ನೂರು ದೇವರನೆಲ್ಲ ನೂಕಾಚೆ ದೂರ - ಕುವೆಂಪು

ನೂರು ದೇವರನೆಲ್ಲ ನೂಕಾಚೆ ದೂರ ।। ೩।।
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಬಾರ
ನೂರು ದೇವರನೆಲ್ಲ ನೂಕಾಚೆ ದೂರ ।। ೨।।
ಶತಮಾನಗಳು ಬರಿಯ ಜಡಶಿಲೆಯ ಪೂಜಿಸಿ ಆಯ್ತು
ಹಾವ್ಗಳಿಗೆ ಹಾಲೆರದು ಪೋಷಿಸಾಯ್ತು
ಬಿಸಿಲು ಮಳೆ ಗಾಳಿ ಬೆಂಕಿಯನೆಲ್ಲ ಬೇಡಿ ಆಯ್ತು
ದಾಸರನು ಪೂಜಿಸಿಯೇ ದಾಸ್ಯವಾಯ್ತು
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಬಾರ
ನೂರು ದೇವರನೆಲ್ಲ ನೂಕಾಚೆ ದೂರ ।। ೨।।

ಗುಡಿಯೊಳಗೆ ಕಣ್ಮುಚ್ಚಿ ಬೆಚ್ಚಗಿರುವರನೆಲ್ಲ
ಭಕ್ತ ರಕ್ತವ ಹೀರಿ ಕೊಬ್ಬಿಹರನೆಲ್ಲ
ಗಂಟೆ ಜಾಗಟೆಗಳಿಂಬಡಿದು ಕುತ್ತಿಗೆ ಹಿಡಿದು ಕಡಲಡಿಗೆ ತಳ್ಳಿರೈ ಶಂಖದಿಂ ನುಡಿದು
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಬಾರ
ನೂರು ದೇವರನೆಲ್ಲ ನೂಕಾಚೆ ದೂರ ।। ೨।।

ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು
ಜೀವದಾತೆಯಾನಿಂದು ಕೂಗಬೇಕು
ಶಿಲೆಯ ಮೂರ್ತಿಗೆ ನೇಯ್ದ ಕಲೆಯ ಹೊದಿಕೆಯನು ಓಯ್ದು
ಚಳಿಯು ಮಳೆಯಲಿ ನಮೆವ ತಾಯ್ಗೆ ಹಾಕು
ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ ಬಾರ ಬಾರ
ನೂರು ದೇವರನೆಲ್ಲ ನೂಕಾಚೆ ದೂರ ।। ೩।।
ನೂಕಾಚೆ ದೂರ

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು