ನಿನ್ನ ಹೊರತು ಇನ್ಯಾರಿಗೂ......

ಎಂದೆಂದೂ ಒಂದು ಸೇರಲಾರೆವೆಂದು ನಿರೀಕ್ಷೆಯ ಹಳಿಗಳಿಗೆ ಅರಿವಿದ್ದರೂ..... ಅದರ ಮೇಲೆ ಬಾಳಬಂಡಿ ನಿಲ್ಲದೆ ಓಡಲೆ ಬೇಕು, ಸಂಕಟ ಸಂತಸದ ಬೋಗಿಗಳನ್ನ ಸರಿಸಮನಾಗಿ ಎಳೆದೊಯ್ಯಲೇಬೇಕು.... ತನ್ನ ನಿಟ್ಟುಸಿರಿದ್ದರೂ ನೂರಾರು ತಾನು ಬಿಡುತ್ತಿದ್ದರೂ ಹಾದಿಯುದ್ದ ಅರ್ತನಾದದ ಬಿಸಿಯುಸಿರು/ ಆಗಾಗ ಸಂಭ್ರಮದ ಸೀಟಿ ಹೊಡೆಯುವ ಮನಸಾಗೋದೂ ಹೌದು ಎಲ್ಲೆ ಮೀರಿದಾಗ ಖುಷಿ.... ವಿಧಿ ಅಘಾತದ ಸರಪಳಿಯನ್ನ ಎಳೆದು ಒತ್ತಾಯವಾಗಿ ನಿಲ್ಲಿಸಲೂಬಹುದು, ತುರ್ತು ಅಘಾತದ ಸರಿಗೆ ಎಳೆದಾಗ ನಿಲ್ಲಿಸದೆ ಮುನ್ನುಗ್ಗುವಂತಿಲ್ಲ ಅಂತಿಮ ನಿಲ್ದಾಣ ಎಂದಿಗೂ ಸೇರೆನೆಂಬ ಹಟ ಹಿಡಿಯುವಂತಿಲ್ಲ..... ವಿಧಿ ಹೊಡೆದಟ್ಟಿದಲ್ಲಿ ಹೋಗಲೆ ಬೇಕಾದ ನಿರ್ಜೀವ ಯಂತ್ರಕ್ಕೆ ಸಮಾನ ಮನಸು ಮತ್ತೆ ಒಂದಾಗಲಾರೆವು ಎಂಬ ಖಚಿತ ಸುಳಿವಿರುವಾಗ ಅದೆಂದೋ ಕರಟಿ ಹೋಗಿವೆ ಕಣ್ಣೊಳಗಿನ ಕೋಟಿ ಕನಸು// ಕನಸುಗಳಿಲ್ಲದ ಕುರುಡು ಹಾದಿಯಲ್ಲಿ ಸತ್ತ ಮನಸಿನ ಅಂತಿಮಯಾತ್ರೆ ಸಾಗಿದ ಬರಡು ಬೀದಿಯಲ್ಲಿ.... ಒಂಟಿತನವನ್ನು ಅನುಕ್ಷಣ ಮಾರುವ ಮುರುಕು ಮೌನದ ಅಂಗಡಿ ಅನುಗಾಲವೂ ತೆರೆದೆ ಇದೆ, ಪ್ರತಿ ಸಂಜೆ ಕನವರಿಸುವ ಬೆಳಕಿನ ಕನಸು ಕಡು ಕತ್ತಲಿನಲ್ಲಿಯೆ..... ನಿರಾಸೆಯಲ್ಲಿ ಕೊನೆಗೊಳ್ಳುತ್ತದೆ/ ಉದುರಿದ ಕನಸಿನ ಪಕಳೆಗಳೆಲ್ಲ ಒಲವ ಗಿಡಕ್ಕೇನೆ ಗೊಬ್ಬರವಾಗಿ..... ತನ್ನ ಜಾಗದಲ್ಲಿ ಮತ್ತೊಂದು ಸುಮವರಳಿದ್ದನ್ನು ಕಂಡು ಒಳಗೊಳಗೆ ನರಳುತ್ತಲೆ ನಗುವ ನಟಿಸುತ್ತಿದೆ, ನಿರ್ಮಲ ಮನಸಿಗೆ ಬಿದ್ದ ಕಂಬನಿ...