Saturday, December 7, 2013

ಚಿಗುರು

ಮಿಂಚೆಂದರೆ ಮೋಡಕೆ ಮೀಸಲೆಂಬ
ನಂಬಿಕೆ ಸುಳ್ಳಾಯಿತು ಅಂದು
ನನ್ನೊಳಗೂ ಸಂಚಲಿಸ ಬಹುದು
ಗೊತ್ತಾಯಿತು ಆಕೆಯ ಕಂಡು

ಗೆಳೆತನದಲಿ ಮೊದಲಾಯಿತು ಪರಿಚಯ
ಪ್ರೇಮಾಂಕುರದ ಪಥದಲ್ಲಿ
ನಿದ್ದೆಗೂ ಮೀಸಲಿಡದ ಕನವರಿಕೆಗಳೇ
ಕಾಮನೆ ಜೊತೆಯಲ್ಲಿ

ಚಿಗುರಿದ ಮೀಸೆಗೂ ಕಾರಣವಿತ್ತು
ಕಾಣುವ ಹಂಬಲ ಆಕೆಯನು
ಒಂದೇ ಸಮನೆ ಗೊಂದಲ ಮನಸಲಿ
ಹೃದಯವೂ ಬೆಂಬಲಿಸಿತು ತಾನು

ಓದಿನ ಗೋಜಲಿ ಮೂಡಿದ ಅಂತರ
ದುಃಸ್ವಪ್ನವೇ ಅನಿಸಿರಬಹುದು
ಪಾಠಗಳೆಲ್ಲವೂ ಅವಳದೇ ಕುರಿತು
ಅರ್ಥದಲೊಳಾರ್ಥವಿರಬಹುದು

ನಕ್ಕರೆ ನವರಾತ್ರಿಯ ದೀಪೋತ್ಸವ
ಮಾತಿಗೆ ಸಿಕ್ಕರೆ ಸಕ್ಕರೆಯು
ಪ್ರೌಢತೆಯ ಮೂರುತಿಯಾಗಿದ್ದಳು
ನಾ ಮೆರೆಸಿದ ರಥ ಸಾರಥಿಯೂ

ಆಕೆ ಗಿರಿಜೆ, ಶಂಕರನಾಗೋ
ಯೋಗ್ಯತೆ ನಾ ಪಡೆದಿರಲಿಲ್ಲ
ನನ್ನೊಳ ಪ್ರೇಮ, ನುಡಿಸದ ಕೊಳಲು
ಆಕೆಗೆ ಕೇಳಿಸಲಾಗಿಲ್ಲ !!

                                 -- ರತ್ನಸುತ 

No comments:

Post a Comment

ಹೀಗೂ ಇದ್ದರು ನಮ್ಮ ಹೆಮ್ಮೆಯ ಕನ್ನಡ ಸಾಹಿತಿಗಳು - ಸಂಗ್ರಹ

ಗಳಗನಾಥರು ಗಳಗನಾಥರು ಕನ್ನಡದ ಪುಸ್ತಕಗಳನ್ನು ತಲೆಯಲ್ಲಿ ಹೊತ್ತುಕೊಂಡು ಮಾರಾಟ ಮಾಡುತ್ತಿದ್ದ ಪುಣ್ಯಾತ್ಮರು ಇವರು.  ನಿಮ್ಮ ಮನೆಯಲ್ಲಿ ಲಕ್ಷ್ಮಿ ಇದ್ದರೆ ಸಾಲದು, ನಾನು ಸರ...