ಕತ್ತೆ ಎಂಬ ಹರಿಕಾರನ ಕ್ರಾಂತಿ - ಕೃಪಾಕರ ಸೇನಾನಿ
ಹೆದ್ದಾರಿಯ ಪಕ್ಕದಲ್ಲೇ ಇದ್ದ ಆ ಊರಿನಲ್ಲಿ ಬಡತನ, ಮೂಢನಂಬಿಕೆ ಮತ್ತು ಅಜ್ಞಾನಗಳು ಯಥೇಚ್ಛವಾಗಿ ಮನೆಮಾಡಿದ್ದವು. ರಾಜಕೀಯವಾಗಿ ಪ್ರಭಾವಿಗಳಾಗಿದ್ದ ಒಂದೆರಡು ಮನೆಗಳ ಹೊರತಾಗಿ, ಅಲ್ಲಿದ್ದ ಮಣ್ಣಿನ ಮನೆಗಳಾವುವೂ ಸುಸ್ಥಿತಿಯಲ್ಲಿರಲಿಲ್ಲ. ಎಲ್ಲಾ ಜಾತಿಯ ಜನರ ಆರ್ಥಿಕ ಪರಿಸ್ಥಿತಿ ಮತ್ತು ಅವರ ಮನೆಗಳ ಪರಿಸ್ಥಿತಿ ಹೆಚ್ಚು ಕಡಿಮೆ ಒಂದೇ ತೆರನಾಗಿತ್ತು. ಆದರೆ ಎಲ್ಲೆಂದರಲ್ಲಿ ಜಾತಿ ಸೂಚಕ ಸಾಂಕೇತಿಕ ಫಲಕಗಳು, ಬೀದಿಗೊಂದರಂತೆ ಹೆಂಡದಂಗಡಿ ಮತ್ತು ದೇವಸ್ಥಾನಗಳು ಇದ್ದವು. ಅಲ್ಲಿ ಜನಸಂಖ್ಯೆಗೇನು ಕೊರತೆ ಇರಲಿಲ್ಲವಾದರೂ, ಜನರಿಗಿಂತ ಜಾನುವಾರುಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದವು. ಅವೆಲ್ಲವು ಕಾಡಿನಲ್ಲಿ ಪುಕ್ಕಟ್ಟೆ ಮೇಯ್ದು ಬರುತ್ತಿದ್ದುದರಿಂದ, ಅವು ಹಿಂಡುತ್ತಿದ್ದ ಅರ್ಧ ಲೀಟರ್ ಹಾಲು ಕೂಡ ಅವುಗಳ ಮಾಲೀಕರಿಗೆ ಲಾಭದಾಯಕ ಎಂಬಂತೆ ಕಾಣುತ್ತಿತ್ತು. ಊರ ಸುತ್ತಲೂ ಸಾಕಷ್ಟು ಒಣಭೂಮಿ ಇತ್ತಾದರೂ, ಕಡಿಮೆ ಮಳೆ ಬೀಳುವ ಪ್ರದೇಶವಾದ್ದರಿಂದ ವ್ಯವಸಾಯಕ್ಕೆ ಅಷ್ಟೇನು ಅನುಕೂಲಕರವಾಗಿರಲಿಲ್ಲ. ಹಾಗಾಗಿ ಸೆಗಣಿ ಸಂಗ್ರಹಿಸಿ ಗೊಬ್ಬರ ಮಾಡಿ ಮಾರುವುದು, ಕಾಡಿನಿಂದ ಸೌದೆ ಮತ್ತು ಕಳ್ಳ ನಾಟಗಳನ್ನು ತಂದು ಹತ್ತಿರದ ಪಟ್ಟಣಕ್ಕೆ ಮಾರುವುದು ಅವರ ಮುಖ್ಯ ಕಸುಬಾಗಿತ್ತು. ಆ ಊರಿನಲ್ಲಿ ಮೂವರು ನಕಲಿ ಡಾಕ್ಟರ್‌ಗಳು ವೈದ್ಯಕೀಯ ವೃತ್ತಿ ನಡೆಸಿದ್ದರು. ಎಲ್ಲಾ ಬಗೆಯ ಸಣ್ಣ ಪುಟ್ಟ ಕಾಯಿಲೆಗಳಿಗೂ ಅವರು ಚುಚ್ಚುಮದ್ದನ್ನು ಪ್ರಯೋಗಿಸುತ್ತಿದ್ದುದರಿಂದ ರೋಗಿಗಳಿಗೆ ಅವರ ಬ...