲುಕು ಹಾಕುತ್ತಿದೆ. ಕರು ಅಂಗಳದಲ್ಲಿ ಕುಣೀತಿದೆ. “ನನ್ನ ಆಸ್ತಿಯನ್ನು ಇವನು ಆಕ್ರಮಿಸಿಕೊಂಡಿದ್ದಾನೆ” ಅನ್ನೋದು ಸಹಜವಾಗಿ ಉದ್ಭವಿಸಿದ ಭಾವ. ಇಲ್ಲಿ ಮನೆಯಲ್ಲಿ ಹಸುಗೂಸು ಹಸಿವಿನಲ್ಲಿ ಹಾಲಿಗೆ ಕಿರ್ ಅಂತಿದ್ದಾಗ, ಅಲ್ಲಿ ಅವನು ಅದೇ ಹಾಲನ್ನ ಧಾರಾಳವಾಗಿ ಕಲ್ಲು ಮೂರ್ತಿಯ ಮೇಲೆ ಸುರೀತಿದ್ದರೆ ಕಣ್ಣು ಕೆಂಪಗಾಗತ್ತೆ. ಹೊಡೆದೋಡಿಸಬೇಕು ಅನ್ನಿಸತ್ತೆ. ಈ ಮನಃಸ್ಥಿತಿಯಲ್ಲಿ, ಇಲ್ಲದವರು ಗುಂಪಾಗಿ, ಇದ್ದವರನ್ನು ಎಬ್ಬಿಸುವ ಪ್ರಯತ್ನ ಸಹಜ. ಇದಕ್ಕೆ ಆಳುವವರು ಕುಮ್ಮಕ್ಕು ಕೊಟ್ಟು ಧರ್ಮದ ಅಫೀಮೂ ಬೆರೆತರೆ, ಕ್ರೌರ್ಯ ಸ್ವಾಭಾವಿಕವಾಗೇ ಉದ್ಭವಿಸತ್ತೆ. ಈ ಕ್ರೌರ್ಯಕ್ಕೆ ಈಡಾಗಿ 1970 ರಲ್ಲಿ ಅಂದಿನ ಪಶ್ಚಿಮ ಪಾಕಿಸ್ತಾನ ಇಂದಿನ ಬಾಂಗ್ಲಾದೇಶದಿಂದ ಮನೆ ಮಾರು ಕಳಕೊಂಡು ಬಂದು ಇಲ್ಲಿ ನಿರಾಶ್ರಿತರಾಗಿ ಸಿಂಧನೂರಿನಲ್ಲಿ ನೆಲೆ ಕಾಣುತ್ತಿರುವ ಜೀವಗಳ ನೆನಪುಗಳನ್ನು ಈ ಪುಸ್ತಕದ ಬರಹಗಳು ದಾಖಲಿಸುತ್ತವೆ.

ಮನುಷ್ಯನ್ನ ಎಬ್ಬಿಸುವುದು ಬಹಳ ಸುಲಭ. ಮೊದಲು ಬೆಳೆ ನಾಶ ಮಾಡಿ. ಅರ್ಧ ಕುಗ್ಗುತ್ತಾನೆ. ಅವನ ಗೋದಾಮುಗಳನ್ನು ಲೂಟಿ ಮಾಡಿ. ಮತ್ತಷ್ಟು ಕರಗತಾನೆ. ದನ ಕರುಗಳನ್ನ ಸಾಗಿಸಿ, ನೆಲ ಕಚ್ತಾನೆ. ಪೂಜಾ ಸ್ಥಳಗಳನ್ನ ಅಪವಿತ್ರ ಮಾಡಿ - -ಗುಡಿಗೋಪುರಗಳನ್ನ ಕೆಡವಿ, ಒಂಟಿಯಾಗ್ತಾನೆ. ಅಸ್ತಿತ್ವ ಸಾಯತ್ತೆ. ಹೆಂಡತಿಯ ಸೆರಗೆಳಿ. ಪ್ರೀತಿಯ ಮಗಳನ್ನ ಅವನೆದುರಿಗೇ ಬೆತ್ತಲು ಮಾಡಿ ಸಾಮೂಹಿಕ ಅತ್ಯಾಚಾರಕ್ಕೆ ಈಡು ಮಾಡಿ. ಹೆಂಡತಿ ಹೆಂಡತಿಯಾಗಿ ಉಳಿಯಲ್ಲ. ಮಗಳು ಮಗಳಾಗಿ ಉಳಿಯಲ್ಲ. ಈಗ ಅವನು ಪೂರ್ಣ ನಿರಾಶ್ರಿತ ! ಅಲೆಮಾರಿ !

ಎಲ್ಲರೂ ಅಸಭ್ಯರೇನಲ್ಲ. ಆದರೆ ಇದರ ಚೈತನ್ಯವಿರುವ ಅಸಭ್ಯರು ಇದ್ದಾರೆ ಎನ್ನುವುದು ಸತ್ಯ. ರಾಜಕಾರಣ ಧರ್ಮದ ಅನೈತಿಕ ನೆಂಟಸ್ತಿಕೆಯಲ್ಲಿ ಹುಟ್ಟೋದು ಸೈತಾನ. ಅವನಿಗೆ ಇಂತಹದ್ದೇ ಅನ್ನುವ ಧರ್ಮವಿಲ್ಲ. ಎಲ್ಲ ಧರ್ಮಗಳಲ್ಲೂ ಅಷ್ಟೇ. ಜೊತೆಗಿಷ್ಟು ವಿದ್ಯೆ ಬೆರೆಸಿ ವಿವೇಕ ಕಳೆದರೆ ವಿನಾಶದ ಯಂತ್ರ ತಯಾರಾಗತ್ತೆ. ಈ ವಿನಾಶದ ಯಂತ್ರಕ್ಕೆ ಈಡಾಗಿ, ನೆಲೆ ಅಸ್ತಿತ್ವ ಕಳಕೊಂಡು ಐವತ್ತು ವರ್ಷದ ನಂತರವೂ ಬೆಂಗಾಡು ಸಿಂಧನೂರಿನಲ್ಲಿ ಕೂತು ನೆಲೆ ತಡಕ್ತಿರೋರ ಬದುಕು ಬವಣೆಯ ಚಿತ್ರಣ ಇಲ್ಲಿದೆ.


Courtesy :  Ayodhya Books 

No comments:

Post a Comment