ಆಡಂಬರದ ಪೂಜೆ
ಕುರುಕ್ಷೇತ್ರದ ಯುದ್ಧ ಮುಗಿದು ಯುಧಿಷ್ಠರ ಚಕ್ರವರ್ತಿಯಾಗಿದ್ದಾನೆ. ದೇಶದಲ್ಲಿ ಶಾಂತಿ ಇದೆ. ಇನ್ನು ಮುಂದೆ ಯುದ್ಧದ ಭೀತಿ ಇಲ್ಲ. ಯುದ್ಧ ಮಾಡಲು ಯಾರೂ ಉಳಿದೇ ಇಲ್ಲ. ಅರ್ಜುನನಿಗೆ ತಾನು ಯುದ್ಧದಲ್ಲಿ ಮಾಡಿದ ಸಾಧನೆಯ ಬಗ್ಗೆ ಗರ್ವ ಬಂದಿದೆ. ತಾನಿಲ್ಲದಿದ್ದರೆ ಪಾಂಡವರು ಗೆಲ್ಲುವುದು ಸಾಧ್ಯವಿತ್ತೇ? ತಾನು ಈಶ್ವರನನ್ನು ಒಲಿಸಿಕೊಂಡು ಪಡೆದ ಪಾಶುಪತಾಸ್ತ್ರದಿಂದಲೇ ವಿಜಯ ಸಾಧ್ಯವಾದದ್ದು ಎಂದು ಬಲವಾಗಿ ನಂಬಿದ್ದ. ಪರಶಿವನ ಬಗ್ಗೆ ತನಗಿದ್ದ ಗೌರವವನ್ನು ತೋರಿಸಲು ದಿನಾಲು ಭರ್ಜರಿಯಾಗಿ ಪೂಜೆ ಮಾಡುತ್ತಿದ್ದ. ಅವನು ಪೂಜೆಗೆ ಕುಳಿತರೆ ಆ ಕರ್ಪೂರ, ಊದುಬತ್ತಿಗಳ ಘಮಲೇನು? ಅದೆಷ್ಟು ಆರತಿಗಳು, ಅದೆಷ್ಟು ಬಂಡಿ ಬಂಡಿ ಹೂಗಳು? ಅರ್ಜುನ ಪೂಜೆ ಮಾಡುವಾಗ ಅವನ ಸೇವಕರಿಗೆ ಈ ವಸ್ತುಗಳನ್ನು ಒದಗಿಸಿ ಒದಗಿಸಿ ಪ್ರಾಣ ಹೋಗುತ್ತಿತ್ತು. ಇಡೀ ದೇಶದ ತುಂಬೆಲ್ಲ ಅರ್ಜುನನ ಪೂಜೆಯ ವೈಖರಿಯ ಮಾತು ಹರಡಿತ್ತು. ಅದು ಪ್ರಚಾರವಾದಷ್ಟೂ ಅರ್ಜುನನ ಅಭಿಮಾನ ಹೆಚ್ಚಾಗುತ್ತಿತ್ತು, ಮತ್ತೆ ಪೂಜೆಯ ಆಡಂಬರ ಬೆಳೆಯುತ್ತಿತ್ತು. ಆದರೆ ಭೀಮ ಈ ತರಹದ ಪೂಜೆಯನ್ನು ಮಾಡುತ್ತಿರಲಿಲ್ಲ. ಬಹಳ ಹೆಚ್ಚೆಂದರೆ ಊಟಕ್ಕೆ ಕೂಡ್ರುವ ಮುಂದೆ ಐದು ನಿಮಿಷ ಕಣ್ಣು ಮುಚ್ಚಿ ಧ್ಯಾನ ಮಾಡಿ ಓಂ ಶಿವಾಯ ನಮಃ ಎನ್ನುತ್ತಿದ್ದ. ಅದನ್ನು ನೋಡಿ ಅರ್ಜುನ ತಿರಸ್ಕಾರದ ನಗೆ ನಗುತ್ತಿದ್ದ. ತನ್ನ ಪೂಜೆಯ ಸಂಭ್ರಮದ ಬಗ್ಗೆ ಅರ್ಜುನನಿಗೆ ಬಂದ ಅಹಂಕಾರದ ಸೂಚನೆ ಕೃಷ್ಣನಿಗೆ ದೊರ...