ಇರಲಾರದ ಭೂತ
ಗಂಡ-ಹೆಂಡತಿ ತುಂಬ ಅನ್ಯೋನ್ಯವಾಗಿದ್ದರು. ಮದುವೆಯಾಗಿ ಐದು ವರ್ಷವಾಗಿದ್ದರೂ ನವವಿವಾಹಿತರಂತೆಯೇ ಇದ್ದರು. ಇದ್ದಕ್ಕಿದ್ದಂತೆ ಹೆಂಡತಿಗೆ ಏನೋ ಕಾಯಿಲೆ ಬಂದಿತು. ಆಕೆಗೆ ತಾನು ಸತ್ತು ಹೋಗುತ್ತೇನೆ ಎಂಬ ಭಯ ಬಂದಿತು. ಗಟ್ಟಿಯಾಗಿ ಗಂಡನ ಕೈಹಿಡಿದು ಹೇಳಿದಳು, `ರೀ, ಅಕಸ್ಮಾತ್ ನಾನು ಸತ್ತು ಹೋದರೆ ನೀವು ಮತ್ತೆ ಯಾರನ್ನೂ ಮದುವೆಯಾಗಬಾರದು, ಯಾರನ್ನೂ ಪ್ರೀತಿಸಬಾರದು. ನನ್ನ ನೆನಪಿನಲ್ಲೇ ಉಳಿದುಬಿಡಬೇಕು. ಒಂದು ವೇಳೆ ನೀವು ಬೇರೆ ಮದುವೆಯಾದರೆ, ಮತ್ತೆ ಯಾವ ಹುಡುಗಿಯನ್ನು ಪ್ರೀತಿಸಿದರೆ ನಾನು ದೆವ್ವವಾಗಿ ನಿಮ್ಮನ್ನು ಕಾಡುತ್ತೇನೆ.` ಇದು ಕೋರಿಕೆಯೋ ಬೆದರಿಕೆಯೋ ತಿಳಿಯದೇ ಗಂಡ ತಲೆ ಅಲ್ಲಾಡಿಸಿ ಮಾತುಕೊಟ್ಟ. ಪಾಪ! ಹೆಂಡತಿ ಕೆಲವೇ ದಿನಗಳಲ್ಲಿ ಸತ್ತು ಹೋದಳು. ಗಂಡನಿಗೆ ತುಂಬ ದುಃಖವಾಯಿತು. ಅವಳು ಹೇಳಿದಂತೆ ಅವಳ ನೆನಪಿನಲ್ಲೇ ಕೆಲಕಾಲ ಕಳೆದ. ಬೇರೆ ಯಾವ ಯುವತಿಯತ್ತ ನೋಡಲೇ ಇಲ್ಲ. ನಂತರ ಒಂದು ವಿಶೇಷ ಗಳಿಗೆಯಲ್ಲಿ ಸುಂದರಿಯೊಬ್ಬಳ ಪರಿಚಯವಾಯಿತು. ಆಕೆ ತುಂಬ ಆಕರ್ಷಕವಾಗಿದ್ದಾಳೆ ಹಾಗೂ ಬುದ್ಧಿವಂತೆಯಾಗಿದ್ದಾಳೆ ಎನ್ನಿಸಿತು ಆತನಿಗೆ. ಇವನೂ ಬುದ್ಧಿವಂತ ಹಾಗೂ ತಿಳುವಳಿಕೆಯುಳ್ಳವನು ಎನ್ನಿಸಿತು ಆಕೆಗೆ. ಪರಿಚಯ ಪ್ರೇಮವಾಗಿ ಬದಲಾಯಿತು. ಇಬ್ಬರೂ ವಿವಾಹವಾಗಲು ತೀರ್ಮಾನ ಮಾಡಿದರು. ಮದುವೆಯ ನಿಶ್ಚಿತಾರ್ಥ ನಡೆಯಿತು. ಅಂದೇ ರಾತ್ರಿ ಮೊದಲಿನ ಹೆಂಡತಿಯ ದೆವ್ವ ಬಂದು ಇವನನ್ನು ಮಾತನಾಡಿಸಿತು, ಇವನನ್ನು ಕೆಣಕಿತು. ಅದರದೊಂದು ವ...