ನೈಸರ್ಗಿಕ ಸಂಪತ್ತಿನ ಪಾಲು ನಮಗೂ ಕೊಡಿ - ರಾಜೇಂದ್ರ ಪ್ರಸಾದ್



ಒಂದು ಪ್ರದೇಶದ ನೈಸರ್ಗಿಕ ಉತ್ಪತ್ತಿಗಳಾದ ಗಾಳಿ ನೀರು ಬೆಳಕು ಭೂಮಿ ಬಿಸಿಲು ಇವೆಲ್ಲವೂ ಆಯಾ ಪ್ರದೇಶದ ಸ್ವತ್ತು. ಅವುಗಳ ಬಳಕೆಯ ಪೂರ್ಣ ಹಕ್ಕು ಆಯಾ ಪ್ರದೇಶದ ಪಶು-ಪ್ರಾಣಿಗಳದ್ದು ಮನುಷ್ಯನನ್ನೂ ಸೇರಿಸಿ. ಇನ್ನೂ ಸಂವಿಧಾನದ ಆಧಾರದಲ್ಲಿ ಹೇಳುವುದಾದರೆ ಇವುಗಳನ್ನು ಅನುಭೋಗಿಸಿ ಬದುಕುವುದು ಮನುಷ್ಯನ ಮೂಲಭೂತ ಹಕ್ಕು.

ಈವಾಗ ನಿರ್ಧಿಷ್ಟ ಪ್ರದೇಶದ ಜನ ತಮ್ಮ ನೆಲದ್ಲಲಿ ಬಿದ್ದ, ಹರಿದು ಬಂದ ನೀರನ್ನು ಕೃಷಿ ಮತ್ತು ಕುಡಿಯುವ ನೀರಿಗಾಗಿ ಸಂಗ್ರಹಿಸಿಕೊಳ್ಳುವುದು ತಪ್ಪೇ? ಹಾಗೆ ಸಂಗ್ರಹಿಸಿದ ನೀರನ್ನು ಮತ್ತೊಂದು ಪ್ರದೇಶದ ಕೃಷಿಗಾಗಿ ನಾವೇ ಜಾರಿಗೊಳಿಸಿಕೊಂಡ ಪ್ರಜಾಪ್ರಭುತ್ವ ವ್ಯವಸ್ಥೆಯ ಉನ್ನತ ಸ್ಥಾನಗಳು ಕಸಿದುಕೊಳ್ಳುವುದು, ಅದನ್ನು ಆದೇಶವೆಂದು ಜಾರಿಗೊಳಿಸುವುದು ನಮಗಿರುವ ಮೂಲಭೂತಹಕ್ಕನ್ನು ಉಲ್ಲಂಘಿಸಿದಂತೆ ಆಗುವುದಿಲ್ಲವೇ ?!

ಕಾವೇರಿಯ ನೀರನ್ನು ನಾವು ತಮಿಳುನಾಡಿಗೆ ಬಿಟ್ಟರೆ

* ತಮಿಳುನಾಡು ನಮಗೆ ಉಚಿತ ವಿದ್ಯುತ್ ಕೊಡುತ್ತದೆಯೇ ? ವಿದ್ಯುತ್ ಉತ್ಪತ್ತಿಯಾಗುವುದು ನೈಸರ್ಗಿಕ ಮೂಲಗಳಿಂದಲೇ ತಾನೇ!

* ಉಚಿತವಾಗಿ ತೂತುಕುಡಿಯಿಂದ ಕರ್ನಾಟಕಕ್ಕೆ ಬೇಕಾದ ಉಪ್ಪನ್ನು ಉಚಿತವಾಗಿ ಸರಬರಾಜು ಮಾಡುತ್ತದೆಯೇ! ಉಪ್ಪಿನ ಮೂಲ ಸಮುದ್ರ.

*ಕಾವೇರಿ ನೀರಿನ ಬಳಕೆ ಮಾಡುವ ತಮಿಳುನಾಡಿನ ಪ್ರದೇಶಗಳಲ್ಲಿ ಸಂಗ್ರಹವಾಗುವ ಭೂಕಂದಾಯದಲ್ಲಿ ನಮಗೆ ಭಾಗ ಕೊಡುತ್ತದೆಯೇ?!

* ಕಾವೇರಿ ನದೀ ಮುಖಜ ಭೂಮಿಯಲ್ಲಿ ಇದೆ ಎನ್ನಲಾಗುತ್ತಿರುವ ತೈಲ ಮತ್ತು ನೈಸರ್ಗಿಕ ನಿಕ್ಷೇಪಗಳ ಆದಾಯದಲ್ಲಿ ಕರ್ನಾಟಕಕ್ಕೆ ಎಷ್ಟು ಪಾಲು ಕೊಡಲು ಸಿದ್ದವಿದೆ ?!

* ಮಾನವೀಯತೆ ಆಧಾರದಲ್ಲಿ ಕೃಷ್ಣಾನದಿಯಿಂದ ಪ್ರತಿವರ್ಷ 5 ಟಿ‌ಎಮ್‌ಸಿ ನೀರನ್ನು ಕುಡಿಯಲು ಚೆನ್ನೈ ನಗರಕ್ಕೆ ಕೊಡುತ್ತೇವಲ್ಲ. ಅದಕ್ಕೆ ಪ್ರತಿಯಾಗಿ ಕಾವೇರಿಯಿಂದ 5 ಟಿ‌ಎಮ್‌ಸಿ ನೀರನ್ನು ಬೆಂಗಳೂರು ನಗರಕ್ಕೆ ಕೊಡಿಸಲು ಸಾಧ್ಯವೇ?!

ಹೇಳಿ ತಮಿಳುನಾಡು /ಪುದುಚೇರಿ / ಕೇಂದ್ರ ಸರಕಾರಗಳೇ ಅಥವಾ ಆದೇಶ ಕೊಡುವ ವ್ಯವಸ್ಥೆಗಳೇ ಕರ್ನಾಟಕಕ್ಕೆ ತಮಿಳಿನಾಡು / ಪುದುಚೇರಿಯ ಯಾವ ನೈಸರ್ಗಿಕ ಸಂಪತ್ತಿನಲ್ಲಿ ನಮಗೆ ಪಾಲು ಕೊಡಲು ಮತ್ತು ಕೊಡಿಸಲು ತಯಾರಿದ್ದೀರಿ?
ಅದನ್ನು ಕೊಡಲು, ಕೊಡಿಸಲು ಸಾಧ್ಯವಾಗದೇ ಇದ್ದಲ್ಲಿ ಕರ್ನಾಟಕದ ಜನರ ನೈಸರ್ಗಿಕ ಜಲಸಂಪತ್ತನ್ನು ಕೇಳುವ ಯಾವ ನೈತಿಕತೆ ಅಥವಾ ಹಕ್ಕು ನಿಮಗೆ ಇದೆ! ಕಾನೂನಿನ ಮೂಲಕ ನಡೆಯುತ್ತಿರುವ ಇದು ದೌರ್ಜನ್ಯವಲ್ಲವೇ, ಇದು ಶೋಷಣೆಯಲ್ಲವೇ?!

ಸಂಪತ್ತು ಪಾಲುಕೊಡಲಾಗದ ಸರಕಾರಗಳು ಹಣ ಕೊಟ್ಟು ನೀರನ್ನು ಕೊಂಡುಕೊಳ್ಳಿ. ಅಥವಾ ಬೇರೆಡೆ ನೀರು ಹುಡುಕಿಕೊಳ್ಳಿ.

___

ಕೋರ್ಟ್ ಗಳಲ್ಲಿ ನಮ್ಮ ನೈಸರ್ಗಿಕ ಸಂಪತ್ತನ್ನು ಬಳಸಿಕೊಳ್ಳುವ ಕುರಿತು ನೆಟ್ಟಗೆ ವಾದಿಸಲು, ಪುರಾವೆ ಒದಗಿಸಲು ಸಾಧ್ಯವಿಲ್ಲದ ಸರಕಾರಗಳು, ಸಂಸದರು, ಶಾಸಕರು ಇದ್ದರೆಷ್ಟು ಹೋದರೆಷ್ಟು?!
ಕುಡಿಯುವ ನೀರು ಕೊಡಿಸಲು ಸಾಧ್ಯವಾಗದ ನಿಮ್ಮಂತಹ ಪ್ರತಿನಿಧಿಗಳನ್ನು ಇಟ್ಟುಕೊಂಡು ಏನು ಮಾಡೋಣ?
ಒಕ್ಕೂಟವ್ಯವಸ್ಥೆಯಲ್ಲಿ ಪ್ರಧಾನಿಯೊಬ್ಬರು ಮಧ್ಯಸ್ಥಿಕೆವಹಿಸಲು ಹಿಂಜರಿಯುತ್ತಾರೆ, ಬರೆದ ಪತ್ರಗಳಿಗೆ ಉತ್ತರಕೊಡದೇ ಅದೇ ವ್ಯವಸ್ತೆಗೆ ದ್ರೋಹವೆಸಗುತ್ತಾರೆ. ಒಂದು ಕಠಿಣ ನಿರ್ಧಾರ ಕೈಗೊಳ್ಳಲು ಅಶಕ್ತವಾದ ಮುಖ್ಯಮಂತ್ರಿ, ತಮ್ಮ ಭಾಗದ ಜನರ ನೀರಿಗೆ ಓಡಾಡಲು ಸಾಧ್ಯವಾಗದ ಅಪ್ರಯೋಜಕ ಸಂಸದರು ಮತ್ತು ಶಾಸಕರು, ಕಡೆಗೆ ಏನು ಮಾಡಬೇಕು ಅಂತಲೂ ತಿಳಿಯದ ಹೀಗೆ ಬಡಬಡಿಸಿಕೊಂಡು ಕುಳಿತೇ ಇರುವ ನಾವು ನಾಗರೀಕರು!

ಕನ್ನಡನಾಡಿನ ಜನ ರಾಜಕೀಯವಾಗಿ ಒಂದು ಬದಲಾವಣೆಯನ್ನಂತೂ ಮಾಡಿಕೊಳ್ಳಲೇಬೇಕಿದೆ. ಈಗ ತುರ್ತಾಗಿ. ಅದು ಕನ್ನಡ ಕೇಂದ್ರಿತ ಸದೃಢ ರಾಜಕಾರಣ. ಸದೃಢ ರಾಜಕಾರಣವೊಂದೇ ನಮಗೆ ನ್ಯಾಯ ಒದಗಿಸಬಲ್ಲುದು. ಈ ರಾಷ್ಟ್ರಿಯವಾದಿಗಳು , ರಾಷ್ಟ್ರೀಯ ಪಕ್ಷಗಳು ನಮ್ಮ ಪಾಲಿನ ಯಮಧೂತರು. ಕನ್ನಡ ಸ್ವಾಭಿಮಾನವನ್ನು ನಾವು ರಾಜಕೀಯವಾಗಿ ಬೆಳೆಸಿಕೊಳ್ಳಬೇಕಿದೆ. ಅದು ನಮಗಿರುವ ಒಂದೇ ಮಾರ್ಗ.

Comments

Popular posts from this blog

ಮುದ್ದಣ ಮನೋರಮೆಯ ಸಲ್ಲಾಪ - ಶ್ರೀವತ್ಸ ಜೋಶಿ

ಕನ್ನಡ ಕಾದಂಬರಿ ಮತ್ತು ಪುಸ್ತಕಗಳು

ಮೂಡುವನು ರವಿ ಮೂಡುವನು - ಪಂಜೆ ಮಂಗೇಶ ರಾಯರು