ಉಟ್ಟ ಬಟ್ಟೆಯಲ್ಲಿ ಹೊರಟು ಬಂದವರು : ನಾಟಕಕಾರ, ಕತೆಗಾರ, ನಟ, ಚಿಂತಕ ಎಸ್. ಎನ್. ಸೇತುರಾಮ್ ಅವರ ಮುನ್ನುಡಿ
ಪೌರತ್ವ ತಿದ್ದುಪಡಿ ಕಾಯಿದೆಯ ವಿರೋಧದ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಸಲ್ಮಾನ ಧುರೀಣರೊಬ್ಬರು ಭಾಷಣದಲ್ಲಿ ಘೋಷಿಸಿದ್ದು . .”ಜಗತ್ತಿನ ಎಲ್ಲ ಮುಸಲ್ಮಾನರೂ ನನ್ನ ಅಣ್ಣ ತಮ್ಮಂದಿರು”. ಸತ್ಯವೇ ! ಬರೀ ಮುಸಲ್ಮಾನರೇಕೆ ? ಜಗತ್ತಿನ ಎಲ್ಲ ಮನುಷ್ಯರೂ ನನ್ನ ಅಣ್ಣ ತಮ್ಮಂದಿರೇ. ವಸುಧೈವ ಕುಟುಂಬಕಂ ಎಂದು ನಂಬಿದವನು ನಾನು. ಸರಹದ್ದುಗಳ ಅವಶ್ಯಕತೆ ಇರಲಿಲ್ಲ. ಗಡಿ ಕಾಯುವ ಸೈನಿಕ ಬೇಕಿರಲಿಲ್ಲ. ಪೌರತ್ವದ ಪ್ರಶ್ನೆಯೇ ಇರಲಿಲ್ಲ. ನನಗಂತೂ ಏನೂ ಬೇಕೇ ಇರಲಿಲ್ಲ. ತಪ್ಪೋ ಸರಿಯೋ ! ಮುಂಚೂಣಿಯಲ್ಲಿದ್ದ ವಿದ್ಯಾವಂತ ಧುರೀಣರು ದೇಶದ ಸ್ವಾತಂತ್ರ್ಯದ ಸಮಯದಲ್ಲಿ, ಅವರ ವಿವೇಕದಲ್ಲಿ, ಧರ್ಮದ ಆಧಾರದಲ್ಲಿ ದೇಶವನ್ನು ವಿಭಜಿಸಿದರು. ಧುರೀಣರಲ್ಲಿ ಮುಕ್ಕಾಲು ಮೂರು ವಾಸಿ ವಕೀಲರು... ಭಾವಕ್ಕಿಂತ ತರ್ಕವೇ ಮುಖ್ಯವಾಯಿತೇನೋ ! ಮೇಜಿನ ಮೇಲಿನ ಭೂಪಟದಲ್ಲಿ ಗೆರೆಗಳನ್ನು ಎಳೆದು ಸರಹದ್ದುಗಳನ್ನು ಗುರುತಿಸಿದಾಗ, ಅದೂ ಧರ್ಮದ ಆಧಾರದ ಮೇಲೆ ಗುರುತಿಸಿದಾಗ, ಇಲ್ಲಿರುವ ಆ ಧರ್ಮದವ ಮತ್ತು ಅಲ್ಲಿರುವ ಈ ಧರ್ಮದವನ ಮನಃಸ್ಥಿತಿಯ ಅರಿವೇ ಇರಲಿಲ್ಲ. ಮನುಷ್ಯ ಯಂತ್ರವಲ್ಲ. ನೆನಪುಗಳ, ಭಾವಗಳ ಮುದ್ದೆ. ಇದು ನನ್ನ ನೆಲ. ನಾನು ನಡೆದಾಡಿದ ಹಾದಿ. ನನ್ನ ಶಾಲೆ. ನಾನು ಈಜಿದ ನದಿ, ಕೆರೆ. ನನ್ನ ಅಪ್ಪ, ಅಮ್ಮ, ಅಜ್ಜಂದಿರ ಜಾಗ. ನನ್ನ ಪೂಜಾ ಸ್ಥಳ. ಇದೆಲ್ಲದರ ಗುರುತು ಮತ್ತು ಹತ್ತು ತಲೆಮಾರುಗಳ ಪ್ರಜ್ಞೆಯಲ್ಲಿ ಅವನ ...